ಬೆಂಗಳೂರು: ರಾಜ್ಯದಲ್ಲಿ ಅಂದಾಜು 3-3.5 ಕೋಟಿ 18 ವರ್ಷ ಮೇಲ್ಪಟ್ಟವರಿದ್ದಾರೆ. ಒಂದು ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಆರ್ಡರ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀರಂ ಇನ್ಸ್ಟಿಟ್ಯೂಟ್ 1 ತಿಂಗಳಲ್ಲಿ 5-6 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುತ್ತಿದೆ. ಭಾರತ್ ಬಯೋಟೆಕ್ 1-1.5 ಕೋಟಿ ಡೋಸ್ ಉತ್ಪಾದನೆ ಮಾಡುತ್ತಿದೆ. ರಷ್ಯಾದ ಸ್ಪುಟ್ನಿಕ್ ಲಸಿಕೆ ಕೂಡಾ ಬರುತ್ತಿದೆ ಎಂದು ಮಾಹಿತಿ ನೀಡಿದರು.
ಕೋವಿನ್ ಪೋರ್ಟ್‌ನಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಲಸಿಕೆ ಮೇ.1 ರಿಂದ ಆರಂಭವಾಗಬೇಕಿತ್ತು. ಆದರೆ ಲಸಿಕೆ ಕಂಪನಿಯಿಂದ ರಾಜ್ಯ ಸರ್ಕಾರಕ್ಕೆ ಅಧಿಕೃತ ಮಾಹಿತಿ ಬಂದಿಲ್ಲ. ಹಾಗಾಗಿ ನಾಳೆ (ಮೇ.1) ಯಾರೂ ಕೂಡಾ 18-44 ವರ್ಷದವರು ಸರ್ಕಾರದಿಂದ ಅಧಿಕೃತ ಮಾಹಿತಿ ನೀಡುವವರೆಗೂ ಯಾರು ಆಸ್ಪತ್ರೆ ಬಳಿ ಹೋಗಬಾರದು ಎಂದರು.
ಇದನ್ನೂ ಓದಿ:ನಿವೃತ್ತ ನ್ಯಾಯಮೂರ್ತಿಯೊಬ್ಬರು ರಾಜ್ಯಪಾಲರ ಹುದ್ದೆಗಾಗಿ ಲಂಚ ನೀಡಿರುವುದು ದುರದೃಷ್ಟಕರ!
ಕರ್ಫ್ಯೂ ಇದ್ದರೂ ಜನರ ಬೇಕಾಬಿಟ್ಟಿ ಓಡಾಟದ ಬಗ್ಗೆ ಮಾತನಾಡಿದ ಸಚಿವ ಸುಧಾಕರ್, ನಿಮ್ಮ ನಿಮ್ಮ ಜವಬ್ದಾರಿಯನ್ನು ಪಾಲನೆ ಮಾಡಿ. ಮಾರ್ಗಸೂಚಿಯನ್ನು ನಾವು ಕೊಟ್ಟಿದ್ದೇವೆ. ಜನ ಅದನ್ನು ಪಾಲನೆ ಮಾಡಬೇಕು ಎಂದರು.
ಕೇಂದ್ರದಿಂದ ನಮಗೆ ಬಂದಿರುವುದು 99.5 ಲಕ್ಷ ಡೋಸ್ ವ್ಯಾಕ್ಸಿನ್. 99 ಲಕ್ಷದಲ್ಲಿ 95 ಲಕ್ಷ ಲಸಿಕೆ ಕೊಟ್ಟಿದ್ದೇವೆ. ಶೇ.1.4 ದಷ್ಟು ವ್ಯರ್ಥವಾಗಿದೆ. ಹೆಚ್ಚಿನ ಲಸಿಕೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದರು.