ಬೆಳ್ತಂಗಡಿ: ಎತ್ತಿನಹೊಳೆ ಯೋಜನೆಗೆ ಸರಕಾರ ಮೀಸಲಿಟ್ಟ 12 ಸಾವಿರ ಕೋಟಿ ರೂ. ನೀರಲ್ಲಿ ಮಾಡಿದ ಹೋಮದಂತೆ. ಈ ಹಣ ವ್ಯರ್ಥವಾಗುತ್ತದೆ. ಎತ್ತಿನ ಹೊಳೆ ಯೋಜನೆಯಿಂದ ಜನರಿಗೆ ಯಾವುದೇ ಉಪಯೋಗವಾಗುವುದಿಲ್ಲ ಎಂದು ಸರಕಾರಕ್ಕೆ ಮನವರಿಕೆ ಮಾಡಿದ್ದೆ. ಈಗಲೂ ನನ್ನ ಮಾತಿಗೆ ನಾನು ಬದ್ಧ, ಎತ್ತಿನ ಹೊಳೆ ಯೋಜನೆಗೆ ವಿರೋಧವಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ಗುರುನಾರಾಯಣ ಸಭಾ ಭವನದಲ್ಲಿ ನಾಗರಿಕ ಸೇವಾ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ನಾಗರೀಕ ಸೇವಾ ಬಳಗಗಳ ಸಕ್ರಿಯ ಸದಸ್ಯರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಬಡವರಿಗೆ ಮಂಜೂರಾಗುವ ಕುಮ್ಕಿ ಜಮೀನು ಮಂಜೂರಾತಿಗೆ ಸಚಿವ ಕಾಗೋಡು ತಿಮ್ಮಪ್ಪ ಜತೆ ನಾನೂ ಕೈಜೋಡಿಸಿದ್ದೇನೆ. ಈ ಹೋರಾಟಕ್ಕೆ ಜಯವಾಗಬೇಕಿದೆ. ಅರಣ್ಯವಾಸಿಗಳಿಗೆ ಭೂಮಿ ಸಿಗಲು ಶ್ರಮಿಸುತ್ತಿದ್ದೇನೆ. ಸಮಾಜದ ಅಭಿವೃದ್ಧಿಗೆ ಟ್ರಸ್ಟ್‌ಶ್ರಮಿಸುತ್ತಿದೆ. ಇದು ಹೀಗೇ ಮುಂದುವರಿಯಬೇಕು ಎಂದು ಅವರು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸ್ವಯಂ ಸೇವಾಸಂಸ್ಥೆಗಳ ಒಕ್ಕೂಟ ಉಪಾಧ್ಯಕ್ಷ ಎಸ್. ಕುಮಾರ್, ಮೈಕ್ರೋ ಫೈನಾನ್ಸ್‌ನಿಂದ ಜನತೆ ಸಮಸ್ಯೆಗೊಳಗಾಗುವಂತೆ ಅಗಿದೆ. ತುರ್ತಾಗಿ ಸಾಲ ಪಡೆದು ಮುಂದೆ ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಲ್ಲೆಡೆ ಅರಿವು ಮೂಡಿಸುವ ಕೆಲಸಗಳೂ ನಡೆಯುತ್ತಿದ್ದು, ಜನತೆ ಈ ಬಗ್ಗೆ ತಿಳಿದುಕೊಂಡು ಉತ್ತಮ ಜೀವನ ನಡೆಸಬೇಕು. ಜನತೆಗೆ ಪಾರದರ್ಶಕ ಆಡಳಿತಬೇಕಾಗಿದೆ. ಆದ್ದರಿಂದ ಜನತೆ ಈ ಕುರಿತು ಉತ್ತಮ ಆಡಳಿತ ನೀಡುವವರ ಜತೆ ಕೈಜೋಡಿಸಬೇಕು ಎಂದು ತಿಳಿಸಿದರು.
ಜಿ.ಪಂ ಆಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಕೃಷಿಕರ, ದಲಿತರ, ಕೂಲಿಕಾರ್ಮಿಕರ ಬಗೆಗೆ ಕಾಳಜಿ ವಹಿಸುವ ಸಂಸ್ಥೆಗಳು ಹೆಚ್ಚಬೇಕು. ಸರಕಾರಿ ಇಲಾಖೆಗಳಲ್ಲಿ ಸಾರ್ವಜನಿಕರು ಮುಕ್ತವಾಗಿ ತಮ್ಮ ಕೆಲಸಗಳನ್ನು ಮಾಡುವಂತಾಗಬೇಕು ಎಂದು ತಿಳಿಸಿದರು. ಸಾಹಿತಿ ಲಕ್ಷ್ಮೀಶ ತೋಳ್ಪಾಡಿ, ಬಲ ಇಲ್ಲದವರಿಗೆ ಬಲ ತುಂಬುವ ಕಾರ್ಯವನ್ನು ಸಮಾಜದಲ್ಲಿ ಮಾಡಬೇಕಿದೆ. ಮೂಲಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವುದು ಆವಶ್ಯಕ. ಸಮಾಜದ ಅಗತ್ಯತೆಗಳನ್ನು ಮನಗಂಡು ಕಾರ್ಯನಿರ್ವಹಿಸುವ ಕಾರ್ಯ ಎಲ್ಲೆಡೆ ನಡೆಯಬೇಕು ಎಂದು ಹೇಳಿದರು.
ವಿದ್ಯಾ ನಾಯಕ್ ಅಧ್ಯಕ್ಷತೆಯಲ್ಲಿ ಅತಿ ಬಳಕೆ, ದುರ್ಬಳಕೆಯಿಂದ ಬರಿದಾಗುತ್ತಿರುವ ನೀರು- ಕಾಡು ಸಂರಕ್ಷಣೆ ಬಗ್ಗೆ ಶ್ರೀಪಡ್ರೆ ಪ್ರಬಂಧ ಮಂಡನೆ ಮಾಡಿದರು. ರಾಜಸ್ಥಾನದ ಜನತೆ ಬರದ ಜತೆ ಬದುಕು ನಡೆಸಲು ಕಲಿತಿದ್ದಾರೆ. ಮಹಾರಾಷ್ಟ್ರದ ಹಲವು ಜಿಲ್ಲೆಗಳು ಬರಪೀಡಿತವಾಗಿದೆ. ಜಲಪೂರಣ ಕಾರ್ಯಕ್ರಮ ಮೂಲಕ ಜಲಸಂರಕ್ಷಣೆ ಎಲ್ಲೆಡೆ ನಡೆಸಬೇಕಿದೆ ಎಂದು ಶ್ರೀ ಪಡ್ರೆ ಅವರು ಹೇಳಿದರು. ಅರಣ್ಯೀಕರಣದ ಮೂಲಕ ಪರಿಸರವನ್ನು ಸೃಷ್ಟಿಸುವ ಕಾರ್ಯ ನಡೆಸಬೇಕು. ಮನೆಯ ಮೇಲೆ ಬಿದ್ದ ನೀರನ್ನು ಮರುಪೂರಣ ಮಾಡಿದರೆ ಅಂತರ್ಜಲ ವೃದ್ಧಿ ನಡೆಸಬಹುದು ಎಂದರು.
ಪ್ರಬಂಧ ಮಂಡನೆ
ಕೃಷಿ ಕಾರ್ಮಿಕರಿಗೆ, ದಲಿತರಿಗೆ ಸರಕಾರಿ ಭೂಮಿ, ಡಿ.ಸಿ. ಮನ್ನಾ ಭೂಮಿ ಹಂಚಿಕೆ ಕುರಿತು ನಾರಾಯಣ ಕಿಲಂಗೋಡಿ, ಸ್ವ ಸಹಾಯ ಸಂಘಗಳ ಮೂಲ ಕಲ್ಪನೆ- ಕಾರ್ಯ ವಿಧಾನ- ಸ್ವಾಯತ್ತತೆ ಕುರಿತು ಹೇಮಂತ ಭಿಡೆ ಪ್ರಬಂಧ ಮಂಡನೆ ಮಾಡಿದರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು. ಎನ್‌ಎಸ್‌ಟಿ ಕಾರ್ಯದರ್ಶಿ ಜಯ ಪ್ರಕಾಶ್‌ಭಟ್ ಸಿ. ಎಚ್. ಸ್ವಾಗತಿಸಿದರು. ಸಮಾರೋಪ ಸಮಾರಂಭವನ್ನು ದ.ಕ. ಪರಿಸರಾಸಕ್ತರ ಒಕ್ಕೂಟದ ಅಧ್ಯಕ್ಷ ಉಮೇಶ ನಿರ್ಮಲ್ ನಿರ್ವಹಿಸಿದರು.
ಸಮಾರೋಪ
ಸಮಾರೋಪ ಸಮಾರಂಭದಲ್ಲಿ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ನಿರ್ಣಯ ಮಂಡಿಸಿದರು. ಅವಿಭಜಿತ ದ.ಕ. ಜಿಲೆಗಳಲ್ಲಿ ಲಭ್ಯವಿರುವ ಸರಕಾರಿ ಭೂಮಿ ಭೂರಹಿತರಿಗೆ, ಬಡವರಿಗೆ ಹಂಚಬೇಕು, ಸಕಲ ಜೀವರಾಶಿಗಳಿಗೆ ಜೀವನಾಧಾರವಾದ ನೀರು ಅಗತ್ಯ. ಆದರೆ ಜಿಲ್ಲೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದೆ. ಆದ್ದರಿಂದ ಜಲಸಂರಕ್ಷಣೆ ಮಾಡುವ ಶ್ರೀ ಪಡ್ರೆಯವರ ಸಾಹಿತ್ಯ ಲೇಖನ ಪ್ರಚಾರ ಮಾಡಬೇಕು. ಕಮಿಷನ್ ಪಡಯುವ ಕಾನೂನುಬಾಹಿರ ಮೈಕ್ರೋ ಫೈನಾನ್ಸ್ – ಎನ್‌ಐ ವ್ಯವಹಾರಕ್ಕೆ ಕಡಿವಾಣ, ಎತ್ತಿನ ಹೊಳೆ ಯೋಜನೆಗೆ ಕಡಿವಾಣ ಹಾಕಿ ಬರಪೀಡಿತ ಜಿಲ್ಲೆಗಳಲ್ಲಿ ಮಳೆಯಾಧಾರಿತ ಯೋಜನೆ ರೂಪಿಸುವುದು ಸೇರಿದಂತೆ ಹತ್ತು ನಿರ್ಣಯಗಳನ್ನು ಕೈಗೊಳ್ಳಲಾಯಿತು.