Advertisement
ಯುವಜನರು ಮೊದಲಿಗೆ ದೇಶಾಭಿಮಾನ, ದೇಶಭಕ್ತಿ, ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು.
Related Articles
Advertisement
ಇಂದಿನ ದಿನಗಳಲ್ಲಂತೂ ಯುವ ಪೀಳಿಗೆಯು ಇಂಟರ್ನೆಟ್, ಸೋಶಿಯಲ್ ಮೀಡಿಯಾ ಎಂಬ ಮಾಯಾಜಾಲದ ಸುಳಿಗೆ ಸಿಕ್ಕಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದೆ. ಇದು ಬದಲಾಗಬೇಕು. ವ್ಯರ್ಥ ಕಾಲಹರಣ ಮಾಡದೆ ತಮಗೆ ಸಿಗುವ ಸಮಯದ ಸದುಪಯೋಗ ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸಗಳನ್ನು ಮಾಡಬೇಕು.
ಸಾಮಾಜಿಕ, ಸಾಂಸ್ಕೃತಿಕ, ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿ ತಮ್ಮಿಂದಾಗುವ ಮಟ್ಟಿಗೆ ಜನರಿಗೆ ನೆರವಾಗಬೇಕು.ಭ್ರಷ್ಟಾಚಾರ, ಆಡಳಿತದಲ್ಲಿನ ಅವ್ಯವಸ್ಥೆ, ಅಕ್ರಮಗಳು, ಹಗರಣಗಳು, ದೇಶದ್ರೋಹಿ ಕಾರ್ಯಚಟುವಟಿಕೆಗಳು ಇವುಗಳೆಲ್ಲದರ ವಿರುದ್ಧ ಧ್ವನಿ ಎತ್ತಬೇಕು. ಜಾತಿ, ಧರ್ಮ, ಭಾಷೆ, ಪ್ರಾಂತ್ಯ ಎಂದು ತಮ್ಮ ತಮ್ಮಲ್ಲೇ ಹೊಡೆದಾಡದೆ, ಏಕತಾ ಮನೋಭಾವ ಹಾಗೂ ಸೌಹಾರ್ದವನ್ನು ಎತ್ತಿ ಹಿಡಿಯಬೇಕು. ಹಳ್ಳಿಗಳಲ್ಲಿನ ಅನಕ್ಷರತೆಯನ್ನು ಹೋಗಲಾಡಿಸಲು ಜನರಲ್ಲಿ ಶಿಕ್ಷಣದ ಬಗೆಗಿನ ಅರಿವನ್ನು ಮೂಡಿಸಿ ಅವರನ್ನು ಕೂಡ ಸುಶಿಕ್ಷಿತರನ್ನಾಗಿ ಮಾಡುವಲ್ಲಿ ಸಹಕರಿಸಬೇಕು. ಯುವಜನತೆಯು ಸಾಂಸ್ಕೃತಿಕ, ಸಾಮಾಜಿಕ, ಕೃಷಿ, ವಿಜ್ಞಾನ, ವೈದ್ಯಕೀಯ, ಆರ್ಥಿಕ ಮುಂತಾದ ಕ್ಷೇತ್ರಗಳಿಗೆ ತಮ್ಮ ಕೊಡುಗೆಗಳನ್ನು ನೀಡಬೇಕು. ಅದು ಇತರ ಯುವಕರಿಗೆ ಮಾದರಿಯಾಗಿರಬೇಕು. ಯುವಕರು ಉತ್ತಮ ಆಡಳಿತ ವ್ಯವಸ್ಥೆಗೆ ನಿಷ್ಪಕ್ಷಪಾತವಾಗಿ ಸದಾ ಬೆಂಬಲಿಸಬೇಕು.ಗಡಿ ಕಾಯುವ ಯೋಧನಿಗಿರುವ ಆತ್ಮಸ್ಥೈರ್ಯವು ಗಡಿಯೊಳಗಿರುವ ಪ್ರತಿಯೊಬ್ಬ ಯುವಕರಲ್ಲಿಯೂ ಹೊರಹೊಮ್ಮಬೇಕು. ಸದಾ ದೇಶದಲ್ಲಿನ ಆಗುಹೋಗುಗಳನ್ನು ಗಮನಿಸುತ್ತಿರಬೇಕು. ಯಾವುದೇ ತುರ್ತು ಸಮಯದಲ್ಲಿಯೂ ತಮ್ಮಿಂದಾದ ಮಟ್ಟಿಗೆ ಜನರಿಗೆ ಸಹಕಾರ ನೀಡಬೇಕು. ದೇಶದ ಯುವಜನತೆಯು ಒಮ್ಮತದಿಂದ ರಾಷ್ಟ್ರದ ಅಭಿವೃದ್ಧಿಗೆ ದುಡಿದರೆ ಖಂಡಿತ ಗೆಲುವು ಸಾಧ್ಯ. ದೇಶ ಎಂದು ಹೇಳುವಾಗ ಅದರಲ್ಲಿ ಹಲವು ಜಾತಿ, ಧರ್ಮ, ಭಾಷೆ, ಪಂಗಡಗಳು, ವಿವಿಧ ಬಗೆಯ ಸಂಸ್ಕೃತಿಗಳು, ಆಚಾರ ವಿಚಾರಗಳು ಇತ್ಯಾದಿಗಳು ಬರುತ್ತವೆ. ಹೀಗಾಗಿ ಏಕತಾಭಾವದಿಂದ ಸಹೃದಯಿಗಳಾಗಿ ಯುವಕರು ದೇಶದ ಅಭಿವೃದ್ಧಿಗಾಗಿ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು. ಇಂದಿನ ಯುವಕರು ದೃಢಸಂಕಲ್ಪ ಮಾಡಿ ದೇಶಕ್ಕಾಗಿ ಎದ್ದು ನಿಂತರೆ ಅಭಿವೃದ್ಧಿ ಸುಲಭ ಸಾಧ್ಯ.
ಜ್ಯೋತಿ ಮಂಗಳೂರು, ಬೆಸೆಂಟ್ ಕಾಲೇಜು