ಟೆಲ್ ಅವಿವ್: ಹಿರಿಯ ಹಮಾಸ್ ನಾಯಕರೊಬ್ಬರು ಇಸ್ರೇಲ್ ಮೇಲೆ ಅಕ್ಟೋಬರ್ 7 ರ ದಾಳಿಯನ್ನು ಬಹಿರಂಗವಾಗಿ ಶ್ಲಾಘಿಸಿದ್ದಾರೆ. ಇಸ್ರೇಲ್ ನ ಅಸ್ತಿತ್ವ ಕೊನೆಯಾಗುವ ವರೆಗೂ ಪ್ಯಾಲೆಸ್ತೀನ್ ಗುಂಪು ಭವಿಷ್ಯದಲ್ಲಿ ಇದೇ ರೀತಿಯ ಆಕ್ರಮಣಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಘೋಷಿಸಿದ್ದಾರೆ.
ಹಮಾಸ್ ನಾಯಕ ಘಾಜಿ ಹಮದ್ ಅವರ ಹೇಳಿಕೆಗಳನ್ನು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಹಮಾಸ್ ನ ರಾಜಕೀಯ ಬ್ಯೂರೋ ಸದಸ್ಯ ಗಾಜಿ ಹಮದ್ ಅವರು ಲೆಬನಾನಿನ ಟೆಲಿವಿಷನ್ ಚಾನೆಲ್ ಎಲ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಟೀಕೆಗಳನ್ನು ಹಂಚಿಕೊಂಡಿದ್ದಾರೆ.
“ಇಸ್ರೇಲ್ ನಮ್ಮ ಭೂಮಿಯಲ್ಲಿ ಯಾವುದೇ ಸ್ಥಾನವಿಲ್ಲದ ದೇಶವಾಗಿದೆ. ನಾವು ಅದನ್ನು ತೆಗೆದುಹಾಕಬೇಕಿದೆ. ಯಾಕೆಂದರೆ ಇದು ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳಿಗೆ ಭದ್ರತೆ, ಮಿಲಿಟರಿ ಮತ್ತು ರಾಜಕೀಯ ದುರಂತವಾಗಿದೆ. ಇದನ್ನು ಹೇಳಲು ನಾವು ನಾಚಿಕೆಪಡುವುದಿಲ್ಲ. ಇಸ್ರೇಲ್‌ನ ಅಸ್ತಿತ್ವವು ತಾರ್ಕಿಕವಲ್ಲ ಮತ್ತು ಅದನ್ನು ಪ್ಯಾಲೆಸ್ಟೀನಿಯನ್ ಭೂಮಿಯಿಂದ ಅಳಿಸಿಹಾಕಬೇಕು ಎಂದು ಹಮಾದ್ ವಾದಿಸಿದರು.
“ನಾವು ಇಸ್ರೇಲ್ ಗೆ ಪಾಠ ಕಲಿಸಬೇಕಿದೆ. ನಾವು ಅದನ್ನು ಎರಡು ಮತ್ತು ಮೂರು ಬಾರಿ ಮಾಡುತ್ತೇವೆ. ಹಮಾಸ್ ನ ಅಕ್ಟೋಬರ್ 7ರ ಅಲ್-ಅಕ್ಸಾ ಡೆಲುಗ್ಯೂ ಎಂದು ಕರೆಯಲ್ಪಡುವ ದಾಳಿಯು ಕೇವಲ ಮೊದಲ ದಾಳಿ. ಅಂತಹ ಎರಡನೆಯ, ಮೂರನೆಯ, ನಾಲ್ಕನೆಯ ದಾಳಿ ಕಾದಿದೆ” ಎಂದರು.
“ನಾವು ಬೆಲೆ ತೆರಲು ಸಿದ್ಧರಿದ್ದೇವೆ. ನಮ್ಮನ್ನು ಹುತಾತ್ಮರ ರಾಷ್ಟ್ರ ಎಂದು ಕರೆಯಲಾಗುತ್ತದೆ ಮತ್ತು ಹುತಾತ್ಮರನ್ನು ತ್ಯಾಗ ಮಾಡಲು ನಾವು ಹೆಮ್ಮೆಪಡುತ್ತೇವೆ” ಎಂದು ಹಮಾಸ್ ಅಧಿಕೃತವಾಗಿ ಘೋಷಿಸಿದೆ. ಹಮಾದ್ ಅವರು ನಾಗರಿಕರಿಗೆ ಹಾನಿ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಹಮಾಸ್ ನ ಪ್ರತಿಪಾದನೆಯನ್ನು ಪುನರುಚ್ಚರಿಸಿದರು.