ಮುಂದುವರಿದ ದೇಶಗಳ ಪ್ರಧಾನ ಲಕ್ಷಣಗಳೆಂದರೆ ಕಾನೂನು ಪರಿಪಾಲನೆ, ತೆರಿಗೆ ಕಾನೂನಿನ ಅನುಸರಣೆ. ಮಾತುಮಾತಿಗೆ ವಿದೇಶಗಳನ್ನು ಆದರ್ಶವಾಗಿ ಕೊಂಡಾಡುವ ನಾವು ಇವೆಲ್ಲ ವಿಚಾರಗಳನ್ನು ಇಲ್ಲೂ ಅನುಸರಿಸುವ ಮೂಲಕ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಬೇಕು.
ಕೆಲವು ದಿನಗಳ ಹಿಂದೆ ಹೊಸದಿಲ್ಲಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಿನದ ಅಂಗವಾಗಿ ಮಾತನಾಡುತ್ತ ವಿತ್ತ ಸಚಿವ ಅರುಣ್ ಜೇತ್ಲೀ ಮುಂದುವರಿದ ದೇಶಗಳು ಮತ್ತು ಅಭಿವೃದ್ಧಿಶೀಲ ದೇಶಗಳ ನಡುವಣ ವ್ಯತ್ಯಾಸಗಳು ಹಾಗೂ ಭಾರತದಂಥ ಪ್ರಗತಿಶೀಲ ದೇಶ ಭವಿಷ್ಯದಲ್ಲಿ ಕ್ಷಿಪ್ರ ಅಭಿವೃದ್ಧಿ ಹೊಂದುವುದಕ್ಕೆ ಏನು ಮಾಡಬೇಕು ಎಂಬುದರತ್ತ ಗಮನ ಸೆಳೆದಿದ್ದಾರೆ. ಅವರು ಉಲ್ಲೇಖೀಸಿದ ವ್ಯತ್ಯಾಸಗಳು ಮತ್ತು ಮಾಡಬೇಕಾಗಿರುವುದೇನು ಎಂಬುದು ದೇಶದ ನಾಗರಿಕರು ಮತ್ತು ಸಂಸ್ಥೆಗಳು ತಾವು ಗಳಿಸುವ ಆದಾಯಕ್ಕೆ ಪ್ರತಿಯಾಗಿ ಸರಕಾರಕ್ಕೆ ತೆರಬೇಕಾಗಿರುವ ತೆರಿಗೆಗೆ ಸಂಬಂಧಿಸಿದ್ದು. ನಿರ್ದಿಷ್ಟವಾಗಿ ಹೇಳಬೇಕಾದರೆ, ಕರಾರ್ಹರಾದ ಪ್ರತಿಯೊಬ್ಬರೂ ಅದನ್ನು ಕ್ರಮಬದ್ಧವಾಗಿ ಸಲ್ಲಿಸಲೇಬೇಕು ಎಂದು ಅರುಣ್ ಜೇತ್ಲೀ ಹೇಳಿದ್ದಾರೆ.
ಮುಂದುವರಿದ ದೇಶಗಳು ಮತ್ತು ಭಾರತದಂತಹ ಅಭಿವೃದ್ಧಿಶೀಲ ದೇಶಗಳ ನಡುವೆ ಭಿನ್ನತೆಗಳನ್ನು ಹೇಳುವಾಗ ಬಹುತೇಕರು ಅಭಿವೃದ್ಧಿ ಹೊಂದಿದ ದೇಶಗಳ ಸ್ವತ್ಛತೆ, ನಾಗರಿಕ ಪ್ರಜ್ಞೆ, ರಸ್ತೆ ನಿಯಮಗಳು, ಪರಿಸರ ನೈರ್ಮಲ್ಯ ಇತ್ಯಾದಿಗಳ ಬಗ್ಗೆ ಉಲ್ಲೇಖೀಸುತ್ತಾರೆ. ಆದರೆ, ಎಲ್ಲರೂ ಮರೆತುಬಿಡುವುದು ಅಲ್ಲಿನ ನಾಗರಿಕರು ಅಲ್ಲಿನ ತೆರಿಗೆ ಕಾನೂನನ್ನು ವಿಧೇಯರಾಗಿ ಅನುಸರಿಸುತ್ತಾರೆ, ಆದಾಯಕ್ಕೆ ಅನುಗುಣವಾಗಿ ತೆರಿಗೆಯನ್ನು ಸಲ್ಲಿಸುತ್ತಾರೆ ಎಂಬುದನ್ನು. ವಿತ್ತ ಸಚಿವರು ಈ ಅಂಶವನ್ನು ಸ್ಪಷ್ಟವಾಗಿ ಉಲ್ಲೇಖೀಸಿ, ಭಾರತವು ಭವಿಷ್ಯದ ವರ್ಷಗಳಲ್ಲಿ ಅಭಿವೃದ್ಧಿಶೀಲ ದೇಶದ ಸ್ಥಿತಿಗತಿಯಿಂದ ಮುಂಬಡ್ತಿ ಪಡೆದು ಮುಂದುವರಿದ ದೇಶವಾಗಬೇಕಾದರೆ ಕರಾರ್ಹರಾದ ಎಲ್ಲರೂ ತೆರಿಗೆಯನ್ನು ಪಾವತಿಸಲೇಬೇಕು, ಹಾಗೆ ದೇಶದಲ್ಲಿ ಸಂಪೂರ್ಣ ತೆರಿಗೆ ಕಾಯಿದೆ ಪರಿಪಾಲನೆಯಾಗುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಜಾರಿ ನಿರ್ದೇಶನಾಲಯದ ಮೇಲಿದೆ ಎಂದಿದ್ದಾರೆ.
ವಿತ್ತ ಸಚಿವರು ಹೇಳಿರುವುದು ನೂರಕ್ಕೆ ನೂರು ನಿಜ. ಅಭಿವೃದ್ಧಿ ಹೊಂದಿರುವ ಯಾವುದೇ ದೇಶದ ಪ್ರಧಾನ ಲಕ್ಷಣಗಳೆಂದರೆ ನಾಗರಿಕರಿಂದ ಕಾನೂನು ಅನುಸರಣೆ, ತೆರಿಗೆ ಪದ್ಧತಿಯ ಪಾಲನೆ. ಮುಂದುವರಿದ ದೇಶಗಳಲ್ಲಿ ಕಾನೂನು ಉಲ್ಲಂಘನೆ ಕಡಿಮೆ ಅನ್ನುವುದು ವಿದೇಶ ಪ್ರವಾಸ ತೀರಾ ಸಾಮಾನ್ಯವಾಗಿರುವ ಈ ದಿನಗಳಲ್ಲಿ ಎಲ್ಲರೂ ತಿಳಿದಿರುವ ವಿಚಾರ. ಭಾರತದಲ್ಲಿ ಕಾನೂನುಗಳ ಬಗ್ಗೆ ಬೇಕಾಬಿಟ್ಟಿಯಾಗಿರುವವರೂ ವಿದೇಶವಾಸಿಗಳಾದ ಕೂಡಲೇ ಕಾನೂನಿಗೆ ವಿಧೇಯರಾಗುವುದನ್ನು ಕಲಿಯುತ್ತಾರೆ. ಹಾಗೆಯೇ ನಗದು ಆರ್ಥಿಕತೆಯಿಂದ ಕಾನೂನು ಉಲ್ಲಂಘನೆ ಹೆಚ್ಚುತ್ತದೆ ಎಂಬುದು ವಾಸ್ತವ. ಸರಪಣಿ ಪ್ರಕ್ರಿಯೆಯಂತೆ ಪರಸ್ಪರ ಸಂಬಂಧ ಹೊಂದಿರುವ ಇವೆಲ್ಲವನ್ನೂ ಸರಿಪಡಿಸಿ, ಕರಾರ್ಹರಾದ ಎಲ್ಲರನ್ನೂ ತೆರಿಗೆ ಕಾನೂನಿನ ವ್ಯಾಪ್ತಿಗೆ ತಂದು ಅದರ ಪರಿಪಾಲನೆಯನ್ನು ಖಾತರಿಪಡಿಸುವ ಮೂಲಕ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸರಕಾರ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಗಳ ಪ್ರಯತ್ನ ಸ್ವಾಗತಾರ್ಹ. ಅವರು ಸಾಗುತ್ತಿರುವ ದಿಕ್ಕು ಸರಿಯಾದುದೇ ಆಗಿದೆ.
ವ್ಯಕ್ತಿಗಳು ಮಾತ್ರವಲ್ಲದೆ ನೋಂದಾಯಿತ ಸಂಸ್ಥೆಗಳೂ ದೇಶದಲ್ಲಿ ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಿವೆ ಅನ್ನುವುದು ಆದಾಯ ತೆರಿಗೆ ಇಲಾಖೆಯ ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ದೇಶದಲ್ಲಿ 15 ಲಕ್ಷ ನೋಂದಾಯಿತ ಕಂಪೆನಿಗಳಿದ್ದರೆ ಇವುಗಳಲ್ಲಿ 8-9 ಲಕ್ಷ ಕಂಪೆನಿಗಳು ಕಾಲಕಾಲಕ್ಕೆ ತೆರಿಗೆ ಮಾಹಿತಿಯನ್ನು ಸಲ್ಲಿಸುತ್ತಿಲ್ಲ ಎಂದು ಇಲಾಖೆ ಹೇಳಿದೆ. ದೇಶದ ಸುಶಿಕ್ಷಿತ, ಕರಾರ್ಹ ನಾಗರಿಕರು ಕೂಡ ತೆರಿಗೆಯಿಂದ ತಪ್ಪಿಸಿಕೊಳ್ಳಲು ಏನೇನೆಲ್ಲ ಅಡ್ಡದಾರಿಗಳನ್ನು ಹಿಡಿಯುತ್ತಾರೆ ಅನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಮನೆಗೆರಡು ಕಾರುಗಳಿದ್ದರೂ ಕರಾರ್ಹ ಆದಾಯವಿಲ್ಲ ಎಂದು ಸರಕಾರ, ತೆರಿಗೆ ಇಲಾಖೆಗಳನ್ನು ನಂಬಿಸುವುದರಲ್ಲೇ ನಮಗೆ ಆಸಕ್ತಿ. ಈ ದೇಶದಲ್ಲಿ ತಮ್ಮನ್ನು ಬಡವರಂತೆ ಬಿಂಬಿಸಿಕೊಳ್ಳುವುದು ಬಹುತೇಕ ಎಲ್ಲರ ಜಾಯಮಾನ.
ಮಾತು ಮಾತಿಗೆ ವಿದೇಶಗಳನ್ನು, ಅಲ್ಲಿನ ಪರಿಸರ, ಸ್ವತ್ಛತೆ, ಕಾನೂನು ಪರಿಪಾಲನೆ ಇತ್ಯಾದಿಗಳನ್ನು ಕೊಂಡಾಡುವ ನಾವು ನಮ್ಮ ದೇಶವನ್ನೂ ಆ ಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಬೇಕಾಗಿದೆ. ಅಂಥ ಮೊತ್ತಮೊದಲ ಹೆಜ್ಜೆ ತೆರಿಗೆ ಕಾನೂನು ಪರಿಪಾಲನೆಯೇ ಆಗಲಿ. ನಾವು ಸ್ವಯಂಪ್ರೇರಿತರಾಗಿ ನಮ್ಮ ಆದಾಯಕ್ಕೆ ನ್ಯಾಯಬದ್ಧವಾದ ತೆರಿಗೆ ಪಾವತಿಸಬೇಕು, ಅದು ಈ ದೇಶದ ನಾಗರಿಕರಾಗಿ ನಮ್ಮ ಕರ್ತವ್ಯ. ಯಾರು ಅದನ್ನು ಪಾಲಿಸುವುದಿಲ್ಲವೋ ಅಂಥವರನ್ನು ಮಣಿಸುವ ಕೆಲಸವನ್ನು ದೇಶದ ಹಿತದೃಷ್ಟಿಯಿಂದ ಜಾರಿ ನಿರ್ದೇಶನಾಲಯ ಮತ್ತು ಸರಕಾರ ಮಾಡಲಿ.