Advertisement

ಪಾಕಿಗೆ ತಪರಾಕಿ; ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಮಾನ ಕಳೆದ ಸುಷ್ಮಾ

06:00 AM Sep 24, 2017 | Team Udayavani |

ವಿಶ್ವಸಂಸ್ಥೆ: “”ನಾವು ವಿಜ್ಞಾನಿಗಳು, ವಿದ್ವಾಂಸರು, ವೈದ್ಯರು, ಎಂಜಿನಿಯರ್‌ಗಳನ್ನು ಉತ್ಪಾದಿಸಿದ್ದೇವೆ, ನೀವು ಏನನ್ನು ಉತ್ಪಾದಿಸಿದ್ದೀರಿ? ಕೇವಲ ಭಯೋತ್ಪಾದಕರು, ಭಯೋತ್ಪಾದನಾ ಶಿಬಿರಗಳು,  ಲಷ್ಕರ್‌ ಎ ತೊಯ್ಬಾ, ಜೈಷ್‌ ಎ ಮೊಹಮ್ಮದ್‌, ಹಿಜ್ಬುಲ್‌ ಮುಜಾಹಿದ್ದೀನ್‌, ಮತ್ತು ಹಕ್ಕಾನಿ ನೆಟ್‌ವರ್ಕ್‌ ಮಾತ್ರ ಸೃಷ್ಟಿಸಿದ್ದೀರಿ…”

Advertisement

ಇದು ವಿಶ್ವಸಂಸ್ಥೆಯ 72ನೇ ಮಹಾ ಅಧಿವೇಶನದಲ್ಲಿ ಭಾರತ ಪಾಕಿಸ್ತಾನಕ್ಕೆ ನೀಡಿದ ತಿರುಗೇಟು. ಮೊನ್ನೆಯಷ್ಟೇ ಇದೇ ವೇದಿಕೆಯಲ್ಲಿ ಮಾತನಾಡಿದ್ದ ಪಾಕಿಸ್ತಾನದ ಪ್ರಧಾನಿ ಖಾಖನ್‌ ಅಬ್ಟಾಸಿಗೆ ಖಡಕ್‌ ಆದ ಮಾತುಗಳಿಂದಲೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ನಿಮಗೆ ಇದಕ್ಕೂ ಸರಳವಾಗಿ ಉತ್ತರ ಕೊಡಬೇಕಾದರೆ, ಇಡೀ ಜಗತ್ತು ಭಾರತದ ಐಟಿ ವಲಯದ ಬಗ್ಗೆ ಖುಷಿಯಿಂದ ಮಾತನಾಡುತ್ತಿದೆ. ಆದರೆ ನೀವು ಉಗ್ರರನ್ನು ಸೃಷ್ಟಿಸುತ್ತಿರುವ ಬಗ್ಗೆ ಇದೇ ಜಗತ್ತು ಖಂಡನೆ ವ್ಯಕ್ತಪಡಿಸುತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಸತತ ಎರಡನೇ ವರ್ಷ ವಿಶ್ವಸಂಸ್ಥೆಯ ಈ ವೇದಿಕೆಯಲ್ಲೇ ಮಾತನಾಡಿದ ಸುಷ್ಮಾ ಸ್ವರಾಜ್‌, ತಮ್ಮ ಆಕ್ರೋಶಕ್ಕೆ ಹಿಂದಿಯನ್ನು ಬಳಸಿಕೊಂಡರು. ಪಾಕಿಸ್ತಾನ ಇಂದಿಗೂ ಭಾರತದ ವಿರುದ್ದ ಸಮರ ಸಾರುತ್ತಲೇ ಬಂದಿದೆ. ಇಡೀ ಜಗತ್ತಿಗೇ ಘರ್ಷಣೆ, ಸಾವು ಮತ್ತು ಅಮಾನವೀಯತೆಯನ್ನು ರಫ್ತು ಮಾಡುತ್ತಿರುವ ಅದು ಸುಳ್ಳಿನ ಸರದಾರನಾಗಿದೆ. ಇಂಥ ಆ ದೇಶ, ನಮಗೆ ಮಾನವೀಯತೆಯ ಪಾಠ ಹೇಳಿಕೊಡಲು ಬಂದಿದೆ ಎಂದು ನೇರವಾಗಿಯೇ ಆ ದೇಶದ ಮಾನ ಕಳೆದರು.

“”ಇಂದು ಈ ವೇದಿಕೆಯಿಂದ ಪಾಕಿಸ್ತಾನದ ರಾಜಕೀಯ ನಾಯಕರಿಗೆ ಇಷ್ಟೇ ಹೇಳಲು ಬಯಸುತ್ತೇನೆ; ಇಷ್ಟೇ ಮಾಹಿತಿಯಿಂದ ಅವರು ಆತ್ಮ ವಿಮರ್ಶೆ ಮಾಡಿಕೊಂಡರೆ ಸಾಕು. ಭಾರತ ಮತ್ತು ಪಾಕಿಸ್ತಾನ ಕೆಲವೇ ಗಂಟೆಗಳ ಅಂತರದಲ್ಲಿ ಸ್ವಾತಂತ್ರ್ಯ ಪಡೆದವು. ಆದರೆ ಭಾರತ ಏಕೆ ಇಡೀ ಜಗತ್ತಿನಲ್ಲೇ ಐಟಿ ವಲಯದಲ್ಲಿ ಸೂಪರ್‌ ಪವರ್‌ ಆಗಿದೆ, ಪಾಕಿಸ್ತಾನ ಮಾತ್ರ ಭಯೋತ್ಪಾದಕರ ಸರಬರಾಜುದಾಣವಾಗಿದೆ” ಎಂದು ಸುಷ್ಮಾ ಸ್ವರಾಜ್‌ ಕಟಕಿಯಾಡಿದರು.

ಸ್ವಾತಂತ್ರ್ಯ ಬಂದು 70 ವರ್ಷದಲ್ಲಿ ಭಾರತ ಹಲವಾರು ಸರ್ಕಾರಗಳನ್ನು ಕಂಡಿದೆ. ಈ ಎಲ್ಲ ಸರ್ಕಾರಗಳು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕಾಣಿಕೆ ನೀಡುತ್ತಿವೆ. ನಾವು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸ್ಥೆಗಳನ್ನು ಕಟ್ಟಿದೆವು. ಇವು ಇಡೀ ಜಗತ್ತಿನ ಹೆಮ್ಮೆಯ ವಿಚಾರದಂತಿವೆ ಎಂದು ಭಾರತದ ಸಾಧನೆಯನ್ನು ವಿಶ್ವಸಂಸ್ಥೆಯ ವೇದಿಕೆಯಲ್ಲೇ ಕೊಂಡಾಡಿದರು.

Advertisement

ವಿಶ್ವಸಂಸ್ಥೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ “ಉತ್ತರದ ಹಕ್ಕು’ ಪ್ರಸ್ತಾಪಿಸಿದ ಸುಷ್ಮಾ ಸ್ವರಾಜ್‌,  ಪಾಕಿಸ್ತಾನ ಕೇವಲ ಭಾರತಕ್ಕಲ್ಲ, ನೆರೆಯ ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಕ್ಕೂ ಉತ್ತರ ಕೊಡಬೇಕಿದೆ ಎಂದು ಪ್ರತಿಪಾದಿಸಿದರು.

ಅಬ್ಟಾಸಿ ಅವರು ಪ್ರಸ್ತಾಪಿಸಿದ್ದ ಜಿನ್ನಾ ಅವರ ಶಾಂತಿ ಪ್ರಯತ್ನ ವಿಚಾರವನ್ನು ಸುಷ್ಮಾ ಅವರೂ ಉಲ್ಲೇಖೀಸಿದರು. ಜಿನ್ನಾ ಅವರ ಈ ಪ್ರಯತ್ನಗಳನ್ನು ಕೈಬಿಟ್ಟಿದ್ದು ಪಾಕಿಸ್ತಾನವೇ ಹೊರತು, ನಾವಲ್ಲ. ದ್ವಿಪಕ್ಷೀಯವಾಗಿಯೇ ಭಾರತ ಮತ್ತು ಪಾಕ್‌ ಸಂಬಂಧ ಉತ್ತಮಗೊಳಿಸಬೇಕು ಎಂದು ಹಿಂದಿನಿಂದಲೂ ಪ್ರತಿಪಾದಿಸಲಾಗುತ್ತಿದೆ. 2015ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದಾಗ, ಆಗಿನ ಪ್ರಧಾನಿ ನವಾಜ್‌ ಷರೀಫ್ ಅವರೇ ಈ ಬಗ್ಗೆ ಹೇಳಿದ್ದರು. ಆದರೆ ಪಾಕ್‌ ನಾಯಕರಿಗೆ ಮರೆಯುವ ಕಾಯಿಲೆ ಅಂಟಿಕೊಂಡಿದೆ. ಹೀಗಾಗಿಯೇ ಅವರಿಗೆ ದ್ವಿಪಕ್ಷೀಯ ಸಂಬಂಧವೆಂದರೆ, ಎರಡು ರಾಷ್ಟ್ರಗಳ ನಡುವಿನದ್ದು ಎಂಬುದೇ ಗೊತ್ತಿಲ್ಲ. ಮೂರನೇ ರಾಷ್ಟ್ರ ಬರಲಿ ಎಂದು ಕಾಯುತ್ತಿದ್ದಾರೆ ಎಂದು ಸುಷ್ಮಾ ತಿರುಗೇಟು ನೀಡಿದರು.

ಚೀನಾಗೂ ಟಾಂಗ್‌
ಭಯೋತ್ಪಾದನೆ ವಿಚಾರದಲ್ಲಿಯೇ ಚೀನಾಗೂ ಟಾಂಗ್‌ ನೀಡಿದ ಸುಷ್ಮಾ ಸ್ವರಾಜ್‌, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕುಳಿತು ವಿಟೋ ಪವರ್‌ ಉಪಯೋಗಿಸುತ್ತಿರುವುದಕ್ಕೂ ಆಕ್ಷೇಪಿಸಿದರು. ಇಡೀ ಜಗತ್ತಿಗೆ ಇಂದು ಉಗ್ರವಾದ ಆತಂಕವಾಗಿ ಕಾಡುತ್ತಿದೆ. ಆದರೆ, ಪಾಕಿಸ್ತಾನದ ಜೈಷ್‌ ಎ ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ಗೆ ನಿರ್ಬಂಧ ಹೇರುವ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕುತ್ತಿದೆ. ಹೀಗಾಗಿ ಈ ಅತ್ಯುನ್ನತ ಭವನದಿಂದ ಆ ದೇಶಕ್ಕೆ ಮನವಿ ಮಾಡುತ್ತಿದ್ದೇನೆ; ದಯಮಾಡಿ ಸ್ವಹಿತಾಸಕ್ತಿಗಾಗಿ ದುಷ್ಟ ಶಕ್ತಿಗಳ ದಮನಕ್ಕೆ ಅಡ್ಡಿ ಮಾಡಬೇಡಿ ಎಂದು ಖಡಕ್‌ ಆಗಿಯೇ ಹೇಳಿದ್ದಾರೆ.

ನೋಟು ಅಮಾನ್ಯಕ್ಕೆ ಮೆಚ್ಚುಗೆ
ಇಡೀ ಜಗತ್ತನ್ನೇ ಕಾಡುತ್ತಿರುವ ಕಪ್ಪುಹಣ ನಿಗ್ರಹಕ್ಕಾಗಿ ನೋಟು ಅಮಾನ್ಯ ಮಾಡಿದ್ದು, ನಮ್ಮ ಸರ್ಕಾರದ ಪರಿಣಾಮಕಾರಿ ನಿರ್ಧಾರ. ಇದರಿಂದಾಗಿ ಕಪ್ಪುಹಣವನ್ನೇ ಚಲಾವಣೆಯಿಂದ ಹೊರಗೆ ಹಾಕುವ ಪ್ರಯತ್ನವಾಯಿತು. ಅಲ್ಲದೆ ಭ್ರಷ್ಟಾಚಾರವನ್ನೂ ಮಟ್ಟ ಹಾಕಲು ಕಾರಣವಾಗಿದೆ ಎಂದು ಸುಷ್ಮಾ ಅಭಿಪ್ರಾಯಪಟ್ಟರು. ಇದಲ್ಲದೇ, ಜಿಎಸ್‌ಟಿ, ಬೇಟಿ ಬಚಾವೋ, ಬೇಟಿ ಪಡಾವೋ, ಸ್ವತ್ಛ ಭಾರತ ಯೋಜನೆಗಳ ಬಗ್ಗೆಯೂ ಕೊಂಡಾಡಿದರು.

ಸುಧಾರಣೆ ಬೇಗ ಆಗಲಿ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಬಹುಬೇಗನೇ ಆಗಬೇಕಿದೆ. 2015ರಲ್ಲೇ ವಿಶ್ವಸಂಸ್ಥೆಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿತ್ತು. ಆದರೆ ಈಗ ಅದು ಸ್ಥಗಿತವಾಗಿದೆ. ಅಲ್ಲದೆ ಆಗ 160 ದೇಶಗಳು ಸುಧಾರಣೆಗೆ ಬೆಂಬಲ ನೀಡಿದ್ದವು ಎಂದು ನೆನಪಿಸಿದರು.

ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ ಬಗ್ಗೆ ಸುಷ್ಮಾ ಸ್ವರಾಜ್‌ ಸೂಕ್ತ ಪ್ರತಿಕ್ರಿಯೆಯನ್ನೇ ನೀಡಿದೆ. ಇದೊಂದು ಆಳವಾದ ವಿಚಾರವಾಗಿದೆ. ಇಡೀ ಜಗತ್ತು ಏಕೆ ಉಗ್ರವಾದದ ವಿರುದ್ಧ ಒಟ್ಟಾಗಿ ಹೋರಾಡಬೇಕು ಎಂದು ತೋರಿಸಿಕೊಟ್ಟಿದ್ದಾರೆ.
– ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next