ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಂಗಳವಾರ (ಜನವರಿ 26, 2021) ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರು ಟ್ರ್ಯಾಕ್ಟರ್ ರಾಲಿ ನಡೆಸುತ್ತಿದ್ದ ಸಂದರ್ಭದಲ್ಲಿ ರೈತರ ಹೆಸರಿನಲ್ಲಿ ಗಲಭೆ ನಡೆಸಿ, ನಮ್ಮ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದ್ದು ಯಾರೆಂದು ತಿಳಿದಿದೆ ಎಂಬುದಾಗಿ ಭಾರತೀಯ ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ಟಿಖಾಯತ್ ಎಎನ್ ಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಇದನ್ನೂ ಓದಿ:ದೆಹಲಿ: ಹಿಂಸಾರೂಪಕ್ಕೆ ತಿರುಗಿದ ರೈತರ ಪ್ರತಿಭಟನೆ; ಟ್ರ್ಯಾಕ್ಟರ್ ಮಗುಚಿ ಬಿದ್ದು ರೈತ ಸಾವು
ನಮ್ಮ ಪ್ರತಿಭಟನೆ ವೇಳೆ ನಡೆದ ಗಲಭೆಗೂ, ನಮಗೂ ಸಂಬಂಧ ಇಲ್ಲ. ನಮ್ಮ 41 ಸಂಘಟನೆಯ ಜನರು ಈ ಗಲಭೆಯಲ್ಲಿ ಶಾಮೀಲಾಗಿಲ್ಲ. ಈ ಕೃತ್ಯ ಎಸಗಿದವರು ರಾಜಕೀಯ ಪಕ್ಷದ ಕಾರ್ಯಕರ್ತರು. ಇದರ ಹಿಂದೆ ರಾಜಕೀಯ ಕೈವಾಡ ಎಂಬುದಾಗಿ ರಾಕೇಶ್ ಗಂಭೀರವಾಗಿ ಆರೋಪಿಸಿದ್ದಾರೆ.
ನಮ್ಮ ಹೋರಾಟದ ಹಕ್ಕನ್ನು ಕಿತ್ತುಕೊಳ್ಳಲು ರಾಜಕೀಯ ಪಕ್ಷಗಳು ಯತ್ನಿಸುತ್ತಿವೆ. ರೈತರ ಹೆಸರಿನಲ್ಲಿ ಗೂಂಡಾಗಿರಿ ನಡೆಸುವ ಮೂಲಕ ರೈತರ ಹೋರಾಟದ ದಿಕ್ಕುತಪ್ಪಿಸುವ ವ್ಯವಸ್ಥಿತ ಸಂಚು ನಡೆದಿರುವುದಾಗಿ ರಾಕೇಶ್ ದೂರಿದ್ದಾರೆ.
ಮತ್ತೊಂದೆಡೆ ದೆಹಲಿಯಲ್ಲಿ ಪ್ರತಿಭಟನೆ ಹಿಂಸಾಚಾರ ರೂಪ ಪಡೆದಿದ್ದು, ಪೊಲೀಸರು, ಪತ್ರಕರ್ತರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೆಹಲಿಯಲ್ಲಿ ಇಂಟರ್ನೆಟ್ ಸ್ಥಗಿತ:
ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೆಹಲಿಯಾದ್ಯಂತ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.