ಬೆಳಗಾವಿ: ನಾವು ಕೋವಿಡ್-19 ಜೊತೆ ಬದುಕುವುದನ್ನು ಕಲಿಯಬೇಕು. ಸಾವು ಬದುಕು ನಮ್ಮ ಕೈಯಲ್ಲಿಲ್ಲ, ಹೋರಾಟ ಮಾಡಿ ಉಳಿಸುವ ಯತ್ನ ಮಾಡಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೋವಿಡ್ ನಾವು ಅಂದುಕೊಂಡಂತೆ ದೊಡ್ಡ ರೋಗವೇನಲ್ಲ. ಜನರು ಇದಕ್ಕೆ ಹೆದರಬಾರದು ಎಂದರು.
ಈ ವೇಳೆ ಬಿಮ್ಸ್ ದಲ್ಲಿ ನಡೆದಿರುವ ಅವಾಂತರಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಬಿಮ್ಸ್ ಬಳಿ ಆ್ಯಂಬುಲೆನ್ಸ್ ಸುಟ್ಟ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತೇವೆ. ಅಧಿಕಾರಿಗಳು ಯಾರಾದರೂ ತಪ್ಪು ಮಾಡಿದ್ದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಬಿಮ್ಸ್ ಆಡಳಿತ ಮಂಡಳಿಗೆ ಶೀಘ್ರ ಸರ್ಜರಿ ಮಾಡಲಾಗುವದು. ಅಲ್ಲಿಯ ವ್ಯವಸ್ಥೆ ಸುಧಾರಣೆ ಮಾಡಲು ಗಮನ ಹರಿಸಲಾಗುವದು ಭರವಸೆ ನೀಡಿದರು.
ಕೋವಿಡ್ ನಿಯಂತ್ರಣ ಸಂದರ್ಭದಲ್ಲಿ ವರ್ಗಾವಣೆ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣದಿಂದ ಸುಮ್ಮನಿದ್ದೇವೆ ಎಂದು ಹೇಳಿದ ಸಚಿವರು ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡಿಸಿಗೆ ಸೂಚನೆ ನೀಡಲಾಗಿದೆ ಎಂದರು.