ಹರಿಹರ: ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ, ಹರಿಹರದಿಂದ ಜಗಳೂರಿಗೆ ನದಿ ನೀರು ಪೂರೈಕೆ ಸೇರಿದಂತೆ ಹಲವು ನೀರಾವರಿ ಹಾಗೂ ಜನಪರ ಯೋಜನೆ ಜಾರಿಗೊಳಿಸಲಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಬನ್ನಿಕೋಡು ಗ್ರಾಮದ ಊರಮ್ಮನ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ ತಮ್ಮ ಅವಧಿಯಲ್ಲೆ ಮಂಜೂರಾತಿ ನೀಡಲಾಗಿದೆ. ಆದರೆ ಕೆಲವರು ತಾವೇ ಮಾಡಿದ್ದಾಗಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಹರಿಯುತ್ತಿರುವ ನಮ್ಮ ನದಿಗಳ ನೀರನ್ನು ನಮಗಿಂತ ನೆರೆಯ ರಾಜ್ಯಗಳೇ ಹೆಚ್ಚು ಉಪಯೋಗ ಮಾಡಿಕೊಳ್ಳುತ್ತಿವೆ. ಇಂದಿನ ಸರ್ಕಾರಗಳ ನಡವಳಿಕೆ, ನೀರಾವರಿಗೆ ಹಣ ಹಂಚಿಕೆ ಮಾಡುತ್ತಿರುವುದನ್ನು ನೋಡಿದರೆ ಇನ್ನೂ ನೂರು ವರ್ಷವಾದರೂ ನಮ್ಮ ರಾಜ್ಯ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಿಲ್ಲ ಎಂದರು.
ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿ, ಜೆಡಿಯು ಮತ್ತು ಜೆಡಿಎಸ್ ಇಬ್ಭಾಗವಾಗಿದ್ದರಿಂದ ಮೂರನೇ ಪಕ್ಷಕ್ಕೆ ಶಕ್ತಿ ಬಂದಿದೆ. ಇವೆರಡೂ ಪಕ್ಷಗಳನ್ನು ಒಗ್ಗೂಡಿಸಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಮಧ್ಯೆ ಮಾತುಕತೆಗೆ ಪ್ರಯತ್ನಿಸುತ್ತಿದ್ದೇನೆ. ಇಂದು ನಾನು ಮತ್ತು ಕುಮಾರಣ್ಣ ಸೇರುವ ಮೂಲಕ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕುಮಾರಣ್ಣ ಮತ್ತೆ ಸಿಎಂ ಆಗುವ ಮುನ್ಸೂಚನೆ ಕಾಣುತ್ತಿದೆ. ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುವ ಕೆಟ್ಟ ರಾಜಕಾರಣದಿಂದ ಜನತೆ ಬೇಸತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ತಮ್ಮ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ 400 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾಗಿ ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಮುಖಂಡರಾದ ಅಮಾನುಲ್ಲಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶೀಲಾಕುಮಾರಿ, ಎಚ್. ಎಸ್.ಅರವಿಂದ, ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮಹಾಪೌರ ಅಜಯ್‌ಕುಮಾರ್ ಬಿ.ಜಿ., ಗ್ರಾಮಸ್ಥರಾದ ಬಸವರಾಜ್, ಸುಭಾಷ್ ಇದ್ದರು.