ಮುಂಬೈ: ಕೋವಿಡ್ ಹರಡುವಿಕೆ ಕೈ ಮೀರಿರುವುದರಿಂದ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಹೇರುವಂತೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು,ರಾಜ್ಯದಲ್ಲಿ ಎಗ್ಗಿಲ್ಲದೆ ಹಬ್ಬುತ್ತಿರುವ ಕೋವಿಡ್ ಸೋಂಕಿಗೆ ಕಡಿವಾಣ ಹಾಕಲು ಲಾಕ್ ಡೌನ್ ಅನಿವಾರ್ಯವಾಗಿದೆ. ಈ ಹಿನ್ನೆಲೆ ಸಚಿವ ಸಂಪುಟದ ಎಲ್ಲ ಸದಸ್ಯರು ನಾಳೆ ರಾತ್ರಿ 8 ಗಂಟೆಯಿಂದ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿರುವ ಮತ್ತೋರ್ವ ಸಚಿವ ಅಶ್ಲಾಮ್ ಶೇಖ್, ರಾಜ್ಯದಲ್ಲಿ ಔಷಧಿ ಹಾಗೂ ಆಕ್ಸಿಜನ್ ಪೂರೈಕೆಯ ಕೊರತೆಯನ್ನು ಗಮನಿಸುತ್ತಿದ್ದರೆ ಮಹಾರಾಷ್ಟ್ರ ಲಾಕ್ ಡೌನ್‍ನತ್ತ ಹೊರಳುತ್ತಿದೆ ಎಂಬುದು ಗೋಚರಿಸುತ್ತಿದೆ. ಶೀಘ್ರದಲ್ಲೇ ಈ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.
Related Articles
ಇನ್ನು ಕೋವಿಡ್ ಸೋಂಕು ಹೆಚ್ಚಳದಲ್ಲಿ ದೇಶದಲ್ಲಿಯೇ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ ನಿತ್ಯ 1.50 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಕೋವಿಡ್ ಸೋಂಕು ಮಟ್ಟಹಾಕಲು ಹರಸಾಹಸ ಪಡುತ್ತಿರುವ ಮಹಾರಾಷ್ಟ್ರ ಸರ್ಕಾರ, ಈಗಾಗಲೇ ವಾರಾಂತ್ಯದ ಲಾಕ್ ಡೌನ್ ಹಾಗೂ ರಾತ್ರಿ ಕರ್ಫ್ಯೂನಂತಹ ಕ್ರಮಗಳನ್ನು ಕೈಗೊಂಡಿದೆ. ಅದಾಗ್ಯೂ ಕೂಡ ಪ್ರಕರಣಗಳ ಹೆಚ್ಚಳದಲ್ಲಿ ಕಡಿಮೆಯಾಗಿಲ್ಲ.