ಜೀವನದ ಬಹುತೇಕ ಸಮಯವನ್ನು ಬರೀ ಹುಡುಗರೊಂದಿಗೆ ಕಳೆದಿದ್ದ ನಾನು, ನಿನ್ನ ಆ ಕ್ಷಣದ ಸಾಂಗತ್ಯ ಮನದಲಿ ಇಷ್ಟು ಪುಳಕವನ್ನುಂಟು ಮಾಡುತ್ತದೆಯೆಂದು ನಾನೆಂದು ಊಹಿಸಿಯೇ ಇರಲಿಲ್ಲ. ಈ ಜಗದಲ್ಲಿ ಹೆಣ್ಣೆಂಬ ಮಾಯೆ ಅದೆಂಥ ಚಮತ್ಕಾರದ ಸೃಷ್ಟಿ ಅಲ್ಲವೇ?
ನಿನ್ನ ನೋಡಿದಾಗ ಅದ್ಯಾಕೆ ಹೃದಯ ಒಂದೇ ಸಮನೇ ಹೊಡೆದುಕೊಳ್ಳುತ್ತೆ? ಪದೇ ಪದೆ ಜೊತೆಯಾಗಿಯೇ ಇರಬೇಕು, ಹರಟಬೇಕು, ಒಂದಿಷ್ಟು ಕನಸುಗಳ ಗುಡ್ಡೆ ಹಾಕಬೇಕು. ಹೀಗೆಲ್ಲ ನನಗೇ ಅನಿಸುತ್ತಿದೆಯಾ ಅಥವಾ ಇದು ಎಲ್ಲ ಹುಡುಗರ ಸಮಸ್ಯೆಯಾ? ಗೊತ್ತಿಲ್ಲ. ಪದವಿಯ ಕೊನೆ ವರ್ಷದಲಿ ಕಾಲೇಜು ಟ್ರಿಪ್ ಹೊರಟಾಗ ನಿನ್ನ ಹಾಜರಾತಿ ಕಂಡು ನಾನು ಕೂಡ ನಿನ್ನೊಡನೆ ಬರಲು ಅಣಿಯಾಗಿದ್ದು. ಆ ತಿಳಿ ಸಂಜೆಯಲಿ ನಾನು ಬಸ್ಸೇರಿ ಕುಳಿತಾಗ ಕೊನೆಗೆ ಬಂದ ನೀನು, ಸೀಟು ಸಿಗದೆ ನನ್ನ ಬಳಿಯೇ ಕುಳಿತೆಯಲ್ಲ; ಆಗ ಒಳಗೊಳಗೇ ನಾನು ಅದೆಷ್ಟು ಖುಷಿಪಟ್ಟಿದ್ದೆ. ಆಗ ನನ್ನ ಗೆಳೆಯರೆಲ್ಲ ಹೊಟ್ಟೆಯುರಿಯಿಂದ ಮನದಲ್ಲಿಯೆ ಶಪಿಸಿ, ಟೈರು ಸುಟ್ಟು ಪ್ರತಿಭಟನೆ ಹೂಡಿದ್ದರು. ಬಸುರಿಯಂತೆ ತುಂಬಿ ಹೊರಟಿದ್ದ ಬಸ್ಸು ಕತ್ತಲನ್ನು ಸೀಳಿ ತನ್ನದೆ ಬೆಳಕಿನ ಟಾರ್ಚು ಹಿಡಿದಿತ್ತು. ಕಿಟಕಿಯಿಂದ ಸೂಸುವ ತಣ್ಣನೆ ಗಾಳಿಗೆ ನಿನ್ನ ಸುಕೋಮಲ ಕೇಶರಾಶಿ ನನ್ನ ಮೊಗಕೆ ಮುತ್ತಿಡುತಿತ್ತು. ಅದೆ ಸೆಳೆತದಲಿ ರಾತ್ರಿ ಪೂರ್ತಿ ನೀನು ನಿ¨ªೆಗೆ ಜಾರಿ ನನ್ನದೆಗೆ ಒರಗಿದ್ದು ನನ್ನ ಬದುಕಿನ ಬೆರಗು.
ಆಗ ನನಗೆ ಅಗತ್ಯವಿದ್ದಿದು ನಿನ್ನ ಸ್ಪರ್ಶ ಸುಖವೊಂದೇ. ಮತ್ತೆ ನೀನು ಎಚ್ಚರವಾಗಿದ್ದು ಮುಖದ ಮೇಲೆ ಸೂರ್ಯನ ಎಳೆ ಬಿಸಿಲು ಹರಡಿದಾಗಲೇ. ಆಗ ನೀನಿದ್ದ ಸ್ಥಿತಿಯನ್ನು ಕಂಡು ಬೆಚ್ಚಿಬಿದ್ದಿದ್ದೆ. ಆ ಕ್ಷಣವೇ ತಡವರಿಸಿ ಬಸ್ಸಿಳಿದು ಹೊರಗೇ ನಿಂತು ಬಿಟ್ಟೆ. ಅಲ್ಲಿಂದಲೇ ನೋಡು ನಮ್ಮಿಬ್ಬರ ಕಣ್ಣುಗಳು ಒಂದಕ್ಕೊಂದು ಬೆಸೆಯಲು ಶುರುವಾಗಿದ್ದು, ಮನಸುಗಳು ಮಾತನಾಡಿಕೊಂಡಿದ್ದು.
ಆದರೆ ದೂದಸಾಗರ್ ಎಂಬ ಹಾಲಿನಂಥ ಜಲಪಾತದಲಿ ನಮ್ಮ ಭಾವನೆಗಳು ನಿಂತ ನೀರಾಗಿಬಿಟ್ಟವು. ಆ ನಿಸರ್ಗ ಸೌಂದರ್ಯವನ್ನು ವರ್ಣಿಸಲಷ್ಟೆ ಸೀಮಿತವಾಯಿತೇ ವಿನಹಃ ಅಲ್ಲಿ ನಮ್ಮ ಭಾವನೆಗಳು ತೋಯಲಿಲ್ಲ. ಮತ್ತೆ ಊರ ದಾರಿ ಹಿಡಿದು ಹೊರಟಾಗ ಬರೀ ನಿರ್ಲಿಪ್ತತೆ ಇತ್ತೆ ಹೊರತು ಮಾತಿಲ್ಲ, ಕತೆಯಿಲ್ಲ. ಕಾಲೇಜಿನಲ್ಲೂ ಕೂಡ, ನಮ್ಮ ನಡುವೆ ಏನೂ ನಡೆದೆ ಇಲ್ಲವೆಂಬಂತೆ ಇದ್ದು ಬಿಟ್ಟೆ. ಆದರೆ ಹೃದಯ ಮಾತ್ರ ಸಮುದ್ರದ ತೆರೆಗಳಂತೆ ನಿನ್ನನ್ನು ಬಯಸುತ್ತಿತ್ತು. ನಿನ್ನ ಒಂದು ಆ ನೋಟ,ಕಿರು ನಗೆಗೆ ಗಂಟೆಗಟ್ಟಲೆ ಕಾಯುತಿದ್ದೆ. ಆದರೆ ಪ್ರತಿಕ್ರಿಯೆ ಮಾತ್ರ ಶೂನ್ಯ. ಅದ್ಯಾವುದೋ ಕ್ಷುಲ್ಲಕ ಕಾರಣಕ್ಕೆ ನಮ್ಮೊಳಗಿನ ಪ್ರೇಮದ ಗೂಡಿಗೆ ಕದ,ಕಿಟಕಿಗಳನ್ನು ಮುಚ್ಚಿಕೊಂಡು ಹೊರಗೆ ಬೆಳಕೇ ಇಲ್ಲವೆಂದು ಭ್ರಮಿಸಿಕೊಂಡೆ ಎಲ್ಲ; ಆಕುರಿತು.
ಅಂಬ್ರಿಶ್ ಎಸ್ ಹೈಯ್ನಾಳ್