ಮಂಗಳೂರು: ಕೋವಿಡ್ ಅವಧಿಯಲ್ಲಿ ಹಗರಣ ನಡೆದಿರುವುದಾಗಿ ಆರೋಪಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಇದುವರೆಗೆ ಯಾವುದೇ ದಾಖಲೆ ಕೊಟ್ಟಿಲ್ಲ, ಆರೋಪ ಕುರಿತು ತನಿಖಾ ಸಮಿತಿ ಮುಂದೆ ಮಾಹಿತಿ ನೀಡುವಂತೆ ಹೇಳಿದ್ದೇವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪದ ಕುರಿತು ದಾಖಲೆ ಇದ್ದರೆ ನೀಡುವಂತೆಯೂ ಯತ್ನಾಳ್‌ರಿಗೆ ತಿಳಿಸಿದ್ದೇವೆ ಎಂದರು.
ರಾಮಮಂದಿರ ಉದ್ಘಾಟನೆಗೆ ಕಾಂಗ್ರಸ್ ಉನ್ನತ ನಾಯಕರು ಹೋಗದಿರುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಮಾತ್ರವಲ್ಲ ಅನೇಕ ಸ್ವಾಮೀಜಿಗಳು ರಾಮ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎನ್ನುತ್ತಿದ್ದಾರೆ. ಮಂದಿರಕ್ಕೆ ಹೋಗಲು ಯಾರದ್ದೂ ಅನುಮತಿ ಅಗತ್ಯವಿಲ್ಲ, ಆದರೆ ಉದ್ಘಾಟನೆ ದಿನವೇ ಹೋಗಬೇಕೆಂದಿಲ್ಲ, ರಾಮಮಂದಿರ ನಿರ್ಮಾಣ ಅತ್ಯಂತ ಸಂತಸದ ವಿಚಾರ, ಎಲ್ಲರೂ ಹೋಗಬೇಕು ಎಂದರು.
ನಮ್ಮ ದೇಶದಲ್ಲಿ ಇದು ಒಳ್ಳೆಯ ಬೆಳವಣಿಗೆ, ರಾಜ್ಯದಲ್ಲೂ ದೇವಸ್ಥಾನದಲ್ಲಿ ಪ್ರಾರ್ಥನೆ ಇದೆ, ಗೌರವ ಎಲ್ಲರಿಗೂ ಇದೆ, ಆದರೆ ಮಂದಿರಕ್ಕೆ ರಾಜಕಾರಣ ಬೆರೆಸಬಾರದು, ಆದರೆ ರಾಜಕೀಯ ಲಾಭ ಮತ್ತು ಚುನಾವಣೆಗೋಸ್ಕರ ಬಳಸಲಾಗುತ್ತಿದೆ ಎಂದರು. ಡಿಸಿಎಂ ವಿಚಾರದಲ್ಲಿ ಯಾವುದೇ ಚರ್ಚೆ ಇಲ್ಲ, ಅದೆಲ್ಲವೂ ಪಕ್ಷದ ಆಂತರಿಕ ವಿಚಾರ, ನನ್ನ ಹೆಸರು ಕೂಡಾ ಇಲ್ಲ, ಏನಿದ್ದರೂ ಹೆ„ಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.