Advertisement

Kalaburagi; ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿ ಅನುಭವಿಸಿದ್ದೇವೆ: ದಿನೇಶ್ ಗುಂಡೂರಾವ್

04:35 PM Mar 07, 2024 | Team Udayavani |

ಕಲಬುರಗಿ: ದೇಶದ್ರೋಹಕ್ಕೆ ಸಮರ್ಥನೆ ಇರುವುದಿಲ್ಲ. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಯಾರೇ ಕೂಗಿರಲಿ, ಅದು ಅಪರಾಧ. ಅದಕ್ಕೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಅಂತಹ ಅನೇಕ ದೇಶದ್ರೋಹಿ ಘಟನೆಗಳು ಹಿಂದೆ ದೇಶದ ಹಲವೆಡೆಯಲ್ಲಿ ನಡೆದಿವೆ ಎಂದು ನೆನಪಿಸಿದರು.

ಬಿಜೆಪಿ ರಾಜ್ಯದಲ್ಲೂ ಮತ್ತು ಕೇಂದ್ರದಲ್ಲೂ ಅಧಿಕಾರದಲ್ಲಿದ್ದಾಗ ದೇಶದ್ರೋಹಿ ಘಟನೆಗಳು ನಡೆದಿಲ್ಲವೇ ಎಂದು ಪ್ರಶ್ನಿಸಿದ ಅವರು, ಪುಲ್ವಾಮಾ ದಾಳಿ ನಡೆದಾಗ ಯಾರು ಪ್ರಧಾನಿಯಾಗಿದ್ದರು ಎಂದು ಪ್ರಶ್ನಿಸಿದರು. ಎಂ.ಎಂ. ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆಗಳ ಹಿಂದೆ ಯಾರ ಕೈವಾಡವಿದೆಯೋ, ಅವರ ಕೈವಾಡವೇ ಈಗಲೂ ಇದೆ ಎಂದು ಪರೋಕ್ಷವಾಗಿ ಸಂಘ ಪರಿವಾರದ ವಿರುದ್ಧ ಹರಿಹಾಯ್ದರು.

ಸೋಲಿನ ಭಯದಿಂದ ಮೈತ್ರಿ

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕುರಿತು ಪ್ರಸ್ತಾಪಿಸಿದ ಅವರು ಇದೊಂದು ನೈತಿಕತೆ ಇಲ್ಲದ, ಅನಿವಾರ್ಯದ ಭಯದ ಮೈತ್ರಿಯಾಗಿದೆ ಎಂದರು.

Advertisement

ಈ ಹಿಂದೆ ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿ ಅನುಭವಿಸಿದ್ದೇವೆ. ಈಗ ಬಿಜೆಪಿಗರ ಪಾಳಿ. ಮೈತ್ರಿ ಮಾಡಿ ಅನುಭವಿಸಿದ ನಂತರ ಎಲ್ಲವೂ ವಾಸ್ತವಕ್ಕೆ ಬರಲಿದೆ ಎಂದರು.

ಕಾಂಗ್ರೆಸ್ ನಲ್ಲಿ ದುಡ್ಡು ಕೊಟ್ಟರೆ ಟಿಕೆಟ್ ಕೊಡ್ತಾರೆ ಎನ್ನುವ ಮಂಡ್ಯ ರವೀಂದ್ರ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಅವರು, ರವಿ ಯಾರು? ಎಲ್ಲಿಂದ ಬಂದವರು ಮತ್ತು ಯಾಕೆ ಹಾಗೆ ಮಾತನಾಡಿದ್ದಾರೆ ಎನ್ನುವುದು ಅವರಿಗೆ ಬಿಟ್ಟ ವಿಚಾರ. ಟಿಕೆಟ್ ಗಾಗಿ ಹಣ ಪಡೆಯುತ್ತಾರೆ ಎನ್ನುವುದು ಸುಳ್ಳು. ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ನೋಡೋಣ ಎಂದು ಸವಾಲು ಹಾಕಿದರು.

ಈ ಬಾರಿ ಲೋಕಸಭೆಯಲ್ಲಿ ಜನ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದ ಅವರು, ಒಟ್ಟು 20 ಸ್ಥಾನ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಜನರಿಗೆ ಮಾತು ಕೊಟ್ಟಂತೆ ಎಲ್ಲ ಗ್ಯಾರಂಟಿಗಳನ್ನು ನಾವು ಜಾರಿಗೆ ತಂದಿದ್ದೇವೆ. ಅವುಗಳನ್ನು ಹೊರತುಪಡಿಸಿ ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಕೂಡ ಹಣವನ್ನು ವಿನಿಯೋಗ ಮಾಡಿ ಅವುಗಳನ್ನು ಕೂಡ ಕಾರ್ಯಗತ ಮಾಡುತ್ತಿದ್ದೇವೆ. ಇದರಿಂದಾಗಿ ಜನರಿಗೆ ಸಿದ್ದರಾಮಯ್ಯ ಅವರ ಸರ್ಕಾರದ ಮೇಲೆ ನಂಬಿಕೆ ಬಂದಿದೆ ಈ ನಂಬಿಕೆಯೇ ನಮ್ಮನ್ನು ಲೋಕಸಭೆಯಲ್ಲಿ ಕೈಹಿಡಿದು ಮುನ್ನಡೆಸಲಿದೆ ಎಂದರು.

ಈ ವೇಳೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ, ಡಾ. ಅಜಯ್ ಸಿಂಗ್ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next