ಅಹಮದಾಬಾದ್: ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆಯೇ ಮುಂದಿನ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, “ವಿಮಾನ ನಿಲ್ದಾಣವನ್ನು ನಿರ್ಮಿಸಿದಾಗ ಅಯೋಧ್ಯೆಯ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡರು, ಅಯೋಧ್ಯೆಯ ಜನರು ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆಯಿಂದ ಯಾರನ್ನೂ ಆಹ್ವಾನಿಸದಿದ್ದಕ್ಕಾಗಿ ಅಸಮಾಧಾನಗೊಂಡಿದ್ದಾರೆ” ಎಂದರು.
“ಅಯೋಧ್ಯೆಯನ್ನು ಕೇಂದ್ರವಾಗಿಸಿಕೊಂಡು ಅಡ್ವಾಣಿ ಜೀ ಅವರು ಆರಂಭಿಸಿದ ಚಳುವಳಿಯನ್ನು ಇಂಡಿಯಾ ಒಕ್ಕೂಟವು ಅಯೋಧ್ಯೆಯಲ್ಲಿಯೇ ಸೋಲಿಸಿದೆ…” ಎಂದು ರಾಹುಲ್ ಹೇಳಿದರು.
ಅಹಮದಾಬಾದ್ ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ರಾಹುಲ್ ಈ ಮಾತುಗಳನ್ನಾಡಿದರು.
“ಅವರು (ಬಿಜೆಪಿ) ನಮಗೆ ಬೆದರಿಕೆ ಹಾಕುವ ಮೂಲಕ ಮತ್ತು ನಮ್ಮ ಕಚೇರಿಗೆ ಹಾನಿ ಮಾಡುವ ಮೂಲಕ ಸವಾಲು ಹಾಕಿದ್ದಾರೆ. ನಮ್ಮ ಕಚೇರಿಯನ್ನು ಒಡೆದಂತೆ ನಾವು ಒಟ್ಟಾಗಿ ಅವರ ಸರ್ಕಾರವನ್ನು ಒಡೆಯಲು ಹೊರಟಿದ್ದೇವೆ ಎಂದು ನಾನು ನಿಮಗೆ ಹೇಳುತ್ತೇನೆ. ನಾವು ಅಯೋಧ್ಯೆಯಲ್ಲಿ ಮಾಡಿದಂತೆ ಗುಜರಾತ್ ನಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತದೆ ಮತ್ತು ಗುಜರಾತ್‌ನಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಸೋಲಿಸುತ್ತದೆ, ಇದನ್ನು ಬರೆದಿಟ್ಟುಕೊಳ್ಳಿ” ಎಂದು ರಾಹುಲ್ ಹೇಳಿದರು.