Advertisement
ಮಹಾಭಾರತದಲ್ಲಿ ಬರುವ ಒಂದು ಸಂದರ್ಭ: ವಿದ್ಯಾರ್ಥಿಗಳಾಗಿದ್ದವರು ರಾಜಕುಮಾರರು ಎಂದು ತಿಳಿದ ನಂತರವೂ, ಪಾಠ- ಪ್ರವಚನದ ವಿಷಯದಲ್ಲಿ ಆಚಾರ್ಯ ದ್ರೋಣರು ಕಠಿಣವಾಗಿದ್ದರು. ಹಿಂದಿನ ದಿನ ಹೇಳಿಕೊಟ್ಟ ಪಾಠವನ್ನು ಕಲಿತು ಒಪ್ಪಿಸಿದ ನಂತರವೇ ಹೊಸ ಪಾಠ ಆರಂಭಿಸುವುದು ಅವರ ಪಠ್ಯಕ್ರಮವಾಗಿತ್ತು. ಅದೊಂದು ಬೆಳಗ್ಗೆ, ಎಲ್ಲ ರಾಜಕುಮಾರರೂ ಪಾಠಶಾಲೆಗೆ ಬಂದರು. ಮೊದಲು ದ್ರೋಣರಿಗೆ ವಂದಿಸಿ, ನಂತರ ತಮ್ಮ ತಮ್ಮ ಸ್ಥಳಗಳಲ್ಲಿ ಆಸೀನರಾದರು. ದ್ರೋಣರು ಎಲ್ಲರನ್ನೂ ಉದ್ದೇಶಿಸಿ, ನಿನ್ನೆ ಹೇಳಿಕೊಟ್ಟ ಪಾಠವನ್ನು ಎಲ್ಲರೂ ಕಲಿತು ಬಂದಿದ್ದೀರಿ ತಾನೆ? ಎಂದು ಕೇಳಿದರು. “ಕಲಿತಿದ್ದೇವೆ ಆಚಾರ್ಯ’ -ಎಂಬ ಉತ್ತರ ಬಂತು. ದ್ರೋಣರು ನೆಮ್ಮದಿಯ ಭಾವದೊಂದಿಗೆ ಹೊಸಪಾಠ ಆರಂಭಿಸಬೇಕು. ಅಷ್ಟರಲ್ಲಿಯೇ ಧರ್ಮರಾಯ ಎದ್ದು ನಿಂತು ಮೆಲುದನಿಯಲ್ಲಿ ಆಚಾರ್ಯರೆ… ಎಂದ.“ಯುಧಿಷ್ಠಿರಾ, ಏನು ನಿನ್ನ ಅನುಮಾನ?’ ದ್ರೋಣರು ಕೇಳಿದರು.
**
ಈಗ ಇದ್ದಕ್ಕಿದ್ದಂತೆಯೇ ಮಹಾಭಾರತವನ್ನು, ಧರ್ಮರಾಯನನ್ನು ನೆನಪು ಮಾಡಿಕೊಳ್ಳುವುದಕ್ಕೆ ಕಾರಣನಾಗಿರುವವನು ವೈಭವ ಪಟೇಲ್ ಎಂಬ ಯುವಕ. ಈತ ಮುಂಬಯಿಯವನು. ಎಂಜಿನಿಯರಿಂಗ್ ಪದವೀಧರ. 26 ವರ್ಷದ ಈ ಪಟೇಲನ ಮಾತೇ ಈಗ ಚರ್ಚೆಗೆ ವಸ್ತುವಾಗಿದೆ. ಸಮಸ್ಯೆಯಾಗಿಯೂ ಕಾಡತೊಡಗಿದೆ. ಏನಾಗಿದೆಯೆಂದರೆ, ಎಂಜಿನಿಯರಿಂಗ್‌ನ ಮೊದಲ ವರ್ಷದಲ್ಲಿ, ಅಂದರೆ 2011ರಲ್ಲಿ ಈ ಪಟೇಲ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿರಲಿಲ್ಲವಂತೆ. ಫೇಲ್ ಆಗಿಬಿಡ್ತೇನೆ ಅನ್ನಿಸಿದಾಗ, ಯೂನಿವರ್ಸಿಟಿಯ ಮುಖ್ಯ ಅಧಿಕಾರಿಯೊಬ್ಬರಿಗೆ 20 ಸಾವಿರ ಲಂಚ ಕೊಟ್ಟು, ನನ್ನ ಮಾರ್ಕ್ಸ್ ಕಾರ್ಡ್ ತಿದ್ದಿ ಜಾಸ್ತಿ ಅಂಕಗಳು ಸಿಗುವಂತೆ ಮಾಡಿ ಎಂದು ವಿನಂತಿಸಿದನಂತೆ. ಕಾಸು ಕೈ ಸೇರಿದ ಮೇಲೆ ಮಾತಿಗೆ ತಪ್ಪುವುದುಂಟೆ? ಆ ಅಧಿಕಾರಿ ಹಾಗೆಯೇ ಮಾಡಿದ್ದಾನೆ. ಮುಂದಿನ ವರ್ಷಗಳಲ್ಲಿ ವೈಭವ್ ಪಟೇಲನ ಡಿಗ್ರಿ ಮುಗಿದಿದೆ.
Related Articles
***
ಹೌದು, ನಮ್ಮೊಳಗೂ ಒಬ್ಬ ಧರ್ಮರಾಯನಿದ್ದಾನೆ. ವೈಭವ್ ಪಟೇಲನೂ ಇದ್ದಾನೆ. ನ್ಯಾಯವೇ ದೇವರು, ಸತ್ಯವೇ ದೇವರು ಎಂಬ ಮಾತನ್ನು ನಾವೆಲ್ಲಾ ಓದಿದ್ದೇವೆ, ಕೇಳಿದ್ದೇವೆ ಎಂಬುದು ನಿಜ. ಆದರೆ ಅದನ್ನು ಪಾಲಿಸಬೇಕೆಂಬ ಸಂದರ್ಭ ಬಂದಾಗ ತುಂಬ ಸಹಜ ಅನ್ನುವಂತೆ ಹಿಂದೇಟು ಹಾಕುತ್ತೇವೆ. ಗುರಿ ಸಾಧಿಸಿದರೆ ಸಾಕು : ಹಿಡಿದ ಕೆಲಸದಲ್ಲಿ ಯಶಸ್ಸು ಕಂಡರೆ ಸಾಕು ಎಂಬ ಅವಸರದಲ್ಲಿ ಅಡ್ಡದಾರಿ ಹಿಡಿದಿರುತ್ತೇವೆ. ಹಾಗಾಗಿ, ನಮ್ಮಲ್ಲಿ ಹೆಚ್ಚಿನವರ ಮಾರ್ಕ್ಸ್ ಕಾರ್ಡುಗಳ ಹಿಂದೆ, ನೌಕರಿ ಪಡೆದಿರುವುದರ ಹಿಂದೆ, ನಾವು ಯಾವುದೋ ಅವಸರದಲ್ಲಿ ಸಣ್ಣದೊಂದು “ತಪ್ಪು’ ಮಾಡಿರುವುದು ಮನಸ್ಸಿನ ಆಳದಲ್ಲೆಲ್ಲೋ ರೆಕಾರ್ಡ್ ಆಗಿರುತ್ತದೆ. ಅದು ಆಗೊಮ್ಮೆ ಈಗೊಮ್ಮೆ ನಮ್ಮ ಅಂತರಾತ್ಮವನ್ನು ಚುಚ್ಚಿ ಎಚ್ಚರಿಸುತ್ತಲೇ ಇರುತ್ತದೆ. ಅಂಥ ಸಂದರ್ಭದಲ್ಲೆಲ್ಲ ನಾವು ಮೌನದ ಮೊರೆ ಹೋಗುತ್ತೇವೆ. ನಮ್ಮೊಳಗಿನ ಯುಧಿಷ್ಠರನ ಮಾತು ನಮಗೆ ಕೇಳಿಸದಂತೆ ಮಾಡಿಬಿಡುತ್ತೇವೆ.
Advertisement
ಉಹುಂ, ಹಾಗಾಗಬಾರದು. ಒಂದು ಅಂಕಪಟ್ಟಿಯನ್ನು, ನೇಮಕಾತಿಯ ಆದೇಶವನ್ನು, ಮನೆ ಖರೀದಿ ಪತ್ರವನ್ನು, ಒಂದು ಪ್ರಶಸ್ತಿಯನ್ನು, ಸಾವಿರ ಮಂದಿಯ ಮುಂದೆ ಧೈರ್ಯದಿಂದ, ಹೆಮ್ಮೆಯಿಂದ ಹಿಡಿದು ನಿಲ್ಲುವ ಛಾತಿ ನಮ್ಮದಾಗಬೇಕು. ಅಂಥದೊಂದು ಬದಲಾವಣೆ ಎಲ್ಲೆಡೆಯೂ ಕಾಣಲಿ. ನಮ್ಮೊಳಗಿನ ಯುಧಿಷ್ಠರ ನಿರ್ಭಿಡೆಯಿಂದ ಮಾತಾಡಲಿ…
– ಗೀತಾಂಜಲಿ