Advertisement

“ನಮಗೀಗ ನಿಜವಾದ ಸ್ವಾತಂತ್ರ್ಯ ಸಿಕ್ತು!’

11:39 AM Mar 26, 2017 | Harsha Rao |

ಧಾರವಾಡ: “ಬರ್ರಿ ಎಲ್ಲಾರೂ… ವಿಠuನ ಗುಡಿಗೆ ದೀಪಾ ಹಚ್ಚೋಣು. 50 ವರ್ಷದಿಂದ ನಾವು ಮಾಡಿದ ಹೋರಾಟಕ್ಕ ಫಲ ಸಿಕ್ಕೇತಿ. ಕಡಿಗೂ ಪರಮಾತ್ಮ ಕಣ್ಣು ತೆರದಾ. ನಮ್ಮ ಕಷ್ಟ ಅರ್ಥ ಮಾಡ್ಕೊಂಡಾ… ನಮ್ಮ ತಲಿಮ್ಯಾಲಿನ ಸೂರಿಗೆ ಹಕ್ಕಪತ್ರ ಸಿಕ್ಕತಾವಂತ…’ – ಧಾರವಾಡ ಜಿಲ್ಲೆಯ ದಟ್ಟ ಅರಣ್ಯದ ಮಧ್ಯೆ ಇರುವ ಶಿವನಗರ ಗೌಳಿದೊಡ್ಡಿ ನಿವಾಸಿ ಧೋಂಡಿಬಾ ಗೌಳಿ ಹೀಗೆ ಹೇಳಿದ ಹತ್ತೇ ನಿಮಿಷದಲ್ಲಿ ಇಡೀ ಗೌಳಿದೊಡ್ಡಿಯ ಜನ ಸಂಭ್ರಮಕ್ಕೆ ಸಜ್ಜಾಗಿ ನಿಂತರು.

Advertisement

ರಾಜ್ಯದ 53 ಸಾವಿರಕ್ಕೂ ಹೆಚ್ಚು ತಾಂಡಾ, ದೊಡ್ಡಿ, ನಾಯಕನಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ವಿಧೇಯಕ ಶುಕ್ರವಾರ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದು, ರಾಜ್ಯದ ಬುಡಕಟ್ಟುಗಳು, ತಾಂಡಾಗಳು, ಗೊಲ್ಲರ ಹಟ್ಟಿ, ಗೌಳಿಗರ ದೊಡ್ಡಿಗಳ ಜನರಲ್ಲಿ ಹರ್ಷ ತಂದಿದೆ.

ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ, ಉಡುಪಿ, ಮಂಗಳೂರು, ಚಿಕ್ಕಮಗಳೂರು, ಮೈಸೂರು ಸೇರಿ ಅನೇಕ ಜಿಲ್ಲೆಗಳಲ್ಲಿ ವಾಸವಾಗಿರುವ ಗೌಳಿ ಜನಾಂಗದ (ಪಶುಪಾಲನೆ ಮಾಡುವ ಮರಾಠಿ ಭಾಷಿಕ ಬುಡಕಟ್ಟು ಸಮುದಾಯ) ಸಾವಿರಕ್ಕೂ ಹೆಚ್ಚು ದೊಡ್ಡಿಗಳು ಕಂದಾಯ ಗ್ರಾಮದ ವ್ಯಾಪ್ತಿಗೆ ಸೇರ್ಪಡೆಯಾಗಿದ್ದು, ಗೌಳಿ ಮುಖಂಡರಿಗೆ ಖುಷಿ ತಂದಿದೆ. ಅವರೆಲ್ಲ, ತಮ್ಮ ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ಶುಭಾಶಯ ಕೋರಿದರು.

ನೆಲೆ ಸಿಕ್ಕಿತು, ಬದುಕಿಗೇನು?: ರಾಜ್ಯದ 16 ವಿಧಾನಸಭಾ ಕ್ಷೇತ್ರದಲ್ಲಿ ಹರಿದು ಹಂಚಿ ಹೋಗಿರುವ 5 ಲಕ್ಷಕ್ಕೂ ಅಧಿಕ ಗೌಳಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವುದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಮುಂಡಗೋಡ, ಜೊಯಿಡಾ ತಾಲೂಕುಗಳಲ್ಲಿ. ಇಲ್ಲೇ ಶೇ.50ರಷ್ಟು ಗೌಳಿಗರು ವಾಸವಾಗಿದ್ದಾರೆ.

ಸತತ ಹೊರಾಟದ ಫಲವಾಗಿ ಇದೀಗ ಗೌಳಿದೊಡ್ಡಿಗಳು ಕಂದಾಯ ಗ್ರಾಮಗಳಾದವು. ಆದರೆ ಪಶುಪಾಲನೆ ಅದರಲ್ಲೂ ಲಕ್ಷ ಲಕ್ಷ ದೇಶಿ ಹಸುಗಳನ್ನು ಸಾಕುವ ಈ ಸಮುದಾಯ ಬರಗಾಲ, ನೀರಿನ ಕೊರತೆ, ಹುಲ್ಲುಗಾವಲುಗಳ ಅತಿಕ್ರಮಣ
ಮತ್ತು ಅರಣ್ಯ ಇಲಾಖೆ ಕಿರುಕುಳದಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದೆ.

Advertisement

ಸದ್ಯಕ್ಕೆ ತಮ್ಮ ದೊಡ್ಡಿಗಳು ಕಂದಾಯ ಗ್ರಾಮಗಳಾಗಿದ್ದು, ವಾಸಕ್ಕೆ ಸೂರು ಸಿಕ್ಕಿತು. ಬದುಕಿಗೆ ಪಶುಪಾಲನೆ ಮತ್ತು ಹೈನುಗಾರಿಕೆಯೇ ಜೀವಾಳ. ಇದು ಸದ್ಯಕ್ಕೆ ಸಂಕಷ್ಟದಲ್ಲಿದ್ದು, ಗೌಳಿಗರಿಗೆ ಇನ್ನಾದರೂ ವಿಶೇಷ ಆರ್ಥಿಕ ನೆರವು ನೀಡುವ ಅಗತ್ಯವಿದೆ ಎಂದು ಕೆಲವು ಗೌಳಿ ಮುಖಂಡರು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ನಾವೀಗ ಸರ್ಕಾರದ ಮಕ್ಕಳಾದೆವು…
ನೂರಿನ್ನೂರು ವರ್ಷಗಳಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿನ ಹುಲ್ಲುಗಾವಲು ಅವಲಂಬಿಸಿಕೊಂಡು ಹೈನುಗಾರಿಕೆ
ಮಾಡುತ್ತಿದ್ದ 5 ಲಕ್ಷಕ್ಕೂ ಹೆಚ್ಚು ಗೌಳಿ ಕುಟುಂಬಗಳ ಸಾವಿರಕ್ಕೂ ಹೆಚ್ಚು ದೊಡ್ಡಿಗಳಿಗೆ ಹಕ್ಕು ಪತ್ರಗಳೇ ಸಿಕ್ಕಿರಲಿಲ್ಲ.
ಅವರಿಗೆ ಮನೆಗಳನ್ನು ಹಾಕಿಕೊಳ್ಳಲು ಅವಕಾಶವಿರಲಿಲ್ಲ. ಬಸವ ವಸತಿ ಯೋಜನೆ ಸೇರಿ ಯಾವುದೇ ವಸತಿ
ಯೋಜನೆ ಅವರಿಗೆ ಈವರೆಗೂ ಸಿಕ್ಕಿರಲಿಲ್ಲ. ಅಷ್ಟೇ ಅಲ್ಲ, ಪ್ರಾಕೃತಿಕವಾಗಿ ಮನೆಗಳಿಗೆ ಹಾನಿಯಾದರೆ ಪರಿಹಾರವೂ
ಸಿಗುತ್ತಿರಲಿಲ್ಲ. ಅರಣ್ಯ ನಿವಾಸಿಗಳಾಗಿದ್ದ ಅವರ ಬದುಕು ಅರಣ್ಯರೋದನವೇ ಆಗಿತ್ತು. ಇದೀಗ ಸರ್ಕಾರ ಗೌಳಿ
ದೊಡ್ಡಿಗಳನ್ನು ಕಂದಾಯ ಗ್ರಾಮಗಳ ವ್ಯಾಪ್ತಿಗೆ ತಂದಿದ್ದಕ್ಕೆ ಗೌಳಿ ಜನಾಂಗದವರು ತಮ್ಮ ಹೋರಾಟಕ್ಕೆ ಫಲ ಸಿಕ್ಕಿತು.
ನಿಜಕ್ಕೂ ಈಗ ನಮಗೆ ಸ್ವಾತಂತ್ರÂ ಸಿಕ್ಕಿತು. ನಾವು ಸರ್ಕಾರದ ಮಕ್ಕಳಾದೆವು ಎಂದು “ಉದಯವಾಣಿ’ಯೊಂದಿಗೆ
ಸಂಭ್ರಮ ಹಂಚಿಕೊಂಡರು.

ಆರ್ಥಿಕ ಸೌಲಭ್ಯ ಒದಗಿಸಬೇಕಿದೆ ಸರ್ಕಾರ
ರಾಜ್ಯದಲ್ಲಿರುವ 5 ಲಕ್ಷ ಗೌಳಿ ಜನಾಂಗದವರು ಹೆಚ್ಚು ಕಡಿಮೆ 20 ಲಕ್ಷಕ್ಕೂ ಅಧಿಕ ದೇಶಿ ಹಸುಗಳನ್ನು ಇಟ್ಟುಕೊಂಡು
ಪಶುಪಾಲನೆ ಮತ್ತು ಹೈನುಗಾರಿಕೆ ಮಾಡುತ್ತಿದ್ದಾರೆ. ಆದರೆ ಬರಗಾಲದ ಹೊಡೆತಕ್ಕೆ ನಲುಗಿ, ಮೇವಿಲ್ಲದೆ ತಮ್ಮ
ಹಸುಗಳನ್ನು ಸಾಕಲಾರದೆ ಕಸಾಯಿಖಾನೆಗೆ ತಳ್ಳುತ್ತಿದ್ದಾರೆ. ತಲೆತಲಾಂತರದಿಂದ ಗುಡ್ಡಗಾಡಿನಲ್ಲಿದ್ದುಕೊಂಡು ಈ ದೇಶಿ
ಹಸುಗಳನ್ನು ಉಳಿಸಿಕೊಂಡು ಬಂದ ಗೌಳಿಗರಿಗೆ ಇನ್ನಾದರೂ ಆರ್ಥಿಕ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕಾಗಿದೆ.

– ಬಸವರಾಜ ಹೊಂಗಲ್‌

**
ಬಂಜಾರಾ ಸಮುದಾಯದಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ವಿಜಯಪುರ: ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕ ಅಂಗೀಕಾರ ಮಾಡಿದ್ದು, ಅಧಿಕ ಸಂಖ್ಯೆಯಲ್ಲಿ ತಾಂಡಾ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಕಂದಾಯ ಗ್ರಾಮ ಎಂಬ ಅಸ್ತಿತ್ವದ ಭಾಗ್ಯ ದೊರಕಿದ್ದಕ್ಕೆ ಸಂಭ್ರಮ ಮನೆ ಮಾಡಿದೆ.

ರಾಜ್ಯದಲ್ಲಿ ಬಂಜಾರಾ ಸಮುದಾಯದ 3,600ಕ್ಕೂ ಅಧಿಕ ತಾಂಡಾಗಳಿದ್ದು, ಇದರಲ್ಲಿ ಗರಿಷ್ಠ 543 ತಾಂಡಾಗಳು ವಿಜಯಪುರ ಜಿಲ್ಲೆಯಲ್ಲೇ ಇವೆ. ಸಂಖ್ಯೆಯಲ್ಲಿ ಅಧಿಕವಿದ್ದರೂ ವಿಜಯಪುರ ಜಿಲ್ಲೆಯ ತಾಂಡಾಗಳು ಅಭಿವೃದ್ಧಿ ಕಾಣದೇ ನರಕದ ಕೂಪಗಳಾಗಿವೆ. ಬಡತನ, ಕುಡಿಯುವ ನೀರಿನ ಅಭಾವ ಇತ್ಯಾದಿ ಕಾರಣಗಳಿಂದ ಹಲವು ತಾಂಡಾಗಳ ಜನರು
ನೆರೆ ಜಿಲ್ಲೆ ಹಾಗೂ ನೆರೆಯ ರಾಜ್ಯಗಳಿಗೆ ಗುಳೆ ಹೋಗಿದ್ದಾರೆ.

ಇದಲ್ಲದೆ, ರಸ್ತೆ, ವಿದ್ಯುತ್‌, ಆರೋಗ್ಯ, ಬೀದಿದೀಪ, ಮಹಿಳೆಯರಿಗೆ ಸಾಮೂಹಿಕ ಶೌಚಾಲಯ – ಹೀಗೆ ಪ್ರತಿ ಅಭಿವೃದ್ಧಿಗೂ ನೆರೆಯ ಗ್ರಾಮಗಳ ಅಭಿವೃದ್ಧಿಗೆ ಬಿಡುಗಡೆ ಆಗುವ ಅನುದಾನದ ಮರ್ಜಿಗೆ ಕಾಯಬೇಕಾದ ದುಸ್ಥಿತಿ ಕಣ್ಣಿಗೆ ರಾಚುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತಾಂಡಾಗಳು ಸರ್ಕಾರಿ ಸ್ಥಳದಲ್ಲಿರುವ ಕಾರಣ ಬಂಜಾರಾ ಸಮುದಾಯದವರ ವಾಸದ
ಮನೆಗೆ ಸ್ವಂತದ್ದು ಎಂಬ ಪಟ್ಟಾ ಭಾಗ್ಯವಿಲ್ಲ.

ರಾಜ್ಯ ಸರ್ಕಾರದ 1961ರ ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿಧೇಯಕ ಸದನದಲ್ಲಿ ಧ್ವನಿಮತದಿಂದ ಅಂಗೀಕರಿಸಿದೆ. ತಮ್ಮ ತಾಂಡಾಗಳ ಶಾಪ ವಿಮೋಚನೆಯಾಗಿ, ಅಭಿವೃದ್ಧಿ ಕಾಣಲು ನೆರವಾದ ಕಾಯ್ದೆ ಬಂಜಾರಾ ಸಮುದಾಯವನ್ನು ಸಂತಸದಲ್ಲಿ ತೇಲುವಂತೆ ಮಾಡಿದೆ.

ಸರ್ಕಾರಿ ಸ್ಥಳದಲ್ಲಿ ನೆಲೆಸಿರುವ ಬಂಜಾರಾ ಸಮುದಾಯಗಳ ಜನರ ವಾಸದ ನೆಲೆಗಳ ನಿವೇಶನ ಅವರವರ ಹೆಸರಿನಲ್ಲಿ ಪಟ್ಟಾ ಆಗಲಿವೆ. ವಿಜಯಪುರ ಜಿಲ್ಲೆಯಲ್ಲಿ ಸದ್ಯ ಸರ್ಕಾರಿ ಒಡೆತನದ ಗಾಂವಠಾಣಾ, ಗೈರಾಣಿ ಭೂಮಿಯಲ್ಲೇ ಬಂಜಾರಾ ತಾಂಡಾಗಳ ವಸತಿ ನೆಲೆಯಿದೆ. ತಾಂಡಾಗಳಲ್ಲಿರುವ ಯಾವುದೇ ಮನೆಗಳು ವಾಸ ಮಾಡುವ ವ್ಯಕ್ತಿಯ ಹೆಸರಿನಲ್ಲಿ
ನಿವೇಶನ ಖಾತೆ ಆಗಿಲ್ಲ. ಈ ಕೊರಗು ಇನ್ನು ನೀಗಲಿದೆ.

ಇದಲ್ಲದೆ, ರಸ್ತೆ, ವಿದ್ಯುತ್‌, ಆರೋಗ್ಯ, ಬೀದಿದೀಪ, ಮಹಿಳೆಯರಿಗೆ ಸಾಮೂಹಿಕ ಶೌಚಾಲಯದ ಸೌಲಭ್ಯ ಸೇರಿ ಯಾವುದೇ ಅಭಿವೃದ್ಧಿ ಆಗಬೇಕಿದ್ದರೂ ತಾಂಡಾಗಳ ನೆರೆಯ ಗ್ರಾಮಗಳಿಗೆ ನೀಡುವ ಅನುದಾನವನ್ನೇ ಬಳಸಬೇಕಿತ್ತು. ಇದೀಗ ಬಂಜಾರಾ ಸಮುದಾಯಗಳ ಎಲ್ಲ ತಾಂಡಾಗಳು ಕಂದಾಯ ಗ್ರಾಮದ ಮಾನ್ಯತೆ ಪಡೆದ ನಂತರ
ಜನವಸತಿಯ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಪಡೆಯಲಿವೆ ಎಂಬುದು ತಾಂಡಾ ಜನತೆಯ ಸಂತಸ ನೂರ್ಮಡಿಗೊಳಿಸಿದೆ.

– ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next