ಮಂಗಳೂರು: ಪೂರ್ವ ಲಡಾಖ್‌ನ ಗಾಲ್ವಾನ್ ಪ್ರದೇಶದಲ್ಲಿ ಚೀನ ಸೈನಿಕರೊಂದಿಗೆ ನಡೆದ ಸಂಘರ್ಷ ದಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ನಗರದ ಕದ್ರಿ ಪಾರ್ಕ್ ಬಳಿಯಿರುವ ಹುತಾತ್ಮರ ಸ್ಮಾರಕದಲ್ಲಿ ಬುಧವಾರ ನಮನ ಸಲ್ಲಿಸ ಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಈ ಕಾಲ ಘಟ್ಟದಲ್ಲಿ ದೇಶ ಒಗ್ಗಟ್ಟಾಗಿ ಹೋರಾಡಬೇಕಿದೆ. ಚೀನದ ಷಡ್ಯಂತ್ರವನ್ನು ಮೆಟ್ಟಿ ನಿಲ್ಲಬೇಕಿದೆ. ಇಡೀದೇಶ ಒಂದಾಗಿ ಚೀನದ ವಿರುದ್ಧ ಮಾತನಾಡಬೇಕಾದ ಅನಿವಾರ್ಯತೆಯಿದೆ. ಆಕ್ರಮಣ ಮೆಟ್ಟಿ ನಿಲ್ಲುವ ಸೈನಿಕ ಬಲ ನಮ್ಮಲ್ಲಿದೆ. ಚೀನದ ಯಾವುದೇ ರೀತಿಯ ಷಡ್ಯಂತ್ರ ಫಲಿಸದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಮೇಯರ್ ದಿವಾಕರ ಪಾಂಡೇಶ್ವರ್, ಮಾಜಿ ಶಾಸಕ ಯೋಗೀಶ್ ಭಟ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ವಕ್ತಾರ ಜಗದೀಶ್ ಶೇಣವ, ಕಾರ್ಪೋರೇಟರ್‌ಗಳಾದ ಸುಧೀರ್ ಶೆಟ್ಟಿ ಕಣ್ಣೂರು, ಕದ್ರಿ ಮನೋಹರ ಶೆಟ್ಟಿ, ಶಕೀಲಾ ಕಾವ ಸಹಿತ ಹಲವರು ಇದ್ದರು.
ಕಾಂಗ್ರೆಸ್ ನಮನ
ಹುತಾತ್ಮ ಭಾರತೀಯ ವೀರ ಯೋಧರಿಗೆ ದ.ಕ. ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದಲೂ ಸಕೀìಟ್ ಹೌಸ್ ಬಳಿ ಇರುವ ಹುತಾತ್ಮರ ಸ್ಮಾರಕದಲ್ಲಿ ನಮನ ಸಲ್ಲಿಸಲಾಯಿತು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಭಾರತದ ಗಡಿ ಕಾಪಾಡುವ ಎಲ್ಲ ಯೋಧರ ಜತೆ ನಾವಿದ್ದೇವೆ. ನಾವು ಭಾರತದ ಪ್ರಧಾನಿಗೆ ಶಕ್ತಿ ಕೊಡುವ ಕೆಲಸ ಮಾಡುತ್ತೇವೆ. ಪ್ರಧಾನಿ ಮೌನ ವಹಿಸದೆ ಏಟಿಗೆ ಎದುರೇಟು ನೀಡುವ ಕೆಲಸ ಮಾಡಬೇಕು ಎಂದರು.