Advertisement

ನಾವುಂದ ಕುದ್ರು: ದಡ ಸೇರಲು ದೋಣಿಯೇ ಆಧಾರ

06:00 AM Jul 10, 2018 | |

ವಿಶೇಷ ವರದಿ-  ಕುಂದಾಪುರ: ವೈಶಾಖದಲ್ಲಿ ನದಿಯಾಚೆಗಿನ ಮನೆಗೆ ತೆರಳಲು ದೋಣಿಯಲ್ಲಾದರೂ ಪ್ರಯಾಣಿಸ ಬಹುದಿತ್ತು. ಆದರೆ ಈಗ ಮಳೆಯಬ್ಬರ ಜೋರಿದೆ. ನದಿಯಲ್ಲಿ ನೀರಿನ ಮಟ್ಟವು ಹೆಚ್ಚಿದೆ. ಕುದ್ರುವಿನಿಂದ ನಾವುಂದಕ್ಕೆ ಅಥವಾ ನಾವುಂದದಿಂದ ಕುದ್ರುವಿಗೆ ಹೋಗುವುದಾದರೂ ಹೇಗೆ ? 

Advertisement

ಇದು ಸುತ್ತಲೂ ಹೊಳೆಯಿಂದ ಆವೃತವಾದ ನಾವುಂದದ ಗಣಪತಿ ದೇವಸ್ಥಾನದ ಸಮೀಪವಿರುವ ನಾವುಂದ ಕುದ್ರುವಿನ ನಿವಾಸಿ ಚಂದ್ರಶೇಖರ್‌ ಜೋಯಿಸರ ಪ್ರಶ್ನೆ. ಬೇಸಗೆಯಿರಲಿ ಅಥವಾ ಮಳೆಗಾಲವಿರಲಿ ಅನೇಕ ವರ್ಷಗಳಿಂದ ಈ ಕುದ್ರುವಿನ ನಿವಾಸಿಗಳಿಗೆ ದೋಣಿಯೊಂದೇ ಆಧಾರ. 

ನಾವುಂದ ಕುದ್ರುವಿನಲ್ಲಿ 7 ಮನೆಗಳಿದ್ದು, ಒಟ್ಟು ಸುಮಾರು 30 ಮಂದಿ ನೆಲೆಸಿದ್ದಾರೆ.  ಪ್ರತಿ ಮನೆಗಳಿಗೂ ಅಂದಾಜು ಎರಡೆರಡು ಎಕರೆಯಷ್ಟು ಜಾಗವಿದ್ದು, ಅದರಲ್ಲಿ ಸ್ವಲ್ಪ ಅಡಿಕೆ ತೋಟಗಳಿವೆ. ಅದು ಬಿಟ್ಟರೆ ಕುದ್ರುವಿನ ಈಚೆ ದಡಕ್ಕೆ ಬಂದು ಕೆಲಸ ಮಾಡಿದರೆ ಮಾತ್ರ ಜೀವನಾಧಾರಕ್ಕೆ ಏನಾದರೂ ಸಿಗುತ್ತದೆ. 

ಹಿಂದೆ ನಾವುಂದ ಗ್ರಾ.ಪಂ. ಒಂದು ದೋಣಿ ನೀಡಿತ್ತು. ಅದರಲ್ಲಿ ಪ್ರಯಾಣಿಸಿದವರು ಇಂತಿಷ್ಟು ಅಂತ ಹಣ ಕೊಡಬೇಕಾಗಿತ್ತು. ಆದರೆ ಈಗ ಪ್ರತಿ ಮನೆಗೊಂದು ದೋಣಿ ಇರುವುದರಿಂದ ಆ ಒಂದು ಚಿಂತೆ ಇಲ್ಲ. 

ತೂಗು ಸೇತುವೆಗೆ ಬೇಡಿಕೆ
ಕುದ್ರು ನಿವಾಸಿಗಳು ಅನೇಕ ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಾಕಷ್ಟು ಬಾರಿ ಸೇತುವೆ ಅಥವಾ ತೂಗು ಸೇತುವೆಗೆ ಬೇಡಿಕೆಯಿಟ್ಟರೂ ಈಡೇರುವ ಲಕ್ಷಣ ಕಾಣುತ್ತಿಲ್ಲ. ಸೇತುವೆಗೆ ಬೇಡಿಕೆಯಿದ್ದರೂ ಇಲ್ಲಿ 7 ಮನೆಗಳು ಮಾತ್ರ ಇರುವುದರಿಂದ ಸದ್ಯಕ್ಕಂತೂ ಸೇತುವೆ ನಿರ್ಮಾಣ ಕನಸು ನನಸಾಗುವ ಸಾಧ್ಯತೆಯಿಲ್ಲ. ಆದರೆ ಸೇತುವೆಯಿಲ್ಲದಿದ್ದರೂ ಕನಿಷ್ಠ ತೂಗು ಸೇತುವೆಯನ್ನಾದರೂ ಮಾಡಿ ಕೊಡಿ ಎನ್ನುವುದು ನಾವುಂದ ಕುದ್ರು ನಿವಾಸಿಗಳ ಬೇಡಿಕೆಯಾಗಿದೆ. 

Advertisement

ದೋಣಿಯೇ ಆಧಾರ
ಕುದ್ರುವಿನಲ್ಲಿ ಮನೆಯಿದ್ದರೂ ಬೇರೆ ಎಲ್ಲ ಚಟುವಟಿಕೆಗಳಿಗೆ ಈಚೆ ದಡದಲ್ಲಿರುವ ನಾವುಂದ ಪೇಟೆಗೆ ಬರಬೇಕು. ಕೆಲಸ, ದಿನಸಿ ಸಾಮಾನು, ಪಡಿತರ ಇನ್ನಿತರ ಯಾವುದೇ ವಸ್ತುಗಳನ್ನು ಖರೀದಿಸಬೇಕಾದರೂ ದೋಣಿಯ ಮೂಲಕವೇ ಬರಬೇಕು. ಈಗ ಮಳೆಗಾಲ ಬೇರೆ. ಉಕ್ಕಿ ಹರಿಯುತ್ತಿರುವ ನದಿಯಲ್ಲಿ ದೋಣಿಯ ಪಯಣವೇ ದುಸ್ತರವಾಗಿದೆ. ದ್ವಿಚಕ್ರ ಸೇರಿದಂತೆ ಇತರ ವಾಹನಗಳಿದ್ದರೂ ಈಚೆ ದಡದಲ್ಲಿಯೇ ಇಟ್ಟು ಹೋಗಬೇಕಾದ ಅನಿವಾರ್ಯ ಕುದ್ರು ನಿವಾಸಿಗಳದು. 

ತೂಗು ಸೇತುವೆಗೆ ಪ್ರಯತ್ನ
ಬೈಂದೂರು ಕ್ಷೇತ್ರದ ಅನೇಕ ಕಡೆಗಳಲ್ಲಿ ಕುದ್ರುಗಳಿಗೆ ಸೇತುವೆ ಬೇಡಿಕೆಯಿದೆ. ಹಂತ ಹಂತವಾಗಿ ಎಲ್ಲ ಕಡೆಗೆ ಸೇತುವೆ ಅಥವಾ ತೂಗು ಸೇತುವೆ  ಬೇಡಿಕೆಯನ್ನು ಈಡೇರಿಸುತ್ತೇನೆ. ನಾವುಂದ ಕುದ್ರುವಿನ ಜನರನ್ನು ಸಂಪರ್ಕಿಸಿ, ಶೀಘ್ರವೇ ತೂಗು ಸೇತುವೆ ನಿರ್ಮಿಸಲು ಪ್ರಯತ್ನಿಸುತ್ತೇನೆ. 
– ಬಿ.ಎಂ. ಸುಕುಮಾರ್‌ ಶೆಟ್ಟಿ, 
ಬೈಂದೂರು ಶಾಸಕರು

ಆಶ್ವಾಸನೆ ಮಾತ್ರ, ಈಡೇರಿಕೆ ಇಲ್ಲ
ನಾನು ಚಿಕ್ಕಂದಿನಿಂದ ಇದೇ ಕುದ್ರುವಿನಲ್ಲಿ ನೆಲೆಸಿದ್ದು, ಯಾವುದೇ ಸೇತುವೆಯಿಲ್ಲ. ತೂಗು ಸೇತುವೆಯೂ ಇಲ್ಲ. ಚುನಾವಣೆ ಬಂದಾಗೊಮ್ಮೆ ಎಲ್ಲರೂ ಹೇಳುತ್ತಾರೆ ಈ ಸಲ ಮಾಡಿಕೊಡುವ ಅಂತಾ. ಆದರೆ ಆ ಬಳಿಕ ಮರೆತೇ ಬಿಡುತ್ತಾರೆ. ದೋಣಿಯೇ ನಮಗೆ ಆಶ್ರಯವಾಗಿದೆ. ಈ ಸಲವಾದರೂ ಸೇತುವೆಯಲ್ಲದಿದ್ದರೂ, ತೂಗು ಸೇತುವೆಯನ್ನಾದರೂ ಮಾಡಿಕೊಡಲಿ.
– ಚಂದ್ರಶೇಖರ್‌ ಜೋಯಿಸ, 
ಕುದ್ರು ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next