ವೆಲ್ಲಿಂಗ್ಟನ್, : “ನಾನು ಯಾವ ಕಾರಣಕ್ಕೂ ಆ ಫೈನಲ್ ಪಂದ್ಯವನ್ನು ಮತ್ತೆ ವೀಕ್ಷಿಸಲು ಬಯಸುವುದಿಲ್ಲ. ಇದರ ಹಿಂದೆ ಬರೀ ನೋವಿನ ಹಾಗೂ ಭಾವನಾತ್ಮಕ ಅಂಶಗಳೇ ತುಂಬಿಕೊಂಡಿವೆ’ ಎಂದು ವಿಶ್ವಕಪ್ ಮುಗಿದ 2 ವಾರಗಳ ಬಳಿಕ ಪ್ರತಿಕ್ರಿಯಿಸಿದ್ದಾರೆ ನ್ಯೂಜಿಲ್ಯಾಂಡಿನ ಬ್ಯಾಟ್ಸ್‌ಮನ್ ರಾಸ್ ಟೇಲರ್.
“ಇದು ಭಾರೀ ಪೈಪೋಟಿಯಿಂದ ಕೂಡಿದ, ಸಾಕಷ್ಟು ಏರಿಳಿತಗಳನ್ನು ಕಂಡ ಪಂದ್ಯವಾಗಿತ್ತು. ಒಮ್ಮೆ ಅವರು, ಒಮ್ಮೆ ನಾವು ಮೇಲುಗೈ ಸಾಧಿಸುತ್ತ ಹೋದೆವು. ನಮ್ಮಲ್ಲಿ ಕೆಲವರಿಗೆ ಈ ಫಲಿತಾಂಶವನ್ನು ಅರಗಿಸಿಕೊಳ್ಳಲು ಒಂದು ವಾರವೇ ಬೇಕಾಯಿತು’ ಎಂದು ಟೇಲರ್ ಸಂದರ್ಶನವೊಂದರಲ್ಲಿ ಹೇಳಿದರು.
“ನಿಜಕ್ಕಾದರೆ ನನಗೆ ಸೂಪರ್ ಓವರ್ ಕಲ್ಪನೆಯೇ ಇರಲಿಲ್ಲ. ಪಂದ್ಯ ಟೈ ಆದರೆ, ಮಳೆ ಬಂದು ರದ್ದುಗೊಂಡರೆ ಟ್ರೋಫಿಯನ್ನು ಹಂಚಲಾಗುತ್ತದೆ ಎಂದು ಓದಿನ ನೆನಪು. ಹೀಗಾಗಿ ಪಂದ್ಯ ಸಮನಾದೊಡನೆ ನಾನು ಅಂಪಾಯರ್‌ಗೆ ಹಸ್ತಲಾಘವ ಮಾಡಲು ತೆರಳಿದೆ. ಆಗ ಅವರು ಸೂಪರ್ ಓವರ್ ವಿಷಯ ತಿಳಿಸಿದರು. ಟಿ20 ಕ್ರಿಕೆಟ್‌ನಲ್ಲಿ ಸೂಪರ್ ಓವರ್ ಮಾಮೂಲು. ಆದರೆ 50 ಓವರ್ ಪಂದ್ಯಗಳಲ್ಲಿ ನನಗಿದು ಮೊದಲ ಅನುಭವ…’ ಎಂಬುದಾಗಿ ಹೇಳಿದರು.