ಪೂರ್ನಿಯಾ: ಇಂಡಿಯಾ ಒಕ್ಕೂಟಕ್ಕೆ ನಿತೀಶ್ ಕುಮಾರ್ ಅಗತ್ಯವೇ ಇಲ್ಲ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಬಿಹಾರದ ಪೂರ್ನಿಯಾದಲ್ಲಿ ಭಾರತ ಜೋಡೋ ನ್ಯಾಯ ಯಾತ್ರೆ ಪ್ರಯುಕ್ತ ಮಂಗಳವಾರ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಅವರು ಮಾತನಾಡಿದ್ದಾರೆ. ಬಿಜೆಪಿ ಜತೆಗೆ ಭಾನುವಾರ ಮತ್ತೆ ಕೈಜೋಡಿಸಿ ಸರ್ಕಾರ ರಚಿಸಿದ ಬಳಿಕ ರಾಹುಲ್ ಗಾಂಧಿ ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದೆ.
ಅವರು ಮೈತ್ರಿಕೂಟ ತೊರೆದ ಸಂದರ್ಭದಲ್ಲಿ ಕೊಂಚ ಆತಂಕ ಉಂಟಾದದ್ದು ಹೌದು. ಬಿಜೆಪಿ ಜತೆಗೆ ಮತ್ತೆ ಮೈತ್ರಿ ಮಾಡಿಕೊಂಡಿರುವ ಅವರ ವರ್ತನೆ ಹೊಸತೇನಲ್ಲ. ಬಿಹಾರದಲ್ಲಿ ಸಾಮಾಜಿಕ ನ್ಯಾಯ ನೀಡುವುದೇ ಮಹಾಮೈತ್ರಿಕೂಟದ ಉದ್ದೇಶ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ.
ರಾಜಭವನದಲ್ಲಿ ನಿತೀಶ್ ಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿದ್ದ ರಾಜ್ಯಪಾಲರು ಬಲು ಬೇಗನೆ ಇಲ್ಲಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದರು ಎಂದು ಚಟಾಕಿ ಹಾರಿಸಿದರು ರಾಹುಲ್ ಗಾಂಧಿ. ದೇಶದ ಎಲ್ಲಾ ವ್ಯವಸ್ಥೆಗಳಲ್ಲಿ ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಇನ್ನೂ ಪ್ರಾತಿನಿಧ್ಯ ಸಿಕ್ಕಿಲ್ಲ. ಅದಕ್ಕಾಗಿಯೇ ಜಾತಿ ಆಧಾರಿತ ಜನಗಣತಿ ನಡೆಯಬೇಕು ಎಂದು ಪ್ರತಿಪಾದಿಸಿದ್ದಾರೆ. ಮಣಿಪುರ ಸ್ಥಿತಿಯನ್ನು ಉಲ್ಲೇಖೀಸಿದ ಅವರು, ಆ ರಾಜ್ಯದಲ್ಲಿ ನಾಗರಿಕ ಸಂಘರ್ಷ ಉಂಟಾದಂತೆ ಇದೆ ಎಂದರು.
ಸೇರ್ಪಡೆ:
ಇದೇ ವೇಳೆ, ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಒಕ್ಕೂಟಕ್ಕೆ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ ಬಹುಜನ ಆಘಾಡಿ (ವಿಬಿಎ) ಪಕ್ಷ ಸೇರ್ಪಡೆಗೊಳಿಸಲು ತೀರ್ಮಾನಿಸಲಾಗಿದೆ.
ಒಕ್ಕೂಟದ ಬ್ರೈನ್ ಡೆಡ್
ಬ್ರೈನ್ ಡೆಡ್ ಆಗಿರುವ ಇಂಡಿಯಾ ಒಕ್ಕೂಟ ಶೀಘ್ರದಲ್ಲಿಯೇ ಜೀವ ಕಳೆದುಕೊಳ್ಳಲಿದೆ. ಅದರಲ್ಲಿರುವ ಪಕ್ಷಗಳ ಮೈತ್ರಿಯೇ ಅಸ್ವಾಭಾವಿಕವಾದದ್ದು. ಅದು ದೀರ್ಘ ಕಾಲ ಉಳಿಯುವುದಿಲ್ಲ ಎಂದು ಗೊತ್ತಿತ್ತು.
ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ