Advertisement

ದೆಹಲಿ ಸ್ಥಿತಿ ನಮಗೆಂದೂ ಬೇಡ

01:14 PM Feb 12, 2018 | |

ಬೆಂಗಳೂರು: ದೆಹಲಿಯಲ್ಲಿ ತೀವ್ರ ಮಾಲಿನ್ಯ ಸಮಸ್ಯೆಯಿಂದ ಜನರು ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಪರಿಸ್ಥಿತಿ ಬೆಂಗಳೂರಿಗೆ ಬರುವುದು ಬೇಡವೆಂಬ ಉದ್ದೇಶದಿಂದ “ವಿರಳ ಸಂಚಾರ ದಿನ’ ಆಚರಿಸುತ್ತಿರುವುದಾಗಿ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಹೇಳಿದರು.

Advertisement

ಸಾರಿಗೆ ಇಲಾಖೆಯಿಂದ ಭಾನುವಾರ ವಿಧಾನಸೌಧ ಮುಂಭಾಗದಲ್ಲಿ ಆಯೋಜಿಸಿದ್ದ ವಿರಳ ಸಂಚಾರ ದಿನ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶದಿಂದ ಸಾಂಕೇತಿಕವಾಗಿ ಕಾರ್ಯಕ್ರಮ ಆಯೋಜಿಸಿದ್ದು, ನಾಗರಿಕರು ಸಮೂಹ ಸಾರಿಗೆ ಬಳಸುವ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಕೈಜೋಡಿಸಬೇಕಿದೆ.

ವಿರಳ ಸಂಚಾರ ದಿನ ಉತ್ತೇಜನಕ್ಕಾಗಿ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ಟಿಕೆಟ್‌ ದರದಲ್ಲಿ ರಿಯಾಯಿತಿ ಸಹ ನೀಡಲಾಗಿದ್ದು, ಪ್ರತಿ ತಿಂಗಳ 2ನೇ ಭಾನುವಾರ ಸಾರ್ವಜನಿಕರು ಸ್ವಂತ ವಾಹನಗಳ ಬದಲಿಗೆ ಸಮೂಹ ಸಾರಿಗೆ ಬಳಕೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ವಿರಳ ಸಂಚಾರ ದಿನವನ್ನು ಭಾನುವಾರವೇ ಏಕೆ ಆಚರಿಸುತ್ತೀರಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಮುಂದೆ ಈ ಕುರಿತು ಸಾರ್ವಜನಿಕರು ನೀಡುವ ಸಲಹೆಗಳನ್ನು ಆಧರಿಸಿ ಯಾವ ದಿನ ವಿರಳ ಸಂಚಾರ ದಿನ ಆಚರಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು. ಹೊಸ ಯೋಜನೆ ಜಾರಿಗೊಳಿಸಿದಾಗ ಕೆಲವೊಂದು ಗೊಂದಲಗಳು ಎದುರಾಗುವುದು ಸಾಮಾನ್ಯವಾಗಿದ್ದು, ಸರಿಪಡಿಸಿಕೊಳ್ಳಲು ಇಲಾಖೆ ಸಿದ್ಧವಿದೆ ಎಂದು ಹೇಳಿದರು.

ನಗರದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಒತ್ತು ನೀಡುತ್ತಿದ್ದು, ಬಿಎಂಟಿಸಿ ವತಿಯಿಂದ 150 ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ಟೆಂಡರ್‌ ಕರೆಯಲಾಗಿದೆ. ಅದರಂತೆ ಶೀಘ್ರವೇ 40 ಎಲೆಕ್ಟ್ರಿಕ್‌ ಬಸ್‌ಗಳ ಸೇವೆ ಆರಂಭಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. 

Advertisement

ಅಧಿಕಾರಿಗಳಿಗೆ ಹೇಳುವ ತಾಕತ್ತಿದೆ: ಅಧಿಕಾರಿಗಳಿಗೂ ಸಮೂಹ ಸಾರಿಗೆ ಬಳಸುವಂತೆ ಹೇಳುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ರೇವಣ್ಣ ಅವರು, ಪ್ರತಿ ತಿಂಗಳ ಎರಡನೇ ಭಾನುವಾರ ಸರ್ಕಾರಿ ವಾಹನಗಳನ್ನು ಬಳಕೆ ಮಾಡದಂತೆ ಮತ್ತು ಸಮೂಹ ಸಾರಿಗೆ ಬಳಸುವಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಹೇಳುವ ತಾಕತ್ತು ನಮಗಿದೆ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.

ಎಲೆಕ್ಟ್ರಿಕ್‌ ವಾಹನದಲ್ಲಿ ಬಂದ ಸಚಿವರು: ವಿರಳ ಸಂಚಾರ ದಿನದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಹಾಗೂ ಮೇಯರ್‌ ಆರ್‌.ಸಂಪತ್‌ರಾಜ್‌ ಸೇರಿದಂತೆ ಎಲ್ಲ ಅತಿಥಿಗಳು ನಗರದ ಚಾಲುಕ್ಯ ವೃತ್ತದಿಂದ ವಿಧಾನಸೌಧದವರೆಗೆ ಎಲೆಕ್ಟ್ರಿಕ್‌ ಕಾರಿನಲ್ಲಿ ಪ್ರಯಾಣಿಸುವ ಮೂಲಕ ಪರಿಸರ ಸ್ನೇಹಿ ವಾಹನಗಳನ್ನು ಬಳಸುವಂತೆ ಜಾಗೃತಿ ಮೂಡಿಸಿದರು. ಇದೇ ವೇಳೆ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ನಡೆದ ಜಾಥಾದಲ್ಲಿ ನೂರಾರು ಪರಿಸರ ಸ್ನೇಹಿ ವಾಹನ ಬಳಕೆದಾರರು ಭಾಗವಹಿಸಿ ಇ-ವಾಹನ ಬಳಕೆ ಬಗ್ಗೆ ಜಾಗೃತಿ ಮೂಡಿಸಿದರು.

ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಸರ್ಕಾರ ವಿರಳ ಸಂಚಾರ ದಿನ ಆಚರಿಸುತ್ತಿದ್ದು, ಸಾರ್ವಜನಿಕರು ಹಾಗೂ ಯುವಕರು ಸಮೂಹ ಸಾರಿಗೆ ಬಳಸುವ ಮೂಲಕ ಬೆಂಬಲಿಸಬೇಕಿದೆ. ಆ ಮೂಲಕ ನಗರವನ್ನು ದಟ್ಟಣೆ ಮುಕ್ತಗೊಳಿಸಲು ಪಣ ತೊಡಬೇಕು.
-ರೂಪಿಕಾ, ನಟಿ

ಭವಿಷ್ಯದ ಯುವ ಪೀಳಿಗೆಗೆ ಉತ್ತಮವಾದ ಪರಿಸರ ಹಾಗೂ ಶುದ್ಧ ಗಾಳಿ ದೊರೆಯಬೇಕಾದರೆ, ಯುವ ಜನತೆ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಆದ್ಯತೆ ನೀಡಬೇಕಿದೆ. ಜತೆಗೆ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು.
-ಅನೂಪ್‌, ನಟ

ನಗರದಲ್ಲಿ ಎಲೆಕ್ಟ್ರಿಕ್‌ ಕಾರು, ಬೈಕ್‌ಗಳ ಬಳಕೆಗೆ ಒತ್ತು ನೀಡಲಾಗುತ್ತಿದೆ. ಜತೆಗೆ ಮಾಲಿನ್ಯ ಪ್ರಮಾಣ ತಿಳಿಯಲು ನಗರದ ವಿವಿಧೆಡೆ 300 ಕೋಟಿ ರೂ. ವೆಚ್ಚದಲ್ಲಿ ಮಾಲಿನ್ಯ ಮಾಪಕಗಳು ಮತ್ತು ಮಾಲಿನ್ಯ ನಿಯಂತ್ರಣ ಹಾಗೂ ನಿರ್ವಹಣಾ ಕೊಠಡಿ ನಿರ್ಮಿಸಲು ಉದ್ದೇಶಿಸಲಾಗಿದೆ. 
-ಆರ್‌.ಸಂಪತ್‌ರಾಜ್‌, ಮೇಯರ್‌ 

ಬಿಎಂಟಿಸಿಯಲ್ಲಿನ ಬಸ್‌ಗಳ ಸಂಖ್ಯೆಯನ್ನು 6,500ಗಳಿಂದ 10 ಸಾವಿರಕ್ಕೆ ಹೆಚ್ಚಿಸುವ ಮೂಲಕ 80 ಲಕ್ಷ ಪ್ರಾಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಿದೆ. ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಎಲ್ಲ ಸ್ಥಳೀಯ ಸಂಸ್ಥೆಗಳು ಒತ್ತು ನೀಡಬೇಕಿದ್ದು, ಅದರ ಜಾರಿಗಾಗಿ ಎಲ್ಲ ಸ್ಥಳೀಯ ಸಂಸ್ಥೆಗಳನು ಒಳಗೊಂಡ ಒಂದು ಸಮಿತಿ ರಚನೆಯಾಗಬೇಕಿದೆ. 
-ನಾಗರಾಜ್‌ ಯಾದವ್‌, ಅಧ್ಯಕ್ಷರು, ಬಿಎಂಟಿಸಿ

Advertisement

Udayavani is now on Telegram. Click here to join our channel and stay updated with the latest news.

Next