ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬರುವುದರಿಂದ ನಮಗೇನೂ ಭಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
71ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಾಜ್ಯ ಸರ್ಕಾರ ನಾಲ್ಕು ವರ್ಷಗಳಲ್ಲಿ ಉತ್ತಮ ಕೆಲಸ ಮಾಡಿದೆ. ಆದರೆ, ಅಮಿತ್ ಶಾ ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದರು.
ಜೈಲಿಗೆ ಹೋಗಿ ಬಂದವರನ್ನು ಬಿಜೆಪಿಯವರು ತಮ್ಮ ನಾಯಕರೆಂದು ಬಿಂಬಿಸುತ್ತಿದ್ದಾರೆ. ಅಂದ ಮೇಲೆ ಭ್ರಷ್ಟಾಚಾರದ ಅರ್ಥ ಏನೆಂದು ಅಮಿತ್ ಶಾ ಹೇಳಬೇಕು. ಹಿಂದಿನ ಸರ್ಕಾರದಲ್ಲಿ ಅಕ್ರಮ ಗಣಿಗಾರಿಕೆ, ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋಗಿ ಬಂದವರು ಬಿಜೆಪಿಯಲ್ಲಿಯೇ ಇದ್ದಾರೆ. ಅಮಿತ್ ಶಾ ಮೊದಲು ತಮ್ಮ ಮನೆ ಸರಿಪಡಿಸಿಕೊಳ್ಳಲಿ ಎಂದು ಪರಮೇಶ್ವರ್ ಸವಾಲು ಹಾಕಿದರು. ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿದೆ. ಯುವಕರಿಗೆ ಉದ್ಯೋಗ ಸೃಷ್ಟಿಸಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿತ್ತು. ಆದರೆ, ಮೂರು ವರ್ಷಗಳಲ್ಲಿ ಕೇವಲ ಮೂರು ಲಕ್ಷ ಉದ್ಯೋಗ ನೀಡಿದ್ದಾರೆ ಎಂದು ಟೀಕಿಸಿದರು.
ಚುನಾವಣೆಗಾಗಿ ಸಮಾವೇಶ: ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. 198 ವಾರ್ಡ್‌ಗಳಲ್ಲಿ ಕ್ಯಾಂಟೀನ್ ತೆರೆಯಲಾಗುತ್ತಿದೆ. ಕಡಿಮೆ ದರದಲ್ಲಿ ತಿಂಡಿ, ಊಟ ನೀಡಲು ಯೋಜಿಸಲಾಗಿದೆ. ಚುನಾವಣೆ ದೃಷ್ಟಿಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆಂದು ಪರಮೇಶ್ವರ್ ತಿಳಿಸಿದರು.
ಬಿಜೆಪಿಯವರು ಹಿಂದೆ ನಡೆದ ಕೆಲವು ರಾಜ್ಯಗಳ ಚುನಾವಣೆಯಲ್ಲಿ ಮತ ಯಂತ್ರಗಳನ್ನು ದುರುಪಯೋಗ ಮಾಡಿರುವುದು ಸಾಬೀತಾಗಿದೆ. ಆದರೆ, ಇಂತಹ ತಂತ್ರಗಳು ಕರ್ನಾಟಕದಲ್ಲಿ ನಡೆಯುವುದಿಲ್ಲ. ಅಮಿತ್ ಶಾ ಬಂದಿದ್ದರಿಂದ ನಮಗೇನೂ ಭಯವಾಗಿಲ್ಲ. ಅವರಿಗೆ ನಮ್ಮ ಸರ್ಕಾರದ ಸಾಧನೆಗಳನ್ನು ಕಂಡು ಭಯವಾಗಿರುವುದರಿಂದ ಇಲ್ಲಿಗೆ ಬಂದು ರಾಜ್ಯ
ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
– ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ