Advertisement
ಅಷ್ಟಕ್ಕೂ ಭಾರತೀಯರಿಗೆ ಇಂಗ್ಲೆಂಡ್ ಎಂಬುದೇ ಒಂದು ವೀಕ್‌ನೆಸ್. ನಮ್ಮನ್ನವರು ಆಳಿ ನಾವು ಒಡೆಯ ಎಂಬ ಅಂಶವನ್ನು ಮನಸ್ಸಿನಲ್ಲಿ ತುರುಕಿದ್ದರೋ ಏನೋ, ಹಾಗಾಗಿಯೇ ಕೆಲ ವರ್ಷಗಳ ಹಿಂದೆ ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಅವಕಾಶ ಗಿಟ್ಟಿಸುವುದು ಭಾರತೀಯ ಕ್ರಿಕೆಟಿಗರ ಪರಮ ಗುರಿಯಾಗಿತ್ತು. ಅಲ್ಲಿನ ಅವರ ಶತಕ, ಐದು ವಿಕೆಟ್ ಗೊಂಚಲು ಕೂಡ ಸುದ್ದಿಯಾಗುತ್ತಿತ್ತು. ಹಣಕಾಸಿನ ಲಾಭದ ಹೊರತಾಗಿ ಕೌಂಟಿ ಕ್ರಿಕೆಟ್‌ನ ಗುಣಮಟ್ಟ ಏನೂ ಅಲ್ಲ ಎಂದು ಗೊತ್ತಾಗಿದ್ದು ಇತ್ತೀಚಿನ ವರ್ಷಗಳಲ್ಲಿ. ಅವತ್ತು ಪ್ರತಿಷ್ಠಿತ ಪ್ರಶಸ್ತಿ ಎಂಬ ವಿಸ್ಡನ್ ಗೌರವದ ಬಗ್ಗೆ ಸುನಿಲ್ ಗವಾಸ್ಕರ್ ಬೆಳಕು ಚೆಲ್ಲಿದ ನಂತರ ಮಾತ್ರವೇ ನಮಗೆ ಸತ್ಯ ಅರಿವಾಗಿದ್ದು. ವಿಸ್ಡನ್ ಎಂಬುದು ಅಲ್ಲಿನ ನೆಲದಲ್ಲಿ ಆ ಕ್ರಿಕೆಟ್ ಋತುವಿನಲ್ಲಿನ ಸಾಧನೆ ಆಧಾರಿತ ಪ್ರಶಸ್ತಿ. ಅದನ್ನು ಅದಕ್ಕಿಂತ ಹೆಚ್ಚಾಗಿ ನೋಡಬೇಕಾಗಿಲ್ಲ!
ಆ ಮಟ್ಟಿಗೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸ್ವಲ್ಪ ಹೆಚ್ಚು ತೂಕದ್ದು. ಇಲ್ಲಿ ವಿಶ್ವದ ಟಾಪ್ ಬ್ಯಾಡ್ಮಿಂಟನ್ ಆಟಗಾರರು ಪಾಲ್ಗೊಳ್ಳುತ್ತಾರೆ. ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್‌ನ ಸೂಪರ್ ಸೀರೀಸ್‌ನ ಐದು ಸ್ಪರ್ಧೆಗಳಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಕೂಡ ಒಂದು. ಇದು 1899ರಲ್ಲಿ ಆರಂಭಗೊಂಡ ವಿಶ್ವದ ಅತ್ಯಂತ “ಪುರಾತನ ಬ್ಯಾಡ್ಮಿಂಟನ್ ಸ್ಪರ್ಧೆಯೂ ಹೌದು. 1980ರಲ್ಲಿ ಪಡುಕೋಣೆ ಇದನ್ನು ಗೆದ್ದಾಗ ಭಾರತೀಯರ ಗಮನ ಅತ್ತ ಸರಿದಿದ್ದು ಸುಳ್ಳಲ್ಲ. ಸದಾ ಚಾಂಪಿಯನ್‌ಗಳ ಬರ ಅನುಭವಿಸುವ ಭಾರತಕ್ಕೆ ಕರ್ನಾಟಕದ ಕುಂದಾಪುರ ಸಮೀಪದ ಪಡುಕೋಣೆಯ ಪ್ರಕಾಶ್ 1979ರ ಸಮಯದಲ್ಲಿ ದನೀಶ್ ಓಪನ್, ಸ್ವೀಡಿಷ್ ಓಪನ್ ಸಂಪಾದಿಸಿದಾಗಲೇ ಮೈ ನವಿರೇಳಿತ್ತು. ಮುಂದಿನ ಋತುವಿನಲ್ಲಿ ಇಂಡೋನೇಷಿಯಾದ ಲೀಮ್ ಸ್ವೀ ಕಿಂಗ್‌ರನ್ನು ಫೈನಲ್‌ನಲ್ಲಿ ಮಣಿಸಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಗೆದ್ದಾಗ ದೇಶ ಉಘೇ ಎಂದಿತ್ತು. ಇವರ ಪುತ್ರಿ ದೀಪಿಕಾ ಚಲನಚಿತ್ರರಂಗಕ್ಕೆ ಬರುವವರೆಗೆ ಪಡುಕೋಣೆಗೆ ಪ್ರಕಾಶ್ ಅನ್ವರ್ಥರಾಗಿದ್ದರು! ಭಾರತ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಇನ್ನೊಮ್ಮೆ ಮೆರೆದಿತ್ತು. 2001ರಲ್ಲಿ ಪುಲ್ಲೇಲ ಗೋಪಿಚಂದ್ ಕೂಡ ಈ ಪ್ರಶಸ್ತಿಯನ್ನು ಗೆದ್ದು ತ್ರಿವರ್ಣ ಧ್ವಜ ಹಾರಿಸಿದ್ದರು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಉಪಾಂತ್ಯದಲ್ಲಿ ಅವತ್ತಿನ ನಂಬರ್ ಒನ್ ಪೀಟರ್ ಗಡೆ ಹಾಗೂ ಫೈನಲ್‌ನಲ್ಲಿ ಚೀನಾದ ಚೆನ್ ಹಾಂಗ್‌ರನ್ನು ಪರಾಭವಗೊಳಿಸಿದ್ದನ್ನು ಮರೆಯಲಾಗುವುದಿಲ್ಲ. ಗಮನಿಸಬೇಕಾದುದೆಂದರೆ, ಭಾರತಕ್ಕೆ ಮೂರನೇ ಪ್ರಶಸ್ತಿ ಪಡೆಯಲು 2017ರಲ್ಲಿ ಅತಿ ಹೆಚ್ಚಿನ ಅವಕಾಶವಿದೆ ಎಂದು ಪರಿಭಾವಿಸಲಾಗಿತ್ತು. ಅದಕ್ಕೆ ಕಾರಣಗಳೂ ಇತ್ತು. ಆದರೆ……
Related Articles
Advertisement
ಭರವಸೆಗಳಿಗೆ ತಣ್ಣೀರು!
ಮತ್ತೆ ಈ ವರ್ಷದ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ಗೆ ಬಂದರೆ, ಸೈನಾ ಮೊದಲ ಸುತ್ತಿನಲ್ಲಿಯೇ ಹಾಲಿ ಚಾಂಪಿಯನ್ ಜಪಾನ್‌ನ ನೋಜೋಮಿ ಓಕುಹರಾರನ್ನು “ಚಿತ್ ಮಾಡಿ ಭರವಸೆಯ ಬೆಳಕು ನೀಡಿದರು. ಇತ್ತ ಸಿಂಧು ಕೂಡ ಕ್ವಾರ್ಟರ್ ಫೈನಲ್ ಘಟ್ಟ ತಲುಪಿದರು. ಡ್ರಾ ಪ್ರಕಾರ ಈ ಇಬ್ಬರು ಆಟಗಾರ್ತಿಯರು ಎಂಟರ ಘಟ್ಟದ ತಮ್ಮ ತಮ್ಮ ಪಂದ್ಯಗಳನ್ನು ಗೆದ್ದಿದ್ದರೆ ಉಪಾಂತ್ಯದಲ್ಲಿ ಈ ಇಬ್ಬರೇ ಮುಖಾಮುಖೀಗಳಾಗುತ್ತಿದ್ದರು. ಕೊನೆ ಪಕ್ಷ ಒಬ್ಬ ಆಟಗಾರ್ತಿ ಫೈನಲ್‌ನಲ್ಲಿರುವುದು ಪಕ್ಕಾ ಆಗುತ್ತಿತ್ತು. ಆದರೆ ಇಬ್ಬರೂ ಕ್ವಾರ್ಟರ್ ಫೈನಲ್‌ನಲ್ಲಿ ಪರಾಜಿತರಾಗಿ ನಿರಾಶೆ ಮೂಡಿಸಿದರು. ಇದೇ ವೇಳೆ ಸೋಲನ್ನು ತೀರಾ ನಿರಾಶಾದಾಯಕ ಎನ್ನುವಂತೆಯೂ ಇಲ್ಲ. ಗಾಯದಿಂದ ಹಿಂತಿರುಗಿ ಬಂದಿರುವ ಸೈನಾರ ರ್‍ಯಾಂಕಿಂಗ್ ಗೆಚ್ಚು ಪ್ರಗತಿ ಕಂಡಿಲ್ಲ. ಈಕೆ ವಿಶ್ವದ ನಂ. 3 ಆಟಗಾರ್ತಿ ಸುನ್ ಜಿ ಹುವಾನ್ ವಿರುದ್ಧ ಹೋರಾಟದ ಸೋಲುಂಡರೆ, ಸಿಂಧು ವಿಶ್ವದ ಅಗ್ರಕ್ರಮಾಂಕಿತೆ ಥೈ ಜು ಯಿಂಗ್ ಎದುರು ಸೋಲೊಪ್ಪಿಕೊಳ್ಳಬೇಕಾಯಿತು.
ಮುಂದಿನ ಬಾರಿ ಮತ್ತೆ ಪ್ರಯತ್ನ ಎಂದು ತಿಪ್ಪೆ ಸಾರಿಸುವುದು ಸುಲಭ. ಸೈನಾರಿಗೆ ಫಿಟ್‌ನೆಸ್ ಉಳಿಸಿಕೊಳ್ಳುವುದೇ ಸವಾಲಿನ ಕೆಲಸ. 21ರ ಹರೆಯದ ಸಿಂಧು ಒಲಂಪಿಕ್ಸ್ ಫಾರಂನ್ನು ಮಗದೊಮ್ಮೆ ಕಂಡುಕೊಳ್ಳಬೇಕು. ಇವರಲ್ಲದಿದ್ದರೆ ಮತ್ತೂಬ್ಬರು ಎಂದು ಹೇಳುವುದಾದರೆ, ಹೊಸ ಪ್ರತಿಭೆ ಅವತರಿಸಬೇಕು. ಭಾರತೀಯರ ಶಬರಿ ಕೆಲಸ ಈ ಕ್ಷೇತ್ರದಲ್ಲೂ ಮುಂದುವರೆಯಬೇಕಾಗಬಹುದು!
ಮಾ.ವೆಂ.ಸ.ಪ್ರಸಾದ್