ಬೀಜಿಂಗ್: ಚೀನಾದ 22 ಶತಕೋಟಿ ಡಾಲರ್ ನ ಮೂರು ಮಹತ್ವದ ಯೋಜನೆಗಳನ್ನು ರದ್ದು ಮಾಡುವುದಾಗಿ ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್ ಅವರು ಮಂಗಳವಾರ ತಿಳಿಸಿದ್ದಾರೆ.
ಚೀನಾ ಪ್ರವಾಸದ ವೇಳೆಯೇ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಷ್ಟೊಂದು ಬೃಹತ್ ಪ್ರಮಾಣದ ಸಾಲದ ಹೊರೆಯನ್ನು ತಾಳಲು ಸಾಧ್ಯವಿಲ್ಲ. ಅಲ್ಲದೇ ಸಾಲವನ್ನು ತೀರಿಸಲು ಬೇಕಾದ ದಾರಿ ಸಿಗುವವರೆಗೆ ಯೋಜನೆಯನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ.
ಶತಕೋಟಿ ಡಾಲರ್ ನ ಯೋಜನೆಯನ್ನು ರದ್ದುಗೊಳಿಸಿರುವುದರ ಹಿಂದಿನ ಕಾರಣವನ್ನು ಚೀನಾ ಪ್ರಧಾನಿ ಕ್ಸಿ ಜಿನ್ ಪಿಂಗ್ ಹಾಗೂ ಪ್ರಧಾನಿ ಲಿ ಕೆಕಿಯಾಂಗ್ ಅರ್ಥೈಸಿಕೊಂಡಿದ್ದಾರೆ ಮತ್ತು ಸಮ್ಮತಿಸಿದ್ದಾರೆ ಎಂದು ಮಹತಿರ್ ಮಲೇಷ್ಯಾ ಸುದ್ದಿಗಾರರ ಜೊತೆ ಮಾತನಾಡುತ್ತ ವಿವರಿಸಿದರು.
ಮಲೇಷ್ಯಾದಲ್ಲಿ 250 ಶತಕೋಟಿ ಡಾಲರ್ ಹೂಡಿಕೆ ಮಾಡುವ ಮೂಲಕ ಚೀನಾ ಹಾಗೂ ಮಲೇಷ್ಯಾಕ್ಕೆ ಲಾಭದಾಯಕವಾಗಲಿದೆ ಎಂದು ಚೀನಾ ತಿಳಿಸಿತ್ತು.
20 ಬಿಲಿಯನ್ ಡಾಲರ್ ಮೊತ್ತದ ಈಸ್ಟ್ ಕೋಸ್ಟ್ ರೈಲ್ವೆ ಲಿಂಗ್, 2.3 ಬಿಲಿಯನ್ ಡಾಲರ್ ಮೊತ್ತದ 2 ಎನರ್ಜಿ ಪೈಪ್ ಲೈನ್ ಯೋಜನೆಗಾಗಿ ಮಲೇಷ್ಯಾ ಆರ್ಥಿಕ ನೆರವಿಗಾಗಿ ಬೇಡಿಕೆ ಇಟ್ಟಿತ್ತು. ಇದೀಗ ಯೋಜನೆಯನ್ನು ಕೈಬಿಟ್ಟಿರುವುದಾಗಿ ಮಲೇಷ್ಯಾ ಪ್ರಧಾನಿ ಮಹತಿರ್ ತಿಳಿಸಿದ್ದಾರೆ.