Advertisement

ಆಷಾಢ ಮುಗಿದ್ರೂ ಸಂಪುಟ ವಿಸ್ತರಣೆಗೆ ಸಿಗದ ಮುಹೂರ್ತ

06:10 AM Aug 11, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಹಂತದಲ್ಲಿ ಸಂಪುಟ ಸೇರಲು ವಿಫ‌ಲರಾದವರಿಗೆ ಆಷಾಢ ಕಳೆಯುತ್ತಿದ್ದರೂ ಸಂಪುಟದಲ್ಲಿ ಸೇರ್ಪಡೆಗೆ ಮುಹೂರ್ತ ಕೂಡಿ ಬರುವ ಲಕ್ಷಣ ಕಾಣಿಸುತ್ತಿಲ್ಲ. ಶ್ರಾವಣ ಬಂದರೂ ಸ್ಥಳೀಯ ಸಂಸ್ಥೆಯ ಚುನಾವಣೆಗೆ ವಿಘ್ನ ಕಾಡುತ್ತಿದ್ದು, ಆನಂತರವೂ, ಪಿತೃಪಕ್ಷ, ಧನುರ್ಮಾಸ ಬರುವುದರಿಂದ ದೀಪಾವಳಿವರೆಗೂ ಸಂಪುಟ ವಿಸ್ತರಣೆ ಅನುಮಾನ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ. 

Advertisement

ಮೊದಲ ಬಾರಿ ಸಂಪುಟ ವಿಸ್ತರಣೆಯಿಂದ ಕಾಂಗ್ರೆಸ್‌ ಪಕ್ಷದಲ್ಲಿ ಸಾಕಷ್ಟು ಅತೃಪ್ತಿ ಕಂಡು ಬಂದು ಪಕ್ಷದ ನಾಯಕರ ವಿರುದ್ಧ ಹಿರಿಯ ಶಾಸಕರೇ ಬಹಿರಂಗ ಬಂಡಾಯ ಸಾರಿದ್ದರು. ಅವರನ್ನು ಸಮಾಧಾನ ಪಡಿಸಲು ಕಾಂಗ್ರೆಸ್‌ ಹೈ ಕಮಾಂಡ್‌ ಸಾಕಷ್ಟು ತ್ರಾಸು ಪಡಬೇಕಾಯಿತು. ಸುಮಾರು 20ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಕೇವಲ ಆರು ಸ್ಥಾನಗಳು ಖಾಲಿ ಇರುವುದರಿಂದ ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ, ಸಂಪುಟದಲ್ಲಿ ಸ್ಥಾನ ಸಿಗದವರು ಮತ್ತೆ ಬಂಡಾಯ ಏಳಬಹುದು. ಬಿಜೆಪಿ ಅದರ ಲಾಭ ಪಡೆಯುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನು ಪಕ್ಷದ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ಅವರು ಹೈ ಕಮಾಂಡ್‌ ನಾಯಕರಿಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಶ್ರಾವಣದಲ್ಲಿ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಸಚಿವಾಕಾಂಕ್ಷಿ ಶಾಸಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅಲ್ಲದೇ ಆಗಸ್ಟ್‌ 13ರಂದು ರಾಹುಲ್‌ ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದು, ಆಗಸ್ಟ್‌ 15ರ ನಂತರ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡುವ ಕುರಿತು ಚರ್ಚಿಸಲು ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ನಿರ್ಧರಿಸಿದ್ದಾರೆ. 

ಆದರೆ, ಆಗಸ್ಟ್‌ ಮಾಸಾಂತ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಇರುವುದರಿಂದ ಚುನಾವಣೆಗೂ ಮೊದಲು ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಅದು ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆ ಕಾರಣಕ್ಕೆ ಶ್ರಾವಣ ಬಂದರೂ ಸಂಪುಟ ವಿಸ್ತರಣೆ ಮಾಡುವುದು ಅನುಮಾನ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಶ್ರಾವಣ ಮಾಸ ಮುಗಿದ ತಕ್ಷಣ ಸೆಪ್ಟಂಬರ್‌ ತಿಂಗಳಲ್ಲಿ ಪಿತೃಪಕ್ಷ ಬರುವುದರಿಂದ ಆ ಸಂದರ್ಭದಲ್ಲಿಯೂ ಸಂಪುಟ ವಿಸ್ತರಣೆ ಮಾಡುವುದು ಅನುಮಾನ. ನಂತರ ಧನುರ್ಮಾಸ ಬರಲಿದ್ದು, ದೀಪಾವಳಿ ಮುಗಿಯುವವರೆಗೂ ಒಂದಿಲ್ಲೊಂದು ಕಾರಣದಿಂದ ಸಂಪುಟ ವಿಸ್ತರಣೆಗೆ ವಿಘ್ನಗಳು ಬರುವುದರಿಂದ ಅದನ್ನೇ ನೆಪ ಮಾಡಿಕೊಂಡು ವರ್ಷಾಂತ್ಯದವರೆಗೂ ಸಂಪುಟ ವಿಸ್ತರಿಸದೆ ತಳ್ಳಿ ಹಾಕುವ ಪ್ರಯತ್ನ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

Advertisement

ಆಗಸ್ಟ್‌ ಎರಡನೇ ವಾರದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಈಗಾಗಲೇ ಸಚಿವಾಕಾಂಕ್ಷಿಗಳು ದೆಹಲಿ ಮಟ್ಟದಲ್ಲಿ ಲಾಬಿ ಆರಂಭಿಸಿದ್ದು, ಕೆಲವು ಶಾಸಕರು ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಕೇವಲ ಆರು ಜನರಿಗೆ ಸಚಿವ ಸ್ಥಾನ ನೀಡಿ ಉಳಿದ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸುವ ಪಕ್ಷದ ನಾಯಕರ ಲೆಕ್ಕಾಚಾರ ಫ‌ಲ ಕೊಡುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಹುತೇಕ ಹಿರಿಯ ಶಾಸಕರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವುದರಿಂದ ಸಚಿವ ಸ್ಥಾನ ವಂಚಿತರು ಬಿಜೆಪಿ ಕಡೆ ಮುಖ ಮಾಡಿದರೆ, ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ಪಕ್ಷದ ಹಿರಿಯ ನಾಯಕರದ್ದಾಗಿದೆ. ಹೀಗಾಗಿ, ಲೋಕಸಭೆ ಚುನಾವಣೆ ಘೋಷಣೆಗೆ ಮುಂಚೆ ಸಚಿವ ಸ್ಥಾನ ನೀಡಿ ಸಮಾಧಾನ ಮಾಡುವ ಪ್ರಯತ್ನ ಮಾಡಬಹುದು ಎಂಬ ಅಭಿಪ್ರಾಯವನ್ನು ಹಿರಿಯ ನಾಯಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ ದೀಪಾವಳಿ ಮುಗಿಯುವವರೆಗೂ ಸಚಿವಾಕಾಂಕ್ಷಿಗಳಿಗೆ ಶುಭ ಗಳಿಗೆ ಬರುವುದು ಅನುಮಾನ ಎಂದು ಹೇಳಲಾಗುತ್ತಿದೆ. 

ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಕುರಿತಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ನಂತರ ಪ್ರಕ್ರಿಯೆ ನಡೆಯಲಿದೆ. ಸಂಪುಟ ವಿಸ್ತರಣೆಗೆ ನಾವು ಈಗಾಗಲೇ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಈ ಬಗ್ಗೆ ಹೈ ಕಮಾಂಡ್‌ ಸೂಚನೆ ನೀಡಿದ ತಕ್ಷಣ ಸಂಪುಟ ವಿಸ್ತರಣೆಯಾಗಲಿದೆ. 
– ಈಶ್ವರ್‌ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ. 

Advertisement

Udayavani is now on Telegram. Click here to join our channel and stay updated with the latest news.

Next