ಮುಂಬಯಿ: ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ ಬೆಂಗಳೂರು ತನ್ನ ಆರಂಭಿಕ ಪಂದ್ಯದಲ್ಲಿ ಇನ್ನೂರರ ಗಡಿ ದಾಟಿಯೂ ಪಂಜಾಬ್ ಕಿಂಗ್ಸ್‌ಗೆ ಶರಣಾಗಿದೆ.
ಆರ್‌ಸಿಬಿ 200 ಪ್ಲಸ್ ಸ್ಕೋರ್ ದಾಖಲಿಸಿದ ವೇಳೆ ಅನುಭವಿಸಿದ 4ನೇ ಸೋಲು ಇದೆಂಬುದು ಆಘಾತಕಾರಿ ಸಂಗತಿ.
ಆರ್‌ಸಿಬಿಯ ಬ್ಯಾಟಿಂಗ್ ಬಲಾಡ್ಯವಾಗಿದ್ದರೂ ಬೌಲಿಂಗ್ ದುರ್ಬಲವಾಗಿದೆ ಮತ್ತು ಲಯವನ್ನೂ ಕಳೆದುಕೊಂಡಿದೆ ಎಂಬುದು ಇದರಿಂದ ಸಾಬೀತಾಗಿದೆ. ಪಂಜಾಬ್ ತಂಡದಲ್ಲಿ ಘಟಾನುಘಟಿ ಬಿಗ್ ಹಿಟ್ಟರ್ ಇದ್ದಾರೆಂಬುದನ್ನು ಒಪ್ಪಿಕೊಳ್ಳಲೇಕು. ಆದರೆ ಬೆಂಗಳೂರಿನ ಬೌಲಿಂಗ್ ದೌರ್ಬಲ್ಯ ಮಾತ್ರ ಗಂಭೀರ ಮಟ್ಟದಲ್ಲಿದೆ ಎಂಬುದು ಮೊದಲ ಪಂದ್ಯದಲ್ಲೇ ಸಾಬೀತಾಗಿದೆ. ಪಂಜಾಬ್ ಒಂದು ಓವರ್ ಬಾಕಿ ಇರುವಾಗಲೇ 5 ವಿಕೆಟಿಗೆ 208 ರನ್ ಬಾರಿಸಿ ಗೆದ್ದು ಬಂದಿತು. ಇನ್ನೊಂದೆಡೆ ಆರ್‌ಸಿಬಿ ಬರೋಬ್ಬರಿ 21 ವೈಡ್ ಎಸೆತಗಳನ್ನೆಸೆದು ಐಪಿಎಲ್ ದಾಖಲೆ ಸ್ಥಾಪಿಸಿತು!
ಸಿರಾಜ್ 14 ವೈಡ್!
ಆರ್‌ಸಿಬಿ ಎಸೆದ ಈ 21 ವೈಡ್‌ಗಳಲ್ಲಿ ಮೊಹಮ್ಮದ್ ಸಿರಾಜ್ ಒಬ್ಬರಿಂದಲೇ 14 ವೈಡ್ ಹೋದದ್ದು ಚಿಂತಿಸಬೇಕಾದ ಸಂಗತಿ. ಕಾರಣ, ಅವರು ಆರ್‌ಸಿಬಿಯ ಸ್ಟ್ರೈಕ್ ಬೌಲರ್‌ಗಳಲ್ಲಿ ಒಬ್ಬರು. 4 ಓವರ್‌ಗಳಿಂದ ಅವರು ನೀಡಿದ್ದು 59 ರನ್. ಉಳಿದಂತೆ ಡೇವಿಡ್ ವಿಲ್ಲಿ, ಆಕಾಶ್‌ದೀಪ್, ಬಹು ಕೋಟಿಯ ಆಟಗಾರ ವನಿಂದು ಹಸರಂಗ, ಹರ್ಷಲ್ ಪಟೇಲ್ ಕೂಡ ಪಂಜಾಬ್ ಬ್ಯಾಟರ್‌ಗಳಿಂದ ಚೆನ್ನಾಗಿ ದಂಡಿಸಿಕೊಂಡರು.
ಐಪಿಎಲ್ ಇನ್ನಿಂಗ್ಸ್ ಒಂದರಲ್ಲಿ ಅತ್ಯಧಿಕ ವೈಡ್ ಎಸೆದ ದಾಖಲೆ ಪಂಜಾಬ್ ತಂಡದ ಹೆಸರಲ್ಲಿತ್ತು. 2011ರ ಕೊಚ್ಚಿ ಟಸ್ಕರ್ ಕೇರಳ ವಿರುದ್ಧ ಅದು 19 ವೈಡ್ ಬಾಲ್ ಎಸೆದಿತ್ತು. ಉಳಿದಂತೆ 18 ವೈಡ್ ಎಸೆತಗಳ 3 ನಿದರ್ಶನಗಳಿವೆ. ಈ ಯಾದಿಯಲ್ಲಿ ಆರ್‌ಸಿಬಿ 2 ಸಲ ಕಾಣಿಸಿಕೊಂಡಿದೆ. ಉಳಿದೊಂದು ತಂಡ ರಾಜಸ್ಥಾನ್ ರಾಯಲ್ಸ್.