Advertisement

ನಾವ್‌ ಕೇಳಿದ್ದು…ಇನ್ನೂ ಈಡೇರದ್ದು: ಮುತ್ತಾತನ ಕಾಲದಿಂದಲೂ `ಮತ್ತಾವ’ನ್ನೇ ಮರೆತರು!

09:06 PM Mar 09, 2023 | Team Udayavani |

ಕಾರ್ಕಳ: ಮುತ್ತಾತನ ಕಾಲದಿಂದಲೂ ಅರಣ್ಯದ ನಡುವೆ ಬದುಕುತ್ತಿರುವ ಮತ್ತಾವು ಭಾಗದ ಜನವಸತಿ ಪ್ರದೇಶಕ್ಕೆ ತೆರಳಲು ಇನ್ನೂ ಸೇತುವೆ ನಿರ್ಮಾಣಗೊಂಡಿಲ್ಲ.

Advertisement

ಈ ಪರಿಸರಕ್ಕೆ ತೆರಳಬೇಕಿದ್ದರೆ ತಾತ್ಕಾಲಿಕ ಸೇತುವೆಯೇ ಗತಿ. ದಶಕಗಳಿಂದಲೂ ಈ ತಾತ್ಕಾಲಿಕ ಸೇತುವೆ ಹೊರತುಪಡಿಸಿ ಶಾಶ್ವತ ಸೇತುವೆಯ ಬೇಡಿಕೆ ಈಡೇರಿಲ್ಲ. ಕೇಳುವಷ್ಟು ಕೇಳಿಯಾಗಿದೆ, ಇನ್ನೂ ಈಡೇರಿಲ್ಲ.

ಮಳೆಗಾಲದಲ್ಲಿ 6 ತಿಂಗಳು ಕೃತಕ ಕಾಲು ಸಂಕವನ್ನೇ ಆಶ್ರಯಿಸಬೇಕು. ಇಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಸೇರಿ 170ರಷ್ಟು ಮಂದಿ ಇದೇ ಅಪಾಯಕಾರಿ ಸೇತುವೆ ಬಳಸಿ ನಿತ್ಯ ಶಾಲೆಗೆ, ಕಾರ್ಖಾನೆಗಳಿಗೆ ಕೆಲಸಕ್ಕೆ ತೆರಳುತ್ತಿದ್ದಾರೆ. ಪ್ರತೀ ಬಾರಿ ಈ ತಾತ್ಕಾಲಿಕ ಸೇತುವೆಯನ್ನು (ಸಂಕ) ನಿರ್ಮಿಸಿಕೊಳ್ಳುವುದು ಇವರೇ.
ಕೆಲವೊಮ್ಮೆ ನೆರೆಗೆ ಸಂಕ ಕೊಚ್ಚಿಕೊಂಡು ಹೋದದ್ದಿದೆ. ಆಗ ಹೊಸ ಸಂಕ ಕಟ್ಟುವ ತನಕ ಮನೆ ಬಿಟ್ಟು ಕದಲುವಂತಿಲ್ಲ. ಹೊರಗಿನ ಸಂಪರ್ಕ ಸಂಪೂರ್ಣ ಬಂದ್‌. ಮಕ್ಕಳು ಶಾಲೆಗೆ ರಜೆ ಹಾಕಿ ಪಾಠ ಕಳೆದುಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಕು. ಜತೆಗೆ ಯುವಜನರು ಮಳೆಗಾಲದ ಮುನ್ನವೇ ಇನ್ನೊಂದು ಬದಿಗೆ ದ್ವಿಚಕ್ರ ವಾಹನ ದಾಟಿಸಿ ತಂದಿಟ್ಟುಕೊಳ್ಳುತ್ತಾರೆ.

ತುರ್ತು ಪರಿಸ್ಥಿತಿಗೆ ಸಿದ್ಧತೆ. ಮಳೆಗಾಲಕ್ಕೆ ಬೇಕಾದ ಅಕ್ಕಿ, ಆಹಾರಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳಬೇಕು. ಯಾವಾಗ ಏನಾದರೂ ಆಗಬಹುದು ಎಂಬ ಭೀತಿಯಲ್ಲೇ ಮಳೆಗಾಲವನ್ನು ಕಳೆಯುವ ಪರಿಸ್ಥಿತಿ ಈ ನಿವಾಸಿಗಳದ್ದು.

ಪ್ರತೀ ಚುನಾವಣೆ ಬಂದಾಗಲೂ ಹೊಸಬರು ಬಂದಾರು, ಸೇತುವೆ ಆದೀತು ಎಂದುಕೊಳ್ಳುತ್ತಾರೆ. ಆದರೆ ಅವಧಿ ಮುಗಿದಾಗ ಗೆದ್ದ ಜನಪ್ರತಿನಿಧಿಗಳು ಹಳಬರಾಗುತ್ತಾರೆ, ಇವರ ಬೇಡಿಕೆ ಇನ್ನೂ ಹಳತಾಗುತ್ತದೆ !

Advertisement
Advertisement

Udayavani is now on Telegram. Click here to join our channel and stay updated with the latest news.

Next