ಬೆಂಗಳೂರು: ಚೀನಾ ಗಡಿ ಭಾಗದಲ್ಲಿ ನಡೆದಿರುವುದೇ ಒಂದು, ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಮತ್ತೂಂದು. ಹೀಗಾಗಿ ಪ್ರಧಾನಿ ಸತ್ಯ ಬಹಿರಂಗ ಪಡಿಸಬೇಕು ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚೀನಾ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಸಾಥ್ ನೀಡಲಿದ್ದು ಕೇಂದ್ರ ಸರ್ಕಾರ ಚೀನಾ ದಾಳಿ, ಭಾರತೀಯ ಯೋಧರ ಹತ್ಯೆ ವಿಚಾರದಲ್ಲಿ ಯಾವುದನ್ನೂ ಮರೆಮಾಚದೇ ವಾಸ್ತವವನ್ನು ಸ್ಪಷ್ಟಪಡಿಸಬೇಕು ಎಂದರು.
ಗಲ್ವಾನ್‌ನಲ್ಲಿ ಮೋಸದಿಂದ ನಮ್ಮ ಸೈನಿಕರ ಮೇಲೆ ಮುಗಿಬಿದ್ದಿದ್ದಾರೆ. ಆಂಧ್ರದ ಕರ್ನಲ್ ಸಂತೋಷ್ ಬಾಬು ಸೇರಿದಂತೆ ಒಟ್ಟು 20 ಮಂದಿ ಭಾರತೀಯ ಸೈನಿಕರ ಹತ್ಯೆಯಾಗಿದೆ. ಕಾಂಗ್ರೆಸ್ ಈ ಘಟನೆಯನ್ನು ಖಂಡಿಸುತ್ತದೆ. ಪಕ್ಷ , ಸರ್ಕಾರ ಯಾವುದೇ ಇರಬಹುದು. ಆದರೆ, ದೇಶದ ಹಿತಕ್ಕೆ ನಾವೆಲ್ಲರೂ ಆದ್ಯತೆ ನೀಡಬೇಕು. ಚೀನಾದ ನರಿ ಬುದ್ಧಿಯನ್ನು ಖಂಡಿಸಬೇಕು. ಆದರೆ, ಇಷ್ಟು ದೊಡ್ಡ ಘಟನೆ ನಡೆದರೂ ಸತ್ಯ ಹೊರಬಿದ್ದಿಲ್ಲ.
ಏನೂ ಆಗಿಲ್ಲವೆಂದರೆ 20 ಸೈನಿಕರು ಸತ್ತಿದ್ದು ಹೇಗೆ? ನಮ್ಮ ಸೈನಿಕರನ್ನು ಕೊಂದವರು ಯಾರು? ಈ ಬಗ್ಗೆ ಪ್ರಧಾನಿ ಸತ್ಯ ಬಹಿರಂಗ ಪಡಿಸಬೇಕು ಎಂದು ಖರ್ಗೆ ಒತ್ತಾಯಿಸಿದರು. ಸೈನಿಕರು ಹಾಗೂ ಕೇಂದ್ರ ಸರ್ಕಾರದ ಜೊತೆಗೂ ನಿಲ್ಲುತ್ತೇವೆ. ದೇಶ ಹಾಗೂ ಸೈನಿಕರಿಗೆ ಸಹಕಾರ ನೀಡುವುದು ನಮ್ಮ ಕರ್ತವ್ಯ. ದೇಶದ ಮೇಲೆ ದಾಳಿ ಮಾಡಿದಾಗ ಸುಮ್ಮನಿರಲು ಸಾಧ್ಯವಿಲ್ಲ. ಕೇಂದ್ರಕ್ಕೆ ಸೈನಿಕರ ವಿಚಾರದಲ್ಲಿ ಸಂಪೂರ್ಣ ಬೆಂಬಲ ನೀಡುತ್ತೇವೆ. ಆದರೆ, ಪ್ರಧಾನಿ ಮೋದಿ ಸತ್ಯವನ್ನು ಮರೆಮಾಚಬಾರದು ಎಂದರು. ಜನರ ಮುಂದೆ ಸತ್ಯವನ್ನು ತೆರೆದಿಡಬೇಕು.
ಪ್ರಧಾನಿ ಮೋದಿಯವರು ತಾವು ಹೇಳಿದ್ದೇ ಸರಿ ಎನ್ನುವ ಮನೋಭಾವನೆ ಬಿಡಬೇಕು. ಕೇಂದ್ರ ಈಗಲಾದರೂ ಬಾಯಿ ತೆರೆಯಬೇಕು. ಎಐಸಿಸಿ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಇಷ್ಟೆಲ್ಲಾ ಹೇಳಿದರೂ ಕೇಂದ್ರಕ್ಕೆ ಅರ್ಥವಾಗುತ್ತಿಲ್ಲ. ಎಲ್ಲರೂ ಸೇರಿ ದೇಶವನ್ನು ಉಳಿಸಬೇಕಿದೆ. ಆದರೆ ಮೋದಿ ತಾವು ಹೇಳಿದ್ದೇ ಸರಿ ಎಂದು ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.