ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ಚಾಲಕರ ಕಷ್ಟ ಹಾಗೂ ಸುಖದಲ್ಲಿ ಭಾಗಿಯಾಗಿ, ಅವರ ಹಿತ ಕಾಯಲು ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಓಲಾ, ಉಬರ್ ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹಾಗೂ ಅಖಿಲ ಕರ್ನಾಟಕ ಆದರ್ಶ ಆಟೋ ಚಾಲಕರ ಸಂಘದ ಅಧ್ಯಕ್ಷ ಚಂದ್ರು ಅವರು ತಮ್ಮ ಬೆಂಬಲಿಗ ಸಮೂಹದೊಂದಿಗೆ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಶಿವಕುಮಾರ್, ಕೋವಿಡ್ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಆಟೋ, ಕ್ಯಾಬ್ ಚಾಲಕರಿಗೆ ಸರ್ಕಾರದಿಂದ ಸಹಾಯ ಸಿಗಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ನಾವು ಒತ್ತಡ ಹಾಕಿದೆವು. ತಿಂಗಳಿಗೆ ಕನಿಷ್ಠ 10 ಸಾವಿರ ಕೊಡಿ ಎಂದು ಕೇಳಿದೆವು. ರಾಜ್ಯ ಸರ್ಕಾರ 7.75 ಲಕ್ಷ ಚಾಲಕರಿಗೆ ಒಂದು ಬಾರಿ 5 ಸಾವಿರ ನೀಡುವುದಾಗಿ ಘೋಷಣೆ ಮಾಡಿದರು. ಆದರೆ ನಮಗಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 32 ಲಕ್ಷ ಜನ ಪರವಾನಿಗೆ ಪಡೆದು ಚಾಲಕರಾಗಿ ದುಡಿಯುತ್ತಿದ್ದಾರೆ. ಸರ್ಕಾರ ಲಾಕ್ ಡೌನ್ ಹೇರಿದಾಗ ಇವರ್ಯಾರು ತಮ್ಮ ವಾಹನ ಚಾಲನೆ ಮಾಡದೆ ಸರ್ಕಾರಕ್ಕೆ ಬೆಂಬಲ ನೀಡಿದರು. ಇದರಿಂದ ಅವರ ಕುಟುಂಬಗಳಿಗೆ ಎಷ್ಟು ತೊಂದರೆಯಾಗಿದೆ ಎಂದು ಈ ಸರ್ಕಾರದ ಕಣ್ಣಿಗೆ ಕಾಣಲಿಲ್ಲ, ಕಿವಿಗೆ ಕೇಳಲಿಲ್ಲ, ಹೃದಯಕ್ಕೆ ಮುಟ್ಟಲಿಲ್ಲ ಎಂದರು.
ನಮ್ಮ ಆಗ್ರಹದ ಮೇರೆಗೆ ಸರ್ಕಾರ 7.75 ಲಕ್ಷ ಚಾಲಕರಿಗೆ ಪರಿಹಾರ ಘೋಷಿಸಿದರು. ನಂತರ ನಾನು ಬೇರೆ ಕಡೆ ಪ್ರವಾಸ ಕೈಗೊಂಡಾಗ ಸರ್ಕಾರ ಘೋಷಿಸಿರುವ ಪರಿಹಾರ ಹೆಚ್ಚೆಂದರೆ ಶೇ.10ರಷ್ಟು ಮಂದಿಗೆ ತಲುಪಿರಬಹುದು. ಉಳಿದವರಿಗೆ ಒಂದು ರೂಪಾಯಿಯೂ ತಲುಪಿಲ್ಲ. ಸರ್ಕಾರ ಚಾಲಕರ ಮಾಹಿತಿಯನ್ನು ತಂತ್ರಜ್ಞಾನ ಮೂಲಕ ಅಪ್ಲೋಡ್ ಮಾಡಲು ಹೇಳಿ ಚಾಲಕರು ಪರದಾಡಿದ್ದನ್ನು ನೋಡಿದ್ದೇವೆ. ಘೋಷಣೆ ಮಾಡಿ 2 ತಿಂಗಳಾದರೂ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ ಎಂದರು.
ಇದನ್ನೂ ಓದಿ:ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ಮಾಡದಿದ್ದರೆ ಕೋವಿಡ್ ಹರಡುತ್ತಿರಲಿಲ್ಲ: ರಾಮಲಿಂಗಾ ರೆಡ್ಡಿ
ನಾನು ಬೆಳಗಾವಿ, ಧಾರವಾಡ, ಶಿರಾದಲ್ಲಿ ವಿಚಾರಿಸಿದೆ. ಕೆಲವು ಕಡೆ ಪರಿಹಾರವೇ ತಲುಪಿಲ್ಲ. ಇದರ ವಿರುದ್ಧ ಕಾಂಗ್ರೆಸ್ ಹೋರಾಡಲು ತೀರ್ಮಾನಿಸಿದೆ. ಆಸ್ಕರ್ ಫರ್ನಾಂಡಿಸ್ ಅವರ ಸೂಚನೆ ಮೇರೆಗೆ ಕಾಂಗ್ರೆಸ್ ಪಕ್ಷದಲ್ಲಿ ಚಾಲಕರ ಘಟಕ ಸ್ಥಾಪಿಸುತ್ತಿದ್ದು, ಇಂದಿನಿಂದ ಅದನ್ನು ಆರಂಭಿಸಲಾಗುತ್ತಿದೆ. ಚಾಲಕರ ಸಂಘದ ಅಧ್ಯಕ್ಷರಾಗಿರುವ ಹಾಗೂ ಜೆಡಿಎಸ್ ಸಾರಿಗೆ ವಿಭಾಗದ ಅಧ್ಯಕ್ಷರಾಗಿದ್ದ ತನ್ವೀರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಬೆಂಗಳೂರಿನ ಆರ್ ಆರ್ ನಗರ ಚುನಾವಣೆ ಸಂಧರ್ಭದಲ್ಲಿ ಈ ಕ್ಷೇತ್ರದಲ್ಲೇ 7 ಸಾವಿರ ಚಾಲಕರನ್ನು ಗುರುತಿಸಿದ್ದೇವೆ. ಅವರಿಗೆ ಆಗಿರುವ ಅನ್ಯಾಯಕ್ಕೆ ಉತ್ತರ ನೀಡಲು, ಅವರ ಕುಟುಂಬ ಸದಸ್ಯರು, ಸ್ನೇಹಿತರು ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿರುವ ಎಲ್ಲ ಚಾಲಕರನ್ನು ನಾನು ಇಂದು ಪಕ್ಷಕ್ಕೆ ಬರಮಾಡಿಕೊಳ್ಳುತ್ತೇನೆ. ನಿಮ್ಮ ನೋವು ನಲಿವಿನಲ್ಲಿ ನಾವು ಸದಾ ಇರುತ್ತೇವೆ ಎಂದು ಡಿ ಕೆ ಶಿವಕುಮಾರ್ ಹೇಳದರು.