Advertisement

ಭೂಮಿಗೆ ಬಿದ್ದ ನೀರಿಗೆ ನಾವೇ ಹಕ್ಕುದಾರರು

10:20 AM Jul 22, 2019 | Team Udayavani |

ಬೆಳಗಾವಿ: ನಮ್ಮ ಭೂಮಿ ನಮ್ಮ ನೀರು ಎಂಬ ಪರಿಕಲ್ಪನೆಯಡಿ ಕರ್ನಾಟಕ ಬರ ಮುಕ್ತವಾಗಬೇಕಾಗಿದೆ. ರೈತರು ತಮ್ಮ ಭೂಮಿಯಲ್ಲಿ ಬಿದ್ದ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಂಡರೆ ಬರ ಎನ್ನುವುದೇ ಇರುವುದಿಲ್ಲ. ಜತೆಗೆ ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ ಮಾದರಿಯಲ್ಲಿ ನೀರು ಭದ್ರತಾ ಕಾಯ್ದೆ ಜಾರಿಗೆ ತರುವ ಮೂಲಕ ರೈತರನ್ನು ಉಳಿಸುವ ಕಾರ್ಯ ಕೇಂದ್ರ ಸರ್ಕಾರ ಮಾಡಬೇಕು ಎಂದು ಜಲತಜ್ಞ ಡಾ| ರಾಜೇಂದ್ರ ಸಿಂಗ್‌ ಆಗ್ರಹಿಸಿದರು.

Advertisement

ನಗರದ ಮಹಾತ್ಮ ಗಾಂಧಿ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ 39ನೇ ರೈತ ಹುತಾತ್ಮ ದಿನದ ನಿಮಿತ್ತ ರವಿವಾರ ನಡೆದ ರೈತರ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಭೂಮಿಯಲ್ಲಿ ಬಿದ್ದ ನೀರಿಗೆ ನಾವೇ ಹಕ್ಕುದಾರರು. ಅಂತರ್ಜಲ ಮಟ್ಟ ಹೆಚ್ಚಿಸುವ ಸಂಕಲ್ಪ ಪ್ರತಿಯೊಬ್ಬರ ರೈತರೂ ಮಾಡಬೇಕು. ಭೂಮಿಯೊಳಗಿನ ನೀರು ರಿಸರ್ವ್‌ ಬ್ಯಾಂಕ್‌ ತರಹ ಅವಿತುಕೊಂಡಿದೆ. ಅದನ್ನು ರಿಚಾರ್ಜ್‌ ಮಾಡುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಕೇಂದ್ರ ಸರ್ಕಾರ ನೀರಿನ ಹಕ್ಕನ್ನು ಪಡೆಯಲು ಪ್ರಯತ್ನಿಸುತ್ತಿದೆ. ಅದಕ್ಕೆ ಆಸ್ಪದ ನೀಡಬಾರದು. ನೀರು ಕಾಯ್ದೆ ವಿರುದ್ಧ ಆಂದೋಲನ ಆಗಬೇಕಿದೆ. ಕರ್ನಾಟಕದಲ್ಲಿ ಜಲಸಂಕಟ ಅಧಿಕ ಆಗಿದ್ದು, ಅದಕ್ಕೆ ತಿಲಾಂಜಲಿ ಹೇಳಬೇಕಾಗಿದೆ. ನೀರು, ಭೂಮಿ ಮತ್ತು ಅರಣ್ಯ ಸಂರಕ್ಷಣೆಗೆ ಮುಂದಾಗಬೇಕು. ನೀರಿನ ವ್ಯಾಪಾರಕ್ಕೆ ಷಡ್ಯಂತ್ರ ರೂಪಿಸಿದ್ದು, ತಡೆಯಲು ಮುಂದಾಗಬೇಕು ಎಂದು ಹೇಳಿದರು.

ರೈತ ಸಂಘದ ಮುಖಂಡ ಪ್ರೊ| ರವಿವರ್ಮ ಕುಮಾರ ಮಾತನಾಡಿ, ದೇಶದ ಸಂವಿಧಾನದಲ್ಲಿ ಕಾರ್ಮಿಕರು, ಅಲ್ಪಸಂಖ್ಯಾತರು, ಬುಡಕಟ್ಟು ನಿವಾಸಿಗಳು, ಕಾರ್ಮಿಕರು, ಆದಿವಾಸಿಗಳು ಸೇರಿದಂತೆ ಅನೇಕರಿಗೆ ಹಕ್ಕುಗಳನ್ನು ನೀಡಲಾಗಿದೆ. ಆದರೆ ರೈತರಿಗೆ ಸಂವಿಧಾನದಲ್ಲಿ ಏನೂ ನೀಡಿಲ್ಲ. ವಿಶ್ವಸಂಸ್ಥೆ ಎನ್ನುವುದು ರೈತರನ್ನು ಸುಲಿಗೆ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆ ಎಂದು ದೂರಿದರು.

ವಿಶ್ವಸಂಸ್ಥೆ ಎದುರು ಜಿನೇವಾಗೆ ರೈತರನ್ನು ಭಾರತದಿಂದ ಕಟ್ಟಿಕೊಂಡು ಹೋಗಿ ಒಂದು ವಾರ ಕಚೇರಿ ಬಂದ್‌ ಮಾಡಿಸಿದ್ದ ಕೀರ್ತಿ ಪ್ರೊ| ನಂಜುಂಡಸ್ವಾಮಿ ಅವರದ್ದಾಗಿತ್ತು. ಅಂದು ರೈತರ ಹಕ್ಕುಗಳ ಘೋಷಣೆಗೆ ಜಗತ್ತಿನ 123 ದೇಶಗಳು ಬೆಂಬಲ ವ್ಯಕ್ತಪಡಿಸಿದ್ದವು. ಆದರೆ ಅಮೆರಿಕ ಹಾಗೂ ಇಂಗ್ಲೆಂಡ್‌ ಮಾತ್ರ ಇದನ್ನು ವಿರೋಧಿಸಿವೆ ಎಂದು ದೂರಿದರು.

Advertisement

ರೈತರು ತಮ್ಮ ಸಮಸ್ಯೆಗಳಿಗೆ ಸಂವಿಧಾನಾತ್ಮಕ ಪರಿಹಾರ ಕಂಡುಕೊಳ್ಳಲು ಕೂಡಲೇ ಕೇಂದ್ರ ಸರಕಾರ ವಿಶೇಷ ಕಾಯ್ದೆ ರಚಿಸಬೇಕು. ವಿಶೇಷ ಇಲಾಖೆ ರಚಿಸಬೇಕು. ಸಂವಿಧಾನ ತಿದ್ದುಪಡಿ ಮಾಡಿ ರೈತ ಕಲ್ಯಾಣ ಅಂಶಗಳನ್ನು ಅದರಲ್ಲಿ ಅಳವಡಿಸಬೇಕು. ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ರೈತರ ಹಕ್ಕುಗಳನ್ನು ಪ್ರತಿಪಾದಿಸಿದವರು ಪ್ರೊ| ನಂಜುಂಡಸ್ವಾಮಿ. ಆಗ ಬಿತ್ತಿದ ಬೀಜಗಳು ಈಗ ಮೊಳಕೆ ಒಡೆಯುತ್ತಿವೆ. ನೆಲ ಹಾಗೂ ಜಲ ರಕ್ಷಣೆ ಸಿಗುವಂತಾಗಬೇಕು ಎಂದರು.

ಚಾಮರಸ ಮಾಲೀ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದಾಗ ಶಾಸಕರು ರೆಸಾರ್ಟ್‌ನಲ್ಲಿ ಇದ್ದಾರೆ. ಕರ್ನಾಟಕವನ್ನು ಬರ ಮುಕ್ತ ಮಾಡಬೇಕಿದೆ. ಮಳೆ ನೀರು ಸಂಗ್ರಹ ಮಾಡಲು ಆಂದೋಲನ ಆಗಬೇಕಿದೆ. ಇದು ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಕೆಲವರು ರೈತ ಚಳವಳಿ ದುರ್ಬಳಕೆ ಮಾಡುತ್ತಿದ್ದು, ಅಕ್ರಮ ಹಣ ಮಾಡುವಲ್ಲಿ ನಿರತರಾಗಿದ್ದು ದುರದೃಷ್ಟಕರ. ಇದಕ್ಕೆ ಕಡಿವಾಣ ಹಾಕಬೇಕಿದೆ. ಮಹದಾಯಿ ನದಿ ನೀರು ಹಂಚಿಕೆ ತೀರ್ಪು ಗೆಜೆಟ್ ನೋಟಿಫಿಕೇಶನ್‌ಗಾಗಿ ಹೋರಾಟ ನಡೆಸಬೇಕಾಗಿದೆ. ಜನಪತಿನಿಧಿಗಳಿಗೆ ಬುದ್ಧಿ ಕಲಿಸಲು ಪರ್ಯಾಯ ರಾಜಕಾರಣ ಅವಶ್ಯವಿದೆ ಎಂದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಶಾಸಕ ಬಿ.ಆರ್‌. ಪಾಟೀಲ, ತಮಿಳುನಾಡಿನ ರೈತ ಮುಖಂಡ ಮುತ್ತು ಸೇಲ್ವಂ, ಪಂಚನಗೌಡ ದ್ಯಾಮನಗೌಡ ಮಾತನಾಡಿದರು. ರೈತ ಮುಖಂಡರಾದ ಎ.ಎಚ್. ಸಾಹುಕಾರ, ಕೆ.ಪಿ. ಸಿಂಗ್‌, ಅಭಿರುಚಿ ಗಣೇಶ, ಸೋಮು ರೈನಾಪುರ, ಮುತ್ತಪ್ಪ ಕೋಮಾರ ಇನ್ನಿತರರಿದ್ದರು.

ಸಮಾವೇಶದಲ್ಲಿ 17 ನಿರ್ಣಯ ಮಂಡನೆ:

ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ರೈತರ ಹಕ್ಕುಗಳನ್ನು ಉಲ್ಲೇಖೀಸಬೇಕು. ಮಹದಾಯಿ ಜಲವಿವಾದ ಪ್ರಾಧಿಕಾರದ ತೀರ್ಪು ಕೂಡಲೇ ಗೆಜೆಟ್‌ನಲ್ಲಿ ಪ್ರಕಟಿಸಬೇಕು. ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರೈಸಬೇಕು. ಗುತ್ತಿಗೆ ಕಾಯ್ದೆಗೆ ತಿದ್ದುಪಡಿ ತರುವುದನ್ನು ಕೈ ಬಿಡಬೇಕು. ಸಾಲಮನ್ನಾ ಯೋಜನೆ ಜಾರಿ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೂ ವಿಸ್ತರಿಸಬೇಕು. ಕಬ್ಬಿನ ಬಾಕಿ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಬೇಕು. ಈ ಸಾಲಿನ ಕಬ್ಬಿಗೆ ದರ ನಿಗದಿ ಆಗಬೇಕು. ಅರಣ್ಯ ಇಲಾಖೆಯ ಕಿರುಕುಳ ತಪ್ಪಿಸಿ ಸಾಗುವಳಿದಾರರಿಗೆ ರಕ್ಷಣೆ ನೀಡಬೇಕು. ಸ್ಥಳೀಯ ಕಾಳು ಮೆಣಸು ಬೆಳೆಗಾರರನ್ನು ರಕ್ಷಿಸಬೇಕು. ಮೂರು ಪಕ್ಷಗಳನ್ನು ವಿಧಾನಸೌಧದಿಂದ ತೊಲಗಿಸಿ, ಸಮಾಜಮುಖೀ ಚಿಂತಕರು ಪರ್ಯಾಯ ವ್ಯವಸ್ಥೆಗೆ ಗಂಭೀರ ಚಿಂತನೆ ನಡೆಸಬೇಕು ಎಂಬ ಬೇಡಿಕೆಗಳನ್ನೊಳಗೊಂಡ 17 ನಿರ್ಣಯಗಳನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಂಡಿಸಿದರು.
ನದಿ ಜೋಡಣೆ ಹೆಸರಲ್ಲಿ ಮಹಾಮೋಸ:

ನದಿಗಳ ಜೋಡಣೆ ಮಾಡಲೇಬಾರದು. ನದಿ ಜೋಡಣೆ ಹೆಸರಲ್ಲಿ ರೈತರ ಕಿಸೆಗೆ ಬಂಡವಾಳಶಾಹಿ ಕಂಪನಿಗಳು ಕತ್ತರಿ ಹಾಕುತ್ತವೆ. ನದಿ ಜೋಡಣೆ ಬದಲು ನದಿಗಳೊಂದಿಗೆ ಜನರನ್ನು ಜೋಡಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಲಿ. ಮೋಡ ಬಿತ್ತನೆ ಅವೈಜ್ಞಾನಿಕವಾಗಿದೆ. ಕೇಂದ್ರ ಸರ್ಕಾರ ಜಲ ಶಕ್ತಿ ಸಚಿವಾಲಯ ಆರಂಭಿಸಿದೆ. ಪ್ರತಿ ಮನೆಗೆ ನಲ್ಲಿ ಮೂಲಕ ನೀರು ಎಂಬ ಯೋಜನೆ ರೂಪಿಸಿದೆ. ಇದು ಕೇವಲ ಕಂಪನಿಗಳ ಉದ್ಧಾರ ಹೊರತು ಜನರಿಗೆ ನೀರು ಕೊಡುವುದಲ್ಲ. ಕಂಪನಿಗಳ ಪ್ಲಾಸ್ಟಿಕ್‌ ಪೈಪ್‌ ಖರೀದಿ ಆಗುವ ಉದ್ದೇಶ ಹೊಂದಿದೆ ಎಂದು ಜಲತಜ್ಞ ರಾಜೇಂದ್ರಸಿಂಗ್‌ ಆರೋಪಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next