ಮೈಸೂರು: ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಎನ್‌ಟಿಎಂ ಶಾಲೆ ಹಸ್ತಾಂತರಕ್ಕೆ ತಡೆ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪಕ್ಷದ ನಾಯಕರು ಹಾಗೂ ಸಂಘ ಪರಿವಾರದಿಂದ ಒತ್ತಡವಿದ್ದು, ಅವರ ಜೊತೆ ನಾವಿದ್ದೇವೆ ಎಂದು ಇತಿಹಾಸ ತಜ್ಞ ಪಿ.ವಿ.ನಂಜರಾಜ ಅರಸ್ ಹೇಳಿದರು. ನಗರದ ಜಲದರ್ಶಿನಿ ಸಭಾಂಗಣದಲ್ಲಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ ಭಾನುವಾರ ನಡೆದ ಮೈಸೂರು ಜಿಲ್ಲೆ ವಿಭಜನೆ ಬೇಡಿಕೆ ಮತ್ತು 7ನೇ ತರಗತಿ ಪಬ್ಲಿಕ್ ಪರೀಕ್ಷೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸಿಎಂ ಪರ ಹೋರಾಡುತ್ತೇವೆ: ಮುಖ್ಯಮಂತ್ರಿಗಳ ಪರವಾಗಿ ನಾವು ಹೋರಾಟ ಮಾಡುತ್ತೇವೆ. ಕೆಲವರು ನಮ್ಮನ್ನು ಪಟ್ಟಭದ್ರ ಹಿತಾಶಕ್ತಿಗಳು ಎಂದು ಹೇಳುತ್ತಿದ್ದಾರೆ. ಆದರೆ ಸರ್ಕಾರದ ಆಸ್ತಿಯನ್ನು ಬೇಲಿ ಮೇಲಿನ ಹೂ ಎಂದು ಕಬಳಿಸಲು ಮುಂದಾಗಿರುವ ಅವರು ನಿಜವಾದ ಪಟ್ಟಭದ್ರ ಹಿತಾಶಕ್ತಿಗಳಾಗಿದ್ದಾರೆ. ಇಂತವರ ವಿರುದ್ಧವಾಗಿ ಆದೇಶ ಹೊರಡಿಸಿರುವ ಮುಖ್ಯಮಂತ್ರಿಗಳು ಸದ್ಯದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಶಾಲೆ ಉಳಿಸಲು ಜನಪರ ಆದೇಶ ನೀಡಿದ ಅವರಿಗೆ ನಮ್ಮ ಬೆಂಬಲವಿದ್ದು, ಯಾವುದೇ ಹಂತದಲ್ಲೂ ಹೋರಾಟ ಮಾಡಲು ನಾವು ಸಿದ್ದರಾಗಿದ್ದೇವೆ ಎಂದು ಹೇಳಿದರು. ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್‌ಚಂದ್ರ ಗುರು ಮಾತನಾಡಿ, ಸಾವರ್ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಬ್ರಿಟಿಷರೊಂದಿಗೆ ಶಾಮೀಲಾಗಿ ಭತ್ಯ ಪಡೆದ ಇಂತವರನ್ನು ಕೇಂದ್ರಸರ್ಕಾರ ಗೌರವಿಸುತ್ತಿರುವುದು ತಪ್ಪು ಎಂದು ಹೇಳಿದರು.
ಸಭೆಯ ನಿರ್ಣಯಗಳು: ಕೇಂದ್ರ ಸರ್ಕಾರದ ಆರ್ಥಿಕ ಚೇತರಿಕೆಗೆ ಆರಂಭದಲ್ಲೇ ಪರಿಹಾರ ಕ್ರಮ ಕಂಡುಕೊಳ್ಳಬೇಕು. 7ನೇ ತರಗತಿ ಪಬ್ಲಿಕ್ ಪರೀಕ್ಷೆ ಪಾಲಿಸಿಯನ್ನು ತುರ್ತಾಗಿ ಕೈಬಿಡಬೇಕು, ವಿವೇಕಾನಂದರ ಸ್ಮಾರಕವನ್ನು ಜಿಲ್ಲಾಧಿಕಾರಿಗಳ ಕಚೇರಿ ಸ್ಥಳಾಂತರಿದ ನಂತರ ಆ ಸ್ಥಳದಲ್ಲಿ ನಿರ್ಮಿಸಬೇಕು ಅಥವಾ ರಾಮಕೃಷ್ಣ ಆಶ್ರಮದಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಅಧ್ಯಯ ಕೇಂದ್ರವಾಗಿ ನಿರ್ಮಾಣ ಮಾಡಬೇಕು ಎಂದು ವಿಚಾರ ಸಂಕಿರಣದಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಜಿಲ್ಲಾ ಕಾಯಕ ಸಮಾಜದ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಕಾರ್ಯದರ್ಶಿ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬೋರಪ್ಪ ಶೆಟ್ಟಿ, ಪತ್ರಿಕಾ ಕಾರ್ಯದರ್ಶಿ ಕೆ.ಆರ್. ಶ್ರೀನಿವಾಸ್, ಮಹದೇವ್ ಗಾಣಿಗ, ಪ್ರಭಾಕರ್ ಹೆಗ್ಗಂದೂರು, ನಾಗರಾಜಪ್ಪ, ಧನಪಾಲ್, ಅರವಿಂದ ಇತರರು ವಿಚಾರ ಸಂಕಿರಣದಲ್ಲಿ ಹಾಜರಿದ್ದರು.