Advertisement

Uttarkashi: ನಾವು ಚೆನ್ನಾಗಿದ್ದೇವೆ, ಭಯ ಬೇಡ… ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಮಾತು

09:54 PM Nov 21, 2023 | Team Udayavani |

ಹೊಸದಿಲ್ಲಿ/ಉತ್ತರಕಾಶಿ: “ಅಮ್ಮಾ ಆತಂಕ ಪಡಬೇಡ. ಸುರಂಗದಲ್ಲಿ ಸಮಯ ಕಳೆಯಲು ನಡೆದಾಡುತ್ತಿದ್ದೇನೆ. ಹೊತ್ತು ಕಳೆಯಲು ಯೋಗಾಭ್ಯಾಸ ಮಾಡುತ್ತಿದ್ದೇನೆ…’

Advertisement

– ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ಪೈಕಿ ಒಬ್ಬ ರು ತಾಯಿಗೆ ಹೇಳಿದ ಸಾಂತ್ವನದ ಮಾತುಗಳಿವು. ಸುರಂಗದ ಒಳಗೆ ಆರು ಇಂಚು ವ್ಯಾಸದ ಪೈಪ್‌ ಮೂಲಕ ಕಳುಹಿಸಲಾಗಿದ್ದ ಡ್ರೋನ್‌ ಕೆಮರಾಗಳ ಮುಂದೆ ಕಾರ್ಮಿಕರು ತಮ್ಮ ಸ್ಥಿತಿಯನ್ನು ವಿವರಿಸಿದ್ದಾರೆ. ಹೀಗಾಗಿ ಅವರ ಕುಟುಂಬ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕಾರ್ಮಿಕನ ತಾಯಿ ವೀಡಿಯೋದಲ್ಲಿ ತನ್ನ ಪುತ್ರನನ್ನು ನೋಡುತ್ತಿದಂತೆಯೇ ಕಣ್ಣೀರಾದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ, ಆತಂಕಪಡಬೇಕಾಗಿಲ್ಲ. ಸಮಯ ಕಳೆಯಲು ನಡೆದಾಡುತ್ತಿದ್ದೇನೆ ಎಂದು ಹೇಳಿಕೊಂಡರು.

ಬಿಹಾರದ ಸುನೀತಾ ಎಂಬವರ ಭಾವ ಪ್ರದೀಪ್‌ ಕಿಸ್ಕಾ ಕೂಡ ಸುರಂಗದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರು ಸುನೀತಾ ಜತೆಗೆ ಮಾತನಾಡಿ ಸಂತೋಷಪಟ್ಟರು. “ಪೈಪ್‌ ಮೂಲಕ ಭಾವನಿಗೆ ಕಿತ್ತಳೆ ಕಳುಹಿಸಿಕೊಟ್ಟಿದ್ದೇನೆ. ಜತೆಗೆ ಸ್ವಲ್ಪ ಖೀಚಡಿಯನ್ನೂ ನೀಡಿದ್ದೇನೆ’ ಎಂದು ಸುನೀತಾ ಹರ್ಷದಿಂದ ಹೇಳಿಕೊಂಡರು.

ವೀಡಿಯೋ ಕೆಮರಾ ಮೂಲಕ ಕಾರ್ಮಿಕರ ಜತೆಗೆ ಒಬ್ಬೊಬ್ಬರಾಗಿ ಮಾತನಾಡಿದ ಬಳಿಕ ಕುಟುಂಬಸ್ಥರಲ್ಲಿ ಒಂದು ಬಗೆಯ ನೆಮ್ಮದಿ ನೆಲೆಸಿತ್ತು. ಅವರು ತಮ್ಮವರಿಗೆ ಬೇಕಾದ ತಿಂಡಿ ತಿನಸುಗಳನ್ನು ಕಳುಹಿಸಿಕೊಟ್ಟರು. ಜತೆಗೆ ಮೊಬೈಲ್‌, ಚಾರ್ಜರ್‌ಗಳನ್ನೂ ಕಳುಹಿಸಿಕೊಡಲಾಗಿದೆ.

Advertisement

ಸಿಕ್ಕಿತು ಮನೆ ಆಹಾರ
ಇದುವರೆಗೆ ಕಾರ್ಮಿಕರಿಗೆ ಕಡಲೆ, ಒಣಹಣ್ಣುಗಳು, ಮಂಡಕ್ಕಿಗಳನ್ನು ಮಾತ್ರ ಕೊಳವೆ ಮೂಲಕ ಕಳುಹಿಸಿಕೊಡಲಾಗುತ್ತಿತ್ತು. ಇದರಿಂದ ಅವರು ಜೀವ ಉಳಿಸಿಕೊಳ್ಳಲು ಮಾತ್ರ ಶಕ್ತರಾಗಿದ್ದರು. ಮಂಗಳವಾರ ಮನೆಯವರು ಮತ್ತು ಜಿಲ್ಲಾಡಳಿತದ ವತಿಯಿಂದ ಸಿದ್ಧಪಡಿಸಿದ ಆಹಾರವನ್ನೂ ಕಳುಹಿಸಲಾಗಿದೆ.

ವೀಡಿಯೋದಲ್ಲಿ ಏನಿದೆ?
ಕಾರ್ಮಿಕರಲ್ಲಿ ಕೆಲವರು ಹಳದಿ ಮತ್ತು ಬಿಳಿ ಹೆಲ್ಮೆಟ್‌ಗಳನ್ನು ಧರಿಸಿರುವುದು ಕಂಡು ಬಂದಿದೆ. ಕೆಲವರು ಕಳುಹಿಸಿಕೊಟ್ಟ ಆಹಾರ ವಸ್ತುಗಳನ್ನು ಸೇವಿಸಿದರು. ಪರಸ್ಪರ ಮಾತನಾಡಿಕೊಳ್ಳುತ್ತಿರುವುದು ಮತ್ತು ನಡೆದಾಡುತ್ತಿರುವುದು ಕಾಣಿಸಿದೆ.

ಸಹನೆಯಿಂದಿರಿ
ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಬಗ್ಗೆ ಸುದ್ದಿ ವಾಹಿನಿಗಳು ವರದಿ ಮಾಡುವ ಸಂದರ್ಭದಲ್ಲಿ ಸಂಯಮ ವಹಿಸಬೇಕು. ಕಾರ್ಮಿಕರ ಕುಟುಂಬ ಸದಸ್ಯರಿಗೆ ಆತಂಕ ಉಂಟು ಮಾಡುವ ರೀತಿಯ ಅತಿರಂಜನೀಯ ವರದಿ ಪ್ರಸಾರ ಮಾಡಬಾರದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಸುತ್ತೋಲೆ ಹೊರಡಿಸಿದೆ.

ಲಂಬವಾಗಿ ಸುರಂಗ
ಅಮೆರಿಕದಿಂದ ತರಿಸಿರುವ ಆಗರ್‌ ಯಂತ್ರ ಇನ್ನೂ ದುರಸ್ತಿಯಾಗದಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ರಕ್ಷಣೆಗಾಗಿ ಲಂಬವಾಗಿ ಸುರಂಗ ಕೊರೆಯುವುದೇ ಅತ್ಯುತ್ತಮ ಮಾರ್ಗ ಎಂಬ ನಿರ್ಧಾರಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರ (ಎನ್‌ಡಿಆರ್‌ಎಫ್) ಬಂದಿದೆ. ಐದು ರೀತಿಯ ಪರಿಹಾರ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆದಿದೆ. ಈ ಪೈಕಿ ಲಂಬವಾಗಿ ಸುರಂಗ ಕೊರೆಯುವುದಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಾಧಿಕಾರದ ಸದಸ್ಯ ನಿವೃತ್ತ ಲೆ|ಜ| ಸಯ್ಯದ್‌ ಅತ್ತಾ ಹುಸೇನ್‌ ಹೇಳಿದ್ದಾರೆ.

ಕಾರ್ಮಿಕರ ರಕ್ಷಣೆಗೆ ಆದ್ಯತೆ: ಪ್ರಧಾನಿ
ಸುರಂಗದಲ್ಲಿರುವ 41 ಮಂದಿ ಕಾರ್ಮಿಕರ ರಕ್ಷಣೆಯೇ ಪ್ರಧಾನ ಆದ್ಯತೆ ಆಗಬೇಕು ಎಂದು ಪ್ರಧಾನಿ ಮೋದಿ ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿಯವರಿಗೆ ಸೂಚಿಸಿದ್ದಾರೆ. ಮಂಗಳವಾರ ಅವರು ಸಿಎಂ ಧಾಮಿ ಜತೆಗೆ ನಾಲ್ಕನೇ ಬಾರಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next