Advertisement

ರಾಜ್ಯದ ಗಡಿ ರಕ್ಷಣೆಗೆ ನಾವು ಸಶಕ್ತರಾಗಿದ್ದೇವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

09:53 AM Nov 22, 2022 | Team Udayavani |

ಬೆಂಗಳೂರು: ಗಡಿವಿವಾದಗಳನ್ನು ಬಗೆಹರಿಸಲು ಅತ್ಯಂತ ಬಲಿಷ್ಠವಾಗಿರುವ ಹಿರಿಯ ವಕೀಲರ ತಂಡವನ್ನು ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ರೇಸ್ ಕೋರ್ಸ್ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಡಿವಿವಾದದ ಬಗ್ಗೆ ಇಂದು ಸಭೆ ನಡೆಸಲಾಗಿದೆ. ತಂಡವು ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಶ್ಯಾಮ್ ದಿವಾನ್ ಹಾಗೂ ಕರ್ನಾಟಕದ ಹಿರಿಯ ವಕೀಲರಾದ ಉದಯ್ ಹೊಳ್ಳ , ಬೆಳಗಾವಿಯ ಮಾರುತಿ ಜಿರ್ಲೆ, ವಕೀಲರಾದ ರಘುಪತಿ ಅವರನ್ನೊಳಗೊಂಡಿದೆ ಎಂದರು.

ವಕೀಲರ ತಂಡವು ಈಗಾಗಲೇ 2-3 ಬಾರಿ ಸಭೆ ಸೇರಿ ವಿಷಯಗಳ ಬಗ್ಗೆ ಏನು ವಾದ ಮಾಡಬೇಕೆಂದು ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ಸಂಜೆ ಈ ವಕೀಲರೊಂದಿಗೆ ವೀಡಿಯೋ ಸಂವಾದ ನಡೆಸುತ್ತಿದ್ದು, ಈ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿರೋಧ ಪಕ್ಷದ ನಾಯಕರಿಗೆ ಹಾಗೂ ಎಲ್ಲಾ ಪಕ್ಷದ ನಾಯಕರಿಗೆ ಈಗಾಗಲೇ ಪತ್ರವನ್ನು ನಾಳೆ ಬೆಳಿಗ್ಗೆ ಕಳಿಸಿಕೊಡಲಾಗುತ್ತಿದೆ.  ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದರು.

ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿಗೆ ಮಾನ್ಯತೆ ದೊರಕಿಲ್ಲ. ಮೆಂಟೇನಬಿಲಿಟಿ ಈವರೆಗೆ ಸಿಕ್ಕಿಲ್ಲ. ಸಿಗುವುದೂ ಇಲ್ಲ. ಮೆಂಟೇನಬಿಲಿಟಿ ಆಗಬೇಕೋ ಬೇಡವೋ ಎನ್ನುವ ಬಗ್ಗೆಯೇ ಇನ್ನೂ ಚರ್ಚೆಯಾಗುತ್ತಿದೆ. ಮುಖ್ಯ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯ ಇನ್ನೂ ಪರಿಗಣಿಸಿಲ್ಲ.ಮೆಂಟೇನಬಿಲಿಟಿ ಆಗುವುದಿಲ್ಲ, ಇದನ್ನು ಪರಿಗಣಿಸಬಾರದು ಎಂದು ವಾದಿಸಲು ನಾವು ಸಿದ್ಧರಿದ್ದೇವೆ. ಸಂವಿಧಾನ ಬದ್ಧವಾಗಿ 3 ನೇ ಕಲಂ ಪ್ರಕಾರ ರಾಜ್ಯ ಪುನರ್ ವಿಂಗಡನಾ ಕಾಯ್ದೆ ರಚನೆಯಾಯಿತು. ಕಾಯ್ದೆಯ ಪ್ರಕಾರ ಆಗಿದ್ದನ್ನು ಪುನರ್ ಪರಿಶೀಲನೇ ಮಾಡಿದ ಉದಾಹರಣೆ ಇಲ್ಲ ಹಾಗೂ ಅಂಥ ಸಂದರ್ಭವೂ ಒದಗಿಬಂದಿಲ್ಲ ಎಂದರು.

ಮಹಾರಾಷ್ಟ್ರದಲ್ಲಿ ಗಡಿ ವಿವಾದವೇ ರಾಜಕೀಯ ವಸ್ತುವಾಗಿದೆ. ಯಾವುದೇ ಪಕ್ಷದ ಸರ್ಕಾರವಿದ್ದರೂ ಎಲ್ಲಾ ಪಕ್ಷಗಳು ಕೂಡ ತಮ್ಮ ರಾಜಕೀಯ ಕಾರಣಕ್ಕಾಗಿ ಇದನ್ನು ಎತ್ತುವ ಕೆಲಸ ಮಾಡುತ್ತಿದ್ದಾರೆ. ಈವರೆಗೂ ಅವರು ಯಶಸ್ವಿಯಾಗಿಲ್ಲ. ಮುಂದೆಯೂ ಆಗುವುದಿಲ್ಲ. ನಾವು ಕರ್ನಾಟಕದ ಗಡಿ ರಕ್ಷಣೆ ಮಾಡಲು ಎಲ್ಲಾ ರೀತಿಯಲ್ಲಿ ಸಶಕ್ತರಾಗಿದ್ದೇವೆ. ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕನ್ನಡ ನಾಡು, ನುಡಿ, ನೀರಿನ ಬಗ್ಗೆ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಒಂದಾಗಿ ಹೋರಾಟ ಮಾಡುವ ತೀರ್ಮಾನ ಮಾಡಿದ್ದೇವೆ. ನ್ಯಾಯ ನಮ್ಮ ಪರವಾಗಿದೆ. ರಾಜ್ಯ ಪುನರ್ ವಿಂಗಡನಾ ಕಾಯ್ದೆಯಲ್ಲಿ ಬದಲಾವಣೆ ಮಾಡುವ ಹಕ್ಕು ಯಾರಿಗೂ ಇಲ್ಲ. ಕನ್ನಡದ ಗಡಿ ರಕ್ಷಣೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next