Advertisement

ಬಿಜೆಪಿ ಶಿವಸೇನೆಯ ಅತಿದೊಡ್ಡ ರಾಜಕೀಯ ಶತ್ರು: ರಾವುತ್‌

11:09 AM Jun 05, 2018 | Team Udayavani |

ಮುಂಬಯಿ: ಈಚಿನ ಪಾಲ್ಘರ್‌ ಲೋಕಸಭಾ ಉಪಚುನಾವಣೆಯ ಬಳಿಕ ಶಿವಸೇನೆ ಬಿಜೆಪಿ ಮೇಲೆ ನಡೆಸಿರುವ ಅತಿ ತೀಕ್ಷ್ಣ ಟೀಕೆಯೊಂದರಲ್ಲಿ ಬಿಜೆಪಿಯನ್ನು ತನ್ನ  ಅತಿದೊಡ್ಡ “ರಾಜಕೀಯ ಶತ್ರು’ ಎಂಬುದಾಗಿ ಬಣ್ಣಿಸಿದೆ.

Advertisement

ದೇಶವು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಜೋಡಿಯನ್ನು ಇಷ್ಟಪಡುತ್ತಿಲ್ಲ. ಆದರೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ ನಾಯಕ ಎಚ್‌.ಡಿ.ದೇವೇಗೌಡ ಅವರನ್ನು “ಒಪ್ಪಿಕೊಳ್ಳಬಲ್ಲುದು’ ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌  ಇಲ್ಲಿ ಹೇಳಿದ್ದಾರೆ.

“ಶಿವಸೇನೆ ಬಿಜೆಪಿಯ ಅತಿದೊಡ್ಡ ರಾಜಕೀಯ ಶತ್ರು. ಸೇನೆಯ ಕ್ರಾಂತಿಕಾರಿ ಹಿಂದುತ್ವ ಬಿಜೆಪಿ ಪಾಲಿಗೆ ಸಮಸ್ಯಾತ್ಮಕವಾಗಿ ಪರಿಣಮಿಸಬಹುದು’ ಎಂದವರು ಪಕ್ಷದ ಮುಖವಾಣಿ “ಸಾಮ್ನಾ’ದಲ್ಲಿ ಬರೆದ “ರೋಖ್‌-ತೋಖ್‌’ ಅಂಕಣದಲ್ಲಿ ಹೇಳಿದ್ದಾರೆ. ರಾವುತ್‌ ಅವರು ಮರಾಠಿ ದೈನಿಕವೊಂದರ ಸಂಪಾದಕರೂ ಆಗಿದ್ದಾರೆ.

ಪಾಲ^ರ್‌ನಲ್ಲಿ ಬಿಜೆಪಿ ತನ್ನ ದಿವಂಗತ ಸಂಸದ ಚಿಂತಾಮನ್‌ ವನಗಾ ಅವರ ಪುತ್ರನನ್ನು ಸೋಲಿ ಸುವ ಮೂಲಕ ವನಗಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆಯೆಂದು ಅವರು ವ್ಯಂಗ್ಯವಾಡಿದರು. ವನಗಾ ಪುತ್ರ ಶ್ರೀನಿವಾಸ್‌ ವನಗಾ ಅವರು ಶಿವಸೇನಾ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು.

ಶಿವಸೇನೆ ಬಿಜೆಪಿಯ ಪ್ರಧಾನ ರಾಜಕೀಯ ಎದುರಾಳಿಯಾಗಿರುವುದರಿಂದ ಅದರೊಂದಿಗೆ ಅಧಿಕಾರದಲ್ಲಿ ಉಳಿಯುವ ವೇಳೆ ಅಧಿಕಾರ ಹಾಗೂ ಹಣಬಲದ ಮೂಲಕ ಉದ್ಧವ್‌ ಠಾಕ್ರೆ ನೇತೃತ್ವದ ಪಕ್ಷವನ್ನು  ದುರ್ಬಲಗೊಳಿಸುವುದು ಅದರ ಯೋಜನೆಯಾಗಿದೆ. ಪಾಲ^ರ್‌ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಶಿವಸೇನೆಯ ಸೋಲನ್ನು ಖಾತರಿಪಡಿಸುವುದಕ್ಕಾಗಿ ತನ್ನ ಸಂಪನ್ಮೂಲಗಳನ್ನು ಬಳಸಿತು ಎಂದವರು ಆಪಾದಿಸಿದರು.

Advertisement

ಪಾಲ^ರ್‌ನಲ್ಲಿ ಇವಿಎಂಗಳನ್ನು ತಿರುಚಿದ್ದು ಬಿಜೆಪಿಯ ವಿಜಯಕ್ಕೆ ಕಾರಣವಾಯಿತು ಎಂದ ಅವರು, ಇದು ಒಂದು ಹಗರಣಕ್ಕಿಂತ ಕಡಿಮೆಯದ್ದಲ್ಲ ಎಂದರು. ಮತದಾನ ದಿನ ಇವಿಎಂಗಳು ಸರಿಯಾಗಿ ಕಾರ್ಯ ನಿರ್ವಹಿಸದ ಕುರಿತು ಕನಿಷ್ಠ 100 ಕಡೆಗಳಿಂದ ದೂರುಗಳು ಬಂದಿದ್ದವು. ಮತದಾನ ಅವಧಿಯನ್ನು ವಿಸ್ತರಿಸುವುದಕ್ಕೆ ಶಿವಸೇನೆ ಮಾಡಿದ್ದ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಆದರೆ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಗಾವಿತ್‌ ಅವರು ಮಾಡಿದ್ದ ಇಂಥದ್ದೇ ಮನವಿಯನ್ನು ಒಪ್ಪಿಕೊಳ್ಳಲಾಗಿತ್ತು ಎಂದವರು ಆಪಾದಿಸಿದರು.

ಮತದಾನ ಅವಧಿ ಹೆಚ್ಚಳಕ್ಕೆ ಅವಕಾಶವಿತ್ತ ಪ್ರತಿಯೊಂದು ಮತಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸರಾಸರಿ 100 ಹೆಚ್ಚುವರಿ ಮತಗಳು ಚಲಾವಣೆಯಾದವು ಮತ್ತು ಇದರಿಂದ ಒಟ್ಟಾಗಿ ಬಿಜೆಪಿಯ ಮತಗಳು ಕೆಲ ಸಾವಿರ ಹೆಚ್ಚಾದವು. ಆದರೆ ಸುಮಾರು  60,000 ಮಂದಿಗೆ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಮತದಾನ ಬಳಿಕ ಶೇ. 46 ಮತದಾನವಾಗಿರುವುದಾಗಿ ಜಿಲ್ಲಾಧಿಕಾರಿ ಘೋಷಿಸಿದ್ದರು. ಆದರೆ ಮರುದಿನ ಅಂತಿಮ ಅಂಕಿ-ಅಂಶಗಳ ಪ್ರಕಟನೆ ವೇಳೆ ಈ ಪ್ರಮಾಣ ಶೇ. 56ಕ್ಕೇರಿತು. ಅಂದರೆ ರಾತ್ರಿ ಬೆಳಗಾಗುವುದರೊಳಗಾಗಿ 82,000 ಮತಗಳು ಹೆಚ್ಚಾದವು ಎಂದವರು ಹೇಳಿದರು.

ಬಿಜೆಪಿ ಆರೆಸ್ಸೆಸ್‌ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು  ಪ್ರಮುಖ ಸಾಂವಿಧಾನಿಕ ಹುದ್ದೆಗಳಿಗೆ ನೇಮಿಸಿ ಚುನಾವಣಾ ಪ್ರಕ್ರಿಯೆಯನ್ನು ನಿಯಂತ್ರಿಸಿತು ಎಂದವರು ಆರೋಪಿಸಿದರು.

ಈಚೆಗಷ್ಟೇ ಕೆಲ ರಾಜ್ಯಗಳಲ್ಲಿ ನಡೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅನುಭವಿಸಿದ ಹಿನ್ನಡೆಯನ್ನು ಅವರು ಪ್ರಸ್ತಾವಿಸಿದರು. “ಬಿಜೆಪಿ ಪಾಲ^ರ್‌ ಲೋಕಸಭಾ ಉಪಚುನಾವಣೆಯಲ್ಲಿ ಗೆಲ್ಲಲು ಶಕ್ತವಾಯಿತು. ಆದರೆ ಅದು ಇತರ ಅನೇಕ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಗಳಲ್ಲಿ ಸೋತಿತು. ಇದು ದೇಶದ ಹಲವಾರು ಭಾಗಗಳಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದನ್ನು ತೋರಿಸುತ್ತದೆ’ ಎಂದವರು ಅಭಿಪ್ರಾಯಪಟ್ಟರು.

ಉಪಚುನಾವಣಾ ಫ‌ಲಿತಾಂಶಗಳು ಬಿಜೆಪಿಯ ಪತನದ ಆರಂಭವನ್ನು ಸಂಕೇತಿಸುತ್ತವೆ ಎಂದ ಅವರು, ದೇಶ ಯಾವ ಮನಃಸ್ಥಿತಿಯಲ್ಲಿದೆಯೆಂದರೆ ಅದು ಕಾಂಗ್ರೆಸ್‌ ಅಥವಾ ದೇವೇಗೌಡರನ್ನು ಒಪ್ಪಿಕೊಳ್ಳಬಲ್ಲುದು ಆದರೆ ಮೋದಿ-ಶಾ ಜೋಡಿಯನ್ನು ಬಯಸುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next