Advertisement

Kerala landslide; ವಯನಾಡ್‌ ಪವಾಡ: ಕಾಲಡಿ ರಕ್ಷಿಸಿದ ಆನೆಗಳು!

12:32 AM Aug 03, 2024 | Team Udayavani |

ವಯನಾಡ್‌: ಘೋರ ಭೂಕುಸಿತ ದುರಂತದಲ್ಲಿ ಪಾರಾಗಿ ಜಲಪ್ರಳಯದ ನಡುವೆಯೂ ಈಜಿ ದಡ ಸೇರಿದ ಅಜ್ಜಿ -ಮೊಮ್ಮಗಳಿಗೆ ಕಾಡಾನೆಯೊಂದು ತನ್ನ ಕಾಲಡಿಯಲ್ಲಿ ಆಶ್ರಯ ನೀಡಿ ರಕ್ಷಿಸಿರುವ ಅಚ್ಚರಿಯ ಘಟನೆ ಕೇರಳದ ವಯನಾಡಿನಲ್ಲಿ ನಡೆದಿದೆ ಎನ್ನಲಾಗಿದೆ. ಪಾರಾದ ಮಹಿಳೆಯೇ ಖುದ್ದು ಈ ವಿಚಾರವನ್ನು ಹಂಚಿಕೊಂಡು ಕಣ್ಣೀರಾಗಿದ್ದಾರೆ.

Advertisement

ಚೂರಲ್‌ವುಲ ಭೂಕುಸಿತದಲ್ಲಿ ಸುಜಾತಾ ಎಂಬ ಮಹಿಳೆಯ ನಿವಾಸ ಹಾನಿಗೊಳಗಾಗಿದೆ. ಆದರೆ ಆ ಕುಟುಂಬದ ಎಲ್ಲರೂ ಪವಾಡ ಸದೃಶ ವೆನ್ನುವಂತೆ ಪಾರಾಗಿದ್ದು, ಸದ್ಯ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿ ದ್ದಾರೆ. ಸುಜಾತಾ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಪ್ರಕಾರ ಅಂದು ಇದ್ದಕ್ಕಿದ್ದಂತೆ ಜೋರಾದ ಸದ್ದು ಕೇಳಿಬಂತು. ಕಿಟಕಿ ತೆಗದು ನೋಡಿದರೆ ಸುತ್ತಲೂ ನೀರು ಆವರಿಸಿರುವುದು ಕಂಡಿತು. ತನ್ನ ನಿವಾಸದ ಪಕ್ಕದಲ್ಲಿದ್ದ 2 ಅಂತಸ್ತಿನ ಕಟ್ಟಡ ಕೂಡ ಕುಸಿದು ಬಿದ್ದಿತ್ತು. ತತ್‌ಕ್ಷಣ ಮೊಮ್ಮಗಳ ಕೈಹಿಡಿದು ಮನೆಯಿಂದ ಹೊರಬಿದ್ದು ನೆರೆಮನೆಯ ಬಳಿಗೆ ಈಜಿದ್ದಾಗಿ ಹೇಳಿಕೊಂಡಿದ್ದಾರೆ.

ಅಷ್ಟರಲ್ಲಾಗಲೇ ಮಗ, ಸೊಸೆ ಮತ್ತು ಮೊಮ್ಮಗ ಆ ಮನೆ ತಲುಪಿದ್ದು, ಸುಜಾತಾ ಮತ್ತು ಅವರ ಮೊಮ್ಮಗಳ ಕೈಹಿಡಿದು ಮೇಲೆ ಎಳೆದು ಕೊಂಡಿದ್ದಾರೆ. ಬಳಿಕ ಅಲ್ಲಿಂದ ಕಾಫಿ ತೋಟದ ಮಾರ್ಗ ವಾಗಿ ಎಲ್ಲರೂ ಓಡಲಾರಂಭಿಸಿದ್ದಾರೆ. ಮಗ, ಸೊಸೆ ಮತ್ತು ಮೊಮ್ಮಗ ಅಲ್ಲಿಂದ ಪಾರಾಗುತ್ತಿದ್ದಂತೆ ತನಗೆ ಹಾಗೂ ಅವರ ಮೊಮ್ಮಗಳಿಗೆ ಕಾಡಾನೆಯೊಂದು ಎದುರಾಯಿತು ಎಂದು ಆಕೆ ತಿಳಿಸಿದ್ದಾರೆ.

ಆನೆ ಎದುರಾದ ಬಳಿಕ ಸುಜಾತಾ ಅದರ ಎದುರು ಕೈಮುಗಿದು ಪ್ರಾರ್ಥಿಸಿ, ಬಹುದೊಡ್ಡ ದುರಂತದಿಂದ ಪಾರಾಗಿ ಬಂದಿದ್ದೇವೆ. ದಯ ವಿಟ್ಟು ನಮಗೆ ತೊಂದರೆ ನೀಡದಿರು ಎಂದರಂತೆ. ಬಳಿಕ ಸುತ್ತಲೂ ಗಾಢ ಕತ್ತಲು ಆವರಿಸಿ, ಜೋರು ಮಳೆಯಾಗುತ್ತಿದ್ದ ಕಾರಣ ಆನೆಯ ಕಾಲಿನ ಬುಡದಲ್ಲೇ ತಾವು ಕುಳಿತಿದ್ದುದಾಗಿ ಹೇಳಿದ್ದಾರೆ. ಅವರಿದ್ದೆಡೆಗೆ ಇನ್ನೂ 2 ಕಾಡಾನೆಗಳು ಬಂದವು ಆದರೆ ಯಾವ ಆನೆಯೂ ತೊಂದರೆ ನೀಡದೆ ಬೆಳಗ್ಗಿನ ಜಾವದ ವರೆಗೂ ತಮ್ಮನ್ನು ರಕ್ಷಿಸಿವೆ ಎಂಬುದಾಗಿ ಸುಜಾತಾ ಹೇಳಿಕೊಂಡಿದ್ದಾರೆ.

ಬಳಿಕ ಯಾರೋ ಅಪರಿಚಿತರು ಬಂದು ಅಜ್ಜಿ -ಮೊಮ್ಮಗಳನ್ನು ನಿರಾಶ್ರಿತರ ಶಿಬಿರಕ್ಕೆ ಕರೆದೊಯ್ದರು. ಅಲ್ಲಿ ಮತ್ತೆ ಕುಟುಂಬಸ್ಥರು ಸಿಕ್ಕಿದರು ಎಂದು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next