Advertisement

ಹಚ್ಚಹಸುರಿನಿಂದ ಕಂಗೊಳಿಸುವ ವಯನಾಡು

11:05 PM Feb 26, 2020 | mahesh |

ಉತ್ತರ ಕೇರಳದ ಅತ್ಯಂತ ಸುಂದರ ಜಿಲ್ಲೆ ವಯನಾಡ್‌… ಈ ಸ್ಥಳ ತನ್ನ ಹಸುರು ಸೌಂದರ್ಯದ ಕಂಗೊಳಿಸುತ್ತಿರುವ ಈ ನಾಡು ಪ್ರಕೃತಿ ಸೌಂದರ್ಯದಿಂದ ಕಣ್ಣಕಟ್ಟುತ್ತದೆ. ತಿರುವು ಮುರುವಿನ ಘಾಟಿಯ ರಸ್ತೆಗಳು, ಸುತ್ತ ಮುತ್ತಲ ಕಾಫಿ-ಚಹಾದ ಬೆಳೆಗಳು, ತಂಗಾಳಿ ಎಲ್ಲವೂ ಸಹ ಪ್ರಯಾಣದ ಉತ್ಸುಕತೆಯನ್ನು ವೃದ್ಧಿಸುತ್ತದೆ.

Advertisement

ವಯನಾಡಿಗೆ ಪ್ರಯಾಣ ಮಂಗಳೂರಿನಿಂದ ಹೊರಟು ಕಾಸರಗೋಡು ಕಣ್ಣೂರು ಮಾರ್ಗವಾಗಿ ಸಾಗಿತ್ತು.. ಬೆಳಗಿನ ಜಾವ ಹೋಟೆಲ್‌ ಒಂದರಲ್ಲಿ ತಂಗಿ, ಅಲ್ಲಿ ತಿಂಡಿ ಮುಗಿಸಿಕೊಂಡು ನಮ್ಮ ಪ್ರಯಾಣ ಹೊರಟಿದ್ದು, ತುಷಾರ ಗಿರಿ ಜಲಪಾತ ಕಣ್ಣು ತುಂಬಿಕೊಳ್ಳಲು.

ವಯನಾಡಿನ ತುಷಾರ ಗಿರಿ ಜಲಪಾತ ಇಲ್ಲಿನ ಪ್ರಮುಖ ಜಲಪಾತಗಳಲ್ಲಿ ಒಂದಾಗಿದ್ದು ಚಾಲಪ್ಪುಳ ನದಿಯನ್ನ ಹುಟ್ಟುಹಾಕುತ್ತದೆ ..(ಆದರೆ ಇದು ಕೋಝಿಕ್ಕೋಡ್‌ ಜಿಲ್ಲೆಗೆ ಸೇರಿದೆ) ಒಟ್ಟು ಮೂರು ಜಲಪಾತಗಳಿದ್ದು, ಸದ್ಯ ಒಂದಕ್ಕೆ ಮಾತ್ರ ಪ್ರವಾಸಿಗರಿಗೆ ಅನುಮತಿ ಇದೆ.. ಅಲ್ಲಿ ಸುಮಾರು ಹೊತ್ತಿನವರೆಗೂ ನೀರಾಟ ಆಡಿದ ನಮಗೆ ಹತ್ತಾರು ರುದ್ರಾಕ್ಷಿ ಮಣಿ ಹೋಲುವ ಬೀಜಗಳು ಸಿಕ್ಕಿದವು. ಸ್ಮರಣಿಕೆಯ ರೂಪವಾಗಲಿ ಎಂದು ಜೇಬಿನಲ್ಲಿ ಇಟ್ಟುಕೊಂಡೆವು..ಅಲ್ಲಿಂದ ಹಿಂದಿರುಗುವ ಹೊತ್ತು ಮಧ್ಯಾಹ್ನದ ಸಮಯ ಆಗಿತ್ತು.. ನಡು ಹೊತ್ತಿನ ಬುತ್ತಿ ಬಿಚ್ಚಿ , ಹೊಟ್ಟೆ ತುಂಬಿಸದೆ ವಿಧಿ ಇರಲಿಲ್ಲ..ಭರ್ಜರಿ ಭೋಜನದ ಅನಂತರ ನಮ್ಮ ಯಾತ್ರೆ ಹೊರಟಿದ್ದು ಮಾತ್ರ ಎಡಕಲ್‌ ಗುಹೆಗಳನ್ನ ನೋಡಲು..

ಮರುದಿನ ಬೆಳಗ್ಗೆ ಎದ್ದು,ನಮಗಾಗಿ ತಯಾರಿಸಿದ್ದ ಕೇರಳ ಶೈಲಿಯ ಮರಗೆಣಸಿನ ಖಾದ್ಯ ಮತ್ತು ಆಪಂ ಸೇವಿಸಿ ಮತ್ತೂಂದು ಪ್ರವಾಸಿ ತಾಣದತ್ತ ಹೆಜ್ಜೆ ಹಾಕಿದ್ದೆವು. ವಯನಾಡಿನ ಆಕರ್ಷಣೆಗಳಲ್ಲೊಂದಾದ ಬಾನಾಸುರ ಅಣೆಕಟ್ಟನ್ನು ನೋಡಲು ಹೊರಟಿದ್ದೆವು. ಸುಧೀರ್ಘ‌ ಒಂದು ಗಂಟೆಯ ಅವಧಿ! ಬಾನಾಸುರ ಅನ್ನೋದು ಮಹಾಬಲಿ ಚಕ್ರವರ್ತಿಯ ಮಗನ ಹೆಸರಂತೆ. ಕಬಿನಿ ನದಿಯ ಮೇಲೆ ಕಟ್ಟಿದ ಈ ಅಣೆಕಟ್ಟು ಭಾರತದ ಅತೀ ದೊಡ್ಡ ಹಾಗೂ ಏಷ್ಯಾದ ಎರಡನೇ ಅತಿದೊಡ್ಡ ಮಣ್ಣಿನ ಅಣೆಕಟ್ಟು ಎಂದು ಕರೆಯಲಾಗುತ್ತದೆ. ಕಕ್ಕಾಯಂ ಜಲ ವಿದ್ಯುತ್‌ ಗಾಗಿ ಕಟ್ಟಿದ್ದ ಅಣೆಕಟ್ಟಿನಿಂದ ನದಿ -ದ್ವೀಪಗಳ ನೋಟ ಮಾತ್ರ ವಿಹಂಗಮ.. ನಾವಂತೂ ದೋಣಿ ಏರಿ ,ನದಿಯ ನೀರಿನ ಹರಿವಿನ ಪರಿಯ ಆದರಿಸಿದ್ದೆವು..ಆಗಾಗ್ಗೆ ಸ್ವಂತಿ, ತತ್‌ಕ್ಷಣ ಅಂಬಿಗನ ವಿನಂತಿ ಅಡ್ಡ ನಿಲ್ಲದಿರಿ ಎಂದು.. ಬರೀ ಡ್ಯಾಂ ಮಾತ್ರವಲ್ಲ ಇನ್ನೊಂದು ವೈಶಿಷ್ಟಕ್ಕೂ ಹೆಸರಾಗಿದೆ.. ನೂರಾರು ಪ್ರವಾಸಿಗರು ಆಳೆತ್ತರದ ಆಗಸದಲ್ಲಿ ವೇಗವಾಗಿ ವಿಹರಿಸುತ್ತಿದ್ದರು .. ಹತ್ತಿರದಲ್ಲಿ ಚಿಕ್ಕ ಪಾರ್ಕ್‌ ಕೂಡ ಇದೆ.

ಮಧ್ಯಾಹ್ನದ ಊಟ ಮುಗಿಸಿ ನಂತರ ನಾವು ತೆರಳಿದ್ದು ಪ್ರಖ್ಯಾತ ದೇವಾಲಯವಾದ ತಿರುನೆಲ್ಲಿ ನಾರಾಯಣ ಮಂದಿರಕ್ಕೆ.. ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಈ ಕ್ಷೇತ್ರ ಜನನ ಮತ್ತು ಮರಣ ಎರಡರ ಸಂಪ್ರದಾಯಕ್ಕೂ ಪ್ರಸಿದ್ಧಿ ಪಡೆದಿದೆ ಎನ್ನುತ್ತಾರೆ. ಬ್ರಹ್ಮನಿಂದ ಸ್ಥಾಪಿತವಾದ ಈ ಆಲಯ ಬ್ರಹ್ಮಗಿರಿ ಪರ್ವತದ ತಪ್ಪಲಿನಲ್ಲಿದೆ..ದೇಗುಲದ ಪಕ್ಕದಲ್ಲೇ ಪಾಪನಾಶಿನಿ ನದಿಯು ಹರಿಯುತ್ತದೆ.. ನಾವಂತೂ ತಲುಪೋ ಹೊತ್ತಿಗೆ ದೇಗುಲ ಮುಚ್ಚಿತ್ತು. ಬಹುತೇಕರು ಕೇರಳಿಗರೆ ನಮ್ಮ ಜತೆ ಇದ್ದ ತಂಡದವರು, ಗುನ್ನಿಕಾ ಎಂಬ ಗುಹೆಯ ಕಡೆ ತೆರಳುವ ಸಲಹೆ ನೀಡಿದ್ದರು. ಕಡಿದಾದ ಬಂಡೆಕಲ್ಲುಗಳ ಮಧ್ಯೆ ,ನಡಿಗೆಯ ಅಡಿಯಿಡುತ್ತಾ,ಒಡನೆ ಎಡವದಂತೆ ಎಚ್ಚರಿಕೆಯಿಂದ ಮೇಲೇರಿ ಕಲಕಲ ಹರಿಯುವ ಸಲಿಲದ ಅಂದ ಕಂಡೆವು..ಅಲ್ಲಿಂದ ಗುಹೆಯೊಳಗಿದ್ದ ಶಿವನ ದರ್ಶನ ಮಾಡಿ ಹಿಂದಿರಿಗಿದ್ದೆವು..

Advertisement

ಒಟ್ಟಾರೆ ಎರಡು ದಿನದ ವಯನಾಡ್‌ ಪ್ರವಾಸ ಮರೆಯಲಾಗದ ಅನುಭವ ಕೊಟ್ಟಿದ್ದಂತೂ ಸತ್ಯ.. ತಂಪಾದ ವಾತಾವರಣ,ಗೆಳೆಯರ ಗಣ,ಹೊಸಹೊಸ ತಾಣ,ಭರ್ಜರಿ ಔತಣ,ನೂತನ ಕಥನ ಬರೆಸಿತ್ತು..ಸ್ವರ್ಗಕ್ಕೆ ಕಿಚ್ಚು ಹಚ್ಚಿತ್ತು..

ಮಾನವನ ಜೀವ ವಿಕಾಸ ತಿಳಿಸುವ ಎಡಕಲ್‌ ಗುಹೆ
ಸಮುದ್ರ ಮಟ್ಟದಿಂದ ಸುಮಾರು 1200 ಮೀಟರ್‌ ಎತ್ತರದಲ್ಲಿರುವ ಈ ಗುಹೆ ಅಂಬುಕುತ್ತಿ ಬೆಟ್ಟದ ಮೇಲಿದೆ.. ನಾವು ಮೆಟ್ಟಿಲೇರುತ್ತಾ, ಏದುಸಿರು ಬಿಡುತ್ತಾ ತಲುಪೋ ಹೊತ್ತಿಗೆ ಗಂಟೆ ನಾಲ್ಕರತ್ತ ಬಂದಿತ್ತು.. ಅಷ್ಟೊತ್ತಿಗಾಗಲೇ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ ಗುಹೆಯೊಳಗೆ ಹೋಗೋರು ಆದಷ್ಟು ಬೇಗ ಹೋಗಿ ಎಂದು ಆಜ್ಞಾಪಿಸತೊಡಗಿದ..ಅಷ್ಟಕ್ಕೂ ಎಡಕ್ಕಲ್‌ ಗುಹೆಗಳು ಆದಿಮಾನವ ನವಶಿಲಾಯುಗಕ್ಕೆ ಕಾಲಿಟ್ಟ ಕುರುಹುಗಳನ್ನ, ಕಲ್ಲಚ್ಚು ಬರಹಗಳನ್ನ ತೋರಿಸುತ್ತದೆ. ಸದ್ಯದಲ್ಲೇ ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾಗಲಿರೋ ಈ ಜಾಗವನ್ನ ಮೊಟ್ಟ ಮೊದಲ ಬಾರಿಗೆ ಅನ್ವೇಷಿಸಿದ್ದು 1895 ರಲ್ಲಿ ಮಲಬಾರ್‌ ಸೂಪರಿಂಟೆಂಡೆಂಟ್‌ ಆಫ್ ಪೊಲೀಸ್‌ ಫಾಸೆಟ್‌ ಫ್ರೆಡ್‌ ಎನ್ನುತ್ತಾರೆ..ಇಲ್ಲಿ ಮಾನವರ, ಪ್ರಾಣಿಗಳ ಜೀರ್ಣ ಚಿತ್ರಗಳು ಮಾನವರ ಪ್ರಗತಿಯ ಸಾಕ್ಷಿಯಾಗಿದೆ..

ಅಲ್ಲಿಂದ ಹೊರಗಡೆ ಬಂದಾಗ ನಾವು ಕಂಡಿದ್ದು ದಾರಿಯುದ್ದಕ್ಕೂ ಸ್ಥಳೀಯ ಉತ್ಪನ್ನಗಳ ವ್ಯಾಪಾರಸ್ಥರು.. ವಯನಾಡಿನ ಕಾಫಿ, ಚಹಾ, ಮೂಲಿಕೆಗಳನ್ನ ಮಾರಾಟ ಮಾಡುತ್ತಿದ್ದರು.. ಮತ್ತೆ ಅಲ್ಲಿಂದ ಹೊಟೇಲ್‌ಗೆ ಹಿಂದಿರುಗಿದ ನಾವು ರಾತ್ರಿ ಕ್ಯಾಂಪ್‌ ಫೈರ್‌ ಮೂಲಕ ಪ್ರವಾಸಕ್ಕೆ ಇನ್ನಷ್ಟು ಮೆರಗು ನೀಡಿದ್ದೆವು.

1 ಮಂಗಳೂರಿನಿಂದ ವಯನಾಡು 265 ಕಿ.ಮೀ ದೂರದಲ್ಲಿದೆ. ಬಸ್‌ ಸೌಲಭ್ಯವಿದೆ. ಆದರೆ ಹೆಚ್ಚಿನ ಸ್ಥಳಗಳನ್ನು ನೋಡಬೇಕಾದರೆ ನಾವು ನಮ್ಮ ಸ್ವಂತ ವಾಹನ ತೆಗೆದುಕೊಂಡು ಹೋಗುವುದು ಒಳಿತು.
2 ತೋಲ್ಪೆಟ್ಟಿ ಅಭಯಾರಣ್ಯ, ಕುರುವ ದ್ವೀಪಗಳು ಸಮೀಪದ ನೋಡಬಹುದಾದ ಸ್ಥಳಗಳಾಗಿವೆ.
3 ವಯಾನಾಡು ನಗರ ಪ್ರದೇಶ ವಾದುದರಿಂದಾಗಿ ಇಲ್ಲಿ ಹೊಟೇಲ್‌ ರೆಸ್ಟೋರೆಂಟ್‌ಗಳು ವ್ಯವಸ್ಥೆ ಇದೆ.
4 ಕಾಫಿನ ತೋಟಗಳು, ಗಿಡ ಮೂಲಿಕೆಗಳು, ಕೋಝಿಕ್ಕೋಡ್‌ ಹಲ್ವಾ ಇವುಗಳ ಸ್ವಾದ ಸವಿಯುವುದನ್ನು ಮರೆಯದಿರಿ.

– ಸುಭಾಸ್‌ ಮಂಚಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next