ಮಂಗಳೂರು: ಜಿಲ್ಲೆಯಲ್ಲಿ ಮರಳು ಲಭಿಸದೆ ನಿರ್ಮಾಣ ಕಾಮಗಾರಿಗಳಿಗೆ ಸಮಸ್ಯೆ ಯಾಗುತ್ತಿರುವ ಹಿನ್ನೆಲೆಯಲ್ಲಿ ನಾನ್ ಸಿಆರ್‌ಝಡ್ ಮರಳು ಬ್ಲಾಕ್‌ಗಳಲ್ಲಿ ವೇ ಬ್ರಿಜ್ ಅಳವಡಿಸಿಕೊಳ್ಳಲು ಅಂತಿಮ ದಿನವನ್ನು ಮತ್ತೆ ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ.
ನವೆಂಬರ್ ಮೂರನೇ ವಾರದೊಳಗೆ ಎಲ್ಲ ಮರಳು ಬ್ಲಾಕ್‌ಗಳ ಗುತ್ತಿಗೆದಾರರು ಷರತ್ತಿನಂತೆ ವೇ ಬ್ರಿಜ್ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮರಳಿನ ಕೊರತೆಯಾಗುತ್ತಿರುವ ವಿಚಾರದ ಅರಿವಿನಲ್ಲಿದೆ. ಮರಳಿನ ಲಭ್ಯತೆ ಹೆಚ್ಚಿಸುವುದಕ್ಕಾಗಿ ವೇ ಬ್ರಿಜ್ ಅಳವಡಿಸುವುದಕ್ಕೆ ಕಾಲಾವಕಾಶ ವಿಸ್ತರಣೆ ಮಾಡಲಾಗಿದೆ ಎಂದರು.
ಸಿಆರ್‌ಝಡ್ ಪ್ರದೇಶದಲ್ಲಿ ಮರಳು ದಿಣ್ಣೆಗಳ ಬೆಥಮೆಟ್ರಿ ಸರ್ವೇ ಮಾಡಿ ಪ್ರಸ್ತಾವನೆಯನ್ನು ರಾಜ್ಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರಕ್ಕೆ ಕಳುಹಿಸಿದ್ದೇವೆ. ಆದರೆ 2019ರ ಸಿಆರ್‌ಝಡ್ ಅಧಿಸೂಚನೆಯನ್ವಯ ಹೊಸ ನಿಯಮಾವಳಿ ಅನುಮೋದನೆ ಯಾಗುವ ಕಾರಣ ವಿಳಂಬವಾಗುತ್ತಿದೆ ಎಂದರು.
ಸಿಆರ್‌ಝಡ್ ಮರಳು ಯಾವಾಗ ಲಭ್ಯವಾಗಬಹುದು ಎನ್ನುವುದು ನಮ್ಮ ಕೈಯಲ್ಲಿಲ್ಲ, ಆದರೆ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳು ಸಿಗಬಹುದು. ಅ. 15ರ ವರೆಗೆ ಮುಂಗಾರು ಅವಧಿ ಯಾದ ಕಾರಣ ಮರಳು ತೆಗೆಯುತ್ತಿರಲಿಲ್ಲ, ಇನ್ನು ಮರಳು ಸಿಗಲಿದೆ. ಮರಳಿನ ಲಭ್ಯತೆ ಹೆಚ್ಚಾದ ಬಳಿಕ ಕಾಳಸಂತೆಯಲ್ಲಿ ಅಕ್ರಮ ಮರಳು ಮಾರಾಟ ಕಡಿಮೆಯಾಗಬಹುದು. ಅಲ್ಲದೆ ಪೊಲೀಸರು, ಗಣಿ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಮರಳುಗಾರಿಕೆ ನಡೆಸುವ ದೋಣಿಗಳು, ಲಾರಿಗಳನ್ನು ವಶಪಡಿಸಿಕೊಂಡು ಕೇಸ್ ಹಾಕುತ್ತಿದ್ದಾರೆ ಎಂದೂ ತಿಳಿಸಿದರು.
ಮರಳಿನ ಸಮಸ್ಯೆ ಕುರಿತಂತೆ ಉದಯವಾಣಿ “ವೇ ಬ್ರಿಜ್ ಇಲ್ಲದೆ ನಾನ್ ಸಿಆರ್‌ಝಡ್ ಮರಳಿಗೂ ದಿಗ್ಬಂಧನ’ ಅ. 21ರಂದು ವಿಶೇಷ ವರದಿ ಪ್ರಕಟಿಸಿತ್ತು.