Advertisement

ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧ: ಬಾಲಕ ಸಮುದ್ರ ಪಾಲು

06:00 AM Apr 23, 2018 | |

ಮಂಗಳೂರು/ಉಡುಪಿ: ಕಳೆದು ಎರಡು ದಿನಗಳಿಂದ ಹವಾಮಾನ ವೈಪರಿತ್ಯದಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು, ರವಿವಾರ ಮಧ್ಯಾಹ್ನದಿಂದ ಕರಾವಳಿ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು. ಮರವಂತೆಯಲ್ಲಿ ರವಿವಾರ ಸಂಜೆ ನೀರಾಟ ಆಡುತ್ತಿದ್ದ ಬಾಲಕನೊಬ್ಬ ಅಲೆಗಳಿಗೆ ಸಿಲುಕಿ ಸಮುದ್ರ ಪಾಲಾಗಿದ್ದಾನೆ. ವಿವಿಧೆಡೆ ಉಪ್ಪು ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ನಿಗಾ ವಹಿಸಲಾಗಿದೆ.

Advertisement

ಮುಡಿಪು ಸಮೀಪದ ಬೋಳಿಯಾರು ನಿವಾಸಿ ರಶೀದ್‌ ಅವರ ಪುತ್ರ ಮೊಹಮ್ಮದ್‌ ಜುನೈದ್‌ (12) ಮೃತ ಬಾಲಕ. ಈತ ತಂದೆ, ತಾಯಿ ಮತ್ತು ಬಂಧುಗಳ ಜತೆಗೆ ಮಂಗಳೂರಿನಿಂದ ಶಿರೂರಿಗೆ ಮದುವೆಗೆ ತೆರಳಿದ್ದ. ಮರಳಿ ಬರುವಾಗ ಸಂಜೆ 5.30ರ ಸುಮಾರಿಗೆ ಮರವಂತೆಯ ಸುಂದರ ಕಡಲ ತಡಿಯ ವೀಕ್ಷಣೆಗೆ ತೆರಳಿದ್ದರು. ವರಾಹ ಮಾರಸ್ವಾಮಿ ದೇವಸ್ಥಾನದ ಎದುರು ಗೂಡಂಗಡಿ ಸಮೀಪ ಬಾಲಕ ಸಮುದ್ರ ದಡಕ್ಕೆ ಇಳಿಯುತ್ತಿದ್ದಂತೆ ಭಾರೀ ಗಾತ್ರದ ಅಲೆಗಳು ಅಪ್ಪಳಿಸಿ ಬಾಲಕ ಸಮುದ್ರ ಪಾಲಾಗಿದ್ದಾನೆ. ತಡರಾತ್ರಿವರೆಗೂ ಬಾಲಕನಿಗಾಗಿ ಹುಡುಕಾಟ ಮುಂದುವರಿದಿತ್ತು.

80ಕ್ಕೂ ಹೆಚ್ಚು ಮನೆಗಳಿಗೆ ನೀರು: ರವಿವಾರ ಉಳ್ಳಾಲ ಮತ್ತು ಉಚ್ಚಿಲ ಸಮುದ್ರ ತೀರದಲ್ಲಿ ಸಮುದ್ರದ ಅಲೆಗಳು ದಡಕ್ಕಪ್ಪಳಿಸುವುದರೊಂದಿಗೆ ಪ್ರವಾಹದ ರೂಪದಲ್ಲಿ ಸುಮಾರು 80ಕ್ಕೂ ಹೆಚ್ಚು ಮನೆಗಳನ್ನು ಸುತ್ತುವರಿದಿದ್ದು, ಉಳ್ಳಾಲ, ಉಚ್ಚಿಲ ಪ್ರದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಮುದ್ರದ ನೀರು ಈ ರೀತಿ ಉಕ್ಕೇರಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ. ಉಚ್ಚಿಲದಲ್ಲಿ 3 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಜಿಲ್ಲಾಧಿ ಕಾರಿ, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರವು ಹವಾಮಾನ ವೈಪರೀತ್ಯದಿಂದಾಗಿ ಶನಿವಾರ ಮತ್ತು ರವಿವಾರ ಕಡಲಿನ ಅಲೆಗಳ ಅಬ್ಬರ ಹೆಚ್ಚಳವಾಗಲಿದೆ ಎಂದು ಮೀನುಗಾರಿಕಾ ಇಲಾಖೆಗೆ ಮುನ್ಸೂಚನೆ ನೀಡಿತ್ತು. 

ಇದನ್ನು ಆಧರಿಸಿ ಮೀನುಗಾರಿಕಾ ಇಲಾಖೆಯು ಕಳೆದ ಎರಡು ದಿನಗಳ ಹಿಂದೆಯೇ ಸ್ಥಳೀಯ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದು, ಇದೇ ಕಾರಣಕ್ಕೆ ಶನಿವಾರ ಮತ್ತು ರವಿವಾರ ಅನೇಕ ಬೋಟುಗಳು ನಗರದ ಧಕ್ಕೆ ಬಂದರಿನಲ್ಲಿಯೇ ಲಂಗರು ಹಾಕಿತ್ತು. ಈ ನಡುವೆ ರವಿವಾರ ಅಲೆಗಳ ಏರಿಕೆ ಕೊಂಚ ಕಡಿಮೆಯಾಗುವ ನಿರೀಕ್ಷೆಯಲ್ಲಿ ಕೆಲ ಬೋಟುಗಳು ಮೀನುಗಾರಿಕೆಗೆ ಆಳ ಸಮುದ್ರಕ್ಕೆ ತೆರಳಿವೆೆ.

Advertisement

ಕಾಪು, ಪಣಂಬೂರು ಕಡಲ ಕಿನಾರೆಗಳಲ್ಲಿ ಪ್ರವಾಸಿಗರನ್ನು ಕಡಲಿಗೆ ಇಳಿಯಲು ಬಿಡಲಿಲ್ಲ. ಈ ಬಗ್ಗೆ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಹೇಶ್‌ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದು, “ವಾತಾವರಣದಲ್ಲಿನ ಉಷ್ಣಾಂಶದಲ್ಲಿ ಗಮನಾರ್ಹ ಏರುಪೇರು ಉಂಟಾ ದಾಗ ಸಹಜವಾಗಿಯೇ ಗಾಳಿಯ ವೇಗವೂ ಹೆಚ್ಚಳವಾಗುತ್ತದೆ. ಪರಿಣಾಮ ಅಲೆಗಳ ಅಬ್ಬರ ಹೆಚ್ಚಾಗುತ್ತದೆ. ಹವಾಮಾನದ ವೈಪರಿತ್ಯದಿಂದಾಗಿ ಕಳೆದ 2 ದಿನಗಳಿಂದ ಸುಮಾರು 4 ಮೀಟರ್‌ನಷ್ಟು ಎತ್ತರಕ್ಕೆ ಅಲೆಗಳು ಅಪ್ಪಳಿಸುತ್ತಿವೆ. ಸಾಮಾನ್ಯ ದಿನಗಳಲ್ಲಿ ಸುಮಾರು 1.52 ಮೀ.ನಷ್ಟು ಎತ್ತರಕ್ಕೆ ಅಲೆಗಳು ದಡಕ್ಕೆ ಅಪ್ಪಲಿಸುತ್ತವೆೆ. ಅದೇ ಇತ್ತೀಚೆಗೆ ಓಖೀ ಚಂಡಮಾರುತ ಬಂದಾಗ ಸುಮಾರು 6 ಮೀಟರ್‌ನಷ್ಟು ಎತ್ತರಕ್ಕೆ ಸಮುದ್ರದಲ್ಲಿ ಅಲೆಗಳು ಸೃಷ್ಟಿಯಾಗಿತ್ತು. ಈಗ ಅಲೆಗಳ ಇಳಿಮುಖವಾಗಿದ್ದು ಗಾಬರಿ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.

ಸೈಂಟ್‌ಮೇರೀಸ್‌ ಯಾನ ನಿಷೇಧ
ಮಲ್ಪೆ ಬೀಚ್‌ನಲ್ಲಿಯೂ ಅಲೆಗಳು ದಡಕ್ಕೆ ಬಡಿದು ನೀರು ರಸ್ತೆ ಬದಿಯ ವರೆಗೂ ಹರಿದು ಬಂದಿದೆ. ಪ್ರವಾಸಿಗರು ಕುಳಿತುಕೊಳ್ಳುವ ಜಾಗ ನೀರಿನಿಂದಾವೃತವಾಗಿತ್ತು.  ಪ್ರವಾಸಿಗರು ಸಮುದ್ರದಲ್ಲಿ ಬಹುದೂರ ಹೋಗಿ ಆಟವಾಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಮೈಕ್‌ ಮೂಲಕವೂ ಎಚ್ಚರಿಕೆಯ ಸಂದೇಶ ನೀಡಲಾಗುತ್ತಿ¤ದೆ. ಸೈಂಟ್‌ಮೇರೀಸ್‌ ದ್ವೀಪಕ್ಕೆ ತೆರಳುವ ಪ್ರವಾಸಿ ಬೋಟ್‌ಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಇದರಿಂದ ಪ್ರವಾಸಿಗರು ನಿರಾಶರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next