Advertisement

ಮೇಲೇಳುತ್ತಿವೆ ಅನುಮಾನದ ಅಲೆಗಳು !

11:15 AM Feb 27, 2020 | mahesh |

ಮಂಗಳೂರು: ನವಮಂಗಳೂರು ಬಂದರಿಗೆ ಹೂಳೆತ್ತಲು ಬಂದಿದ್ದ “ತ್ರಿದೇವಿ ಪ್ರೇಮ್‌’ ಮತ್ತು “ಭಗವತಿ ಪ್ರೇಮ್‌’ ಡ್ರೆಜ್ಜರ್‌ಗಳು ಮುಳುಗುವ ಅಪಾಯವನ್ನು ತಪ್ಪಿಸುವುದಕ್ಕೆ ಅವಕಾಶಗಳಿದ್ದರೂ ಸಂಬಂಧಪಟ್ಟವರು ಆಗ ಕಾರ್ಯಪ್ರವೃತ್ತರಾಗಿರಲಿಲ್ಲ ಎನ್ನುವ ಅಂಶ ಈಗ ಬೆಳಕಿಗೆ ಬಂದಿದೆ.

Advertisement

ಮುಂಬಯಿಯ ಮರ್ಕೆಟರ್‌ ಕಂಪೆನಿಗೆ ಸೇರಿದ ಈ ಎರಡೂ ಡ್ರೆಜ್ಜರ್‌ಗಳು ಸಮುದ್ರ ಪಾಲಾಗಿ ಐದು ತಿಂಗಳು ಕಳೆದಿದ್ದರೂ ಇನ್ನೂ ಮೇಲಕ್ಕೆತ್ತಿಲ್ಲ. ಮಳೆಗಾಲ ಪ್ರಾರಂಭದೊಳಗೆ ತೆರವುಗೊಳಿಸದಿದ್ದರೆ ಹಡಗು, ದೋಣಿಗಳ ಸುಗಮ ಸಂಚಾರಕ್ಕೆ ತೊಡಕಾಗುವ ಜತೆಗೆ ಪರಿಸರಕ್ಕೂ ಹಾನಿಯಾಗಬಹುದು. ಕೆಲವು ಮೀನುಗಾರಿಕೆ ಸಂಘಟನೆಗಳೂ ತೆರವು ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿವೆ. ಆದರೆ ವಿಮೆಯ ಅವಧಿ ಮುಗಿದ ಕಾರಣ ಅವನ್ನು ಮೇಲೆತ್ತುವುದಕ್ಕೆ ಡ್ರೆಜ್ಜರ್‌ಗಳ ಮಾಲಕರೂ ಆಸಕ್ತಿ ವಹಿಸುತ್ತಿಲ್ಲ.

ಮುನ್ಸೂಚನೆ ಇತ್ತೇ ?
ಸಾಮಾನ್ಯವಾಗಿ ಹಡಗುಗಳ ಸುರಕ್ಷೆ-ಕಾರ್ಯಕ್ಷಮತೆಯನ್ನು “ಈಕ್ವೇಸಿಸ್‌’ ಎನ್ನುವ ಸಂಸ್ಥೆ ದಾಖಲಿಸುತ್ತದೆ. ಅದರಲ್ಲಿ ಈ ಎರಡರ ಮಾಹಿತಿಯೂ ದಾಖಲಾಗಿದೆ. ಇದರಲ್ಲಿ “ಭಗವತಿ ಪ್ರೇಮ್‌’ ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಬಗ್ಗೆ 2019ರ ಮೇಯಲ್ಲಿÉಯೇ ಎಚ್ಚರಿಸಿದ್ದ ಅಂಶ ಗೊತ್ತಾಗಿದೆ. ಅಂದರೆ ಇಂಡಿಯನ್‌ ರಿಜಿಸ್ಟ್ರಾರ್‌ ಆಫ್‌ ಶಿಪ್ಪಿಂಗ್‌(ಐಎಸಿಎಸ್‌)ನವರು “ಭವಗತಿ ಪ್ರೇಮ್‌’ ಕಾರ್ಯಾಚರಣೆಗೆ ಯೋಗ್ಯವಲ್ಲ ಎನ್ನುವ ಮೂಲಕ ಅದರ “ಕ್ಲಾಸ್‌ ಸ್ಟೇಟಸ್‌’ ಅನ್ನು 2019ರ ಮೇ 14ರಂದು ವಜಾಗೊಳಿಸಿತ್ತು. “ತ್ರಿದೇವಿ ಪ್ರೇಮ್‌’ ಲಂಗರು ಹಾಕಿದಲ್ಲಿಯೇ ಮುಳುಗಿದ ಅನಂತರವೂ ಭಗವತಿ ಪ್ರೇಮ್‌ ತೆರವುಗೊಳಿಸುವ ಪ್ರಯತ್ನಿಸಿರಲಿಲ್ಲ. ಬದಲಿಗೆ, ಅದು ಇನ್ನೇನು ಸಮುದ್ರ ಪಾಲಾಗುವ ಹಂತದಲ್ಲಿದ್ದಾಗ, 2019ರ ಅ. 29ರಂದು ಸುರತ್ಕಲ್‌ ಬೀಚ್‌ನಲ್ಲಿ ದಡ ಸೇರಿಸಲಾಗಿತ್ತು. ಶಿಪ್ಪಿಂಗ್‌ ಸೊಸೈಟಿಯು “ಫಿಟ್‌ನೆಸ್‌ ಕ್ಲಾಸ್‌’ ರದ್ದುಗೊಳಿಸಿ ಐದು ತಿಂಗಳಾದ ಬಳಿಕ ಅದನ್ನು ದಡ ಸೇರಿಸಿದ್ದು ಏಕೆ ಎನ್ನುವುದು ಅನುಮಾನಕ್ಕೆ ಎಡೆ ಮಾಡಿದೆ.

ಎರಡಕ್ಕೂ ವಿಮೆಯಿಲ್ಲ!
ಎರಡೂ ಹಡಗುಗಳ ವಿಮೆ 2019ರ ಫೆ. 20ಕ್ಕೆ ಕೊನೆಗೊಂಡಿದ್ದು, ನವೀಕರಿಸಿರುವ ಬಗ್ಗೆ “ಶಿಪ್‌ ಪೋರ್ಟ್‌ ಕಮ್ಯೂನಿಟಿ ಸಿಸ್ಟಮ್‌’ನಲ್ಲಿ ಮಾಹಿತಿ ಲಭ್ಯವಿಲ್ಲ. ಈಗ ಇವುಗಳ ಅವಶೇಷ ತೆರವಿಗೂ ಕೋಟ್ಯಂತರ ರೂ. ವೆಚ್ಚವಾಗಲಿದ್ದು, ವಿಮೆಯಿಲ್ಲದ ಕಾರಣ ಕಂಪೆನಿ ಮಾಲಕರು ಸುಮ್ಮನಾಗಿದ್ದಾರೆ. ಶಿಪ್ಪಿಂಗ್‌ ಮಹಾ ನಿರ್ದೇಶನಾಲಯ(ಡಿಜಿ)ವೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಹರಾಜು ಮೂಲಕ ವಿಲೇವಾರಿಗೆ ಎನ್‌ಎಂಪಿಟಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಮಳೆಗಾಲಕ್ಕೆ ಮೊದಲು ತೆರವು ಮಾಡದಿದ್ದಲ್ಲಿ ನೌಕಾಯಾನಕ್ಕೆ ತೊಂದರೆಯಾಗುವ ಅಪಾಯವಿದೆ ಎನ್ನುತ್ತಾರೆ ಶಿಪ್ಪಿಂಗ್‌ ವಹಿವಾಟು ಪರಿಣಿತರು.

ಹಡಗುಗಳ ವಿಲೇವಾರಿ ಸಂಬಂಧ ಮೌಲ್ಯ ನಿಗದಿ ಪ್ರಕ್ರಿಯೆ ನಡೆಯುತ್ತಿದ್ದು, ಅನಂತರ ಸರಕಾರದ ನಿಯಮಾನುಸಾರ ಹರಾಜು ಹಾಕಲಾಗುವುದು. ಪರಿಸರಕ್ಕೆ ಹಾನಿಯಾಗದಂತೆ ಎರಡೂ ಹಡಗುಗಳಲ್ಲಿದ್ದ ತೈಲ ತೆಗೆಯಲಾಗಿದೆ. ಇಂಡಿಯನ್‌ ರಿಜಿಸ್ಟ್ರಾರ್‌ ಆಫ್‌ ಶಿಪ್ಪಿಂಗ್‌ ಎಂಬುದು ಕ್ಲಾಸಿಫಿಕೇಷನ್‌ ಸೊಸೈಟಿಯಾಗಿದ್ದು, ಅದಕ್ಕೆ ನಿಯಂತ್ರಣಾಧಿಕಾರವಿಲ್ಲ. ಹಡಗು ಮುಳುಗುವ ಬಗ್ಗೆ ನಮಗೆ ಮುನ್ಸೂಚನೆ ಬಂದಿರಲಿಲ್ಲ. ಮರ್ಕೆಟರ್‌ ಕಂಪೆನಿ ಮಾಲಕರು ಸರಿಯಾಗಿ ಸ್ಪಂದಿಸುತ್ತಿಲ್ಲ. ಹಡಗುಗಳ ವಿಮೆ ಮತ್ತು ಫಿಟ್‌ನೆಸ್‌ ಕ್ಲಾಸ್‌ ಬಗ್ಗೆ ಶಿಪ್ಪಿಂಗ್‌ ಡಿಜಿ ಕ್ರಮ ಕೈಗೊಳ್ಳಬೇಕು. ಹಡಗುಗಳ ಕ್ಲಾಸ್‌ ರದ್ದುಗೊಂಡಿದ್ದರೆ ಅವು ಯಾನ ನಡೆಸುವಂತಿಲ್ಲ ಎನ್ನುವುದು ನಿಜ. ಹಾಗೆಂದು ಅವುಗಳನ್ನು ಏಕಾಏಕಿ ಹೊರ ಹಾಕಲು ಸಾಧ್ಯವಿಲ್ಲ. ನಾನು ಈ ಬಂದರಿನಲ್ಲಿ ಕಳೆದ ಜುಲೈಯಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಡ್ರೆಜ್ಜರ್‌ಗಳ ವಿಮೆ, ಫಿಟ್‌ನೆಸ್‌ ಬಗ್ಗೆ ಗೊತ್ತಿರಲಿಲ್ಲ. ಎರಡೂ ಹಡಗುಗಳ ತೆರವಿಗೆ ಅಂತಿಮ ತೀರ್ಮಾನವನ್ನು ಶಿಪಿಂಗ್‌ ಮಹಾ ನಿರ್ದೇಶನಾಲಯವೇ ತೆಗೆದುಕೊಳ್ಳಬೇಕಿದೆ.
-ಎ.ವಿ. ರಮಣ, ಚೇರ್‌ಮನ್‌, ಎನ್‌ಎಂಪಿಟಿ

Advertisement

ಮಳೆಗಾಲ ಸಮೀಪಿಸುತ್ತಿರುವ ಕಾರಣ ಆದಷ್ಟು ಬೇಗ ಎರಡೂ ಡ್ರೆಜ್ಜರ್‌ ತೆರವುಗೊಳಿಸುವಂತೆ ಈಗಾಗಲೇ ಎನ್‌ಎಂಪಿಟಿಗೆ ಮನವಿ ಮಾಡಲಾಗಿದೆ. ಇನ್ನೆರಡು ದಿನದೊಳಗೆ ಮತ್ತೆ ಎನ್‌ಎಂಪಿಟಿ ಅಧಿಕಾರಿಗಳಿಗೆ ಪತ್ರ ಬರೆದು ತೆರವು ಕಾರ್ಯಾಚರಣೆ ಚುರುಕುಗೊಳಿಸುವಂತೆ ಮನವಿ ಮಾಡಲಾಗುವುದು.
-ಡಿ. ತಿಪ್ಪೇಸ್ವಾಮಿ, ಮೀನುಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕರು

ಮುಳುಗಿರುವ ಡ್ರೆಜ್ಜರ್‌ಗಳು ಮೀನುಗಾರಿಕೆಗೆ ಅಡ್ಡಿಯುಂಟು ಮಾಡುವುದು ನಿಜ. ಶೇ. 30ರಷ್ಟು ತೈಲ ಹಡಗಿನಲ್ಲೇ ಇರುವ ಕಾರಣ ಜಲಚರಗಳಿಗೂ ಹಾನಿಯಾಗುತ್ತದೆ. ಸಮುದ್ರಲ್ಲಿಯೇ ಹಡಗು ಒಡೆದು ತೆರವುಗೊಳಿಸಿದರೆ ಪರಿಸರಕ್ಕೆ ಮತ್ತಷ್ಟು ಹಾನಿಯಾಗುವ ಕಾರಣ ಅದಕ್ಕೆ ನಮ್ಮ ವಿರೋಧವಿದೆ. ಹಡಗುಗಳನ್ನು ಪರಿಸರಕ್ಕೆ ಮಾರಕವಾಗದ ರೀತಿ ತೆರವುಗೊಳಿಸದಿದ್ದರೆ ಹೋರಾಟ ಮಾಡಲಾಗುವುದು.
– ಶರತ್‌ ಗುಡ್ಡೆಕೊಪ್ಲ, ಅಧ್ಯಕ್ಷರು ನಾಡದೋಣಿ ಮೀನುಗಾರರ ಒಕ್ಕೂಟ

– ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next