ಲಕ್ನೋ: 2022ರ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸಲಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷ ಧೂಳೀಪಟವಾಗಲಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇಯಲ್ಲಿ ಹಮ್ಮಿಕೊಂಡಿದ್ದ ವಿಜಯ್ ರಥ ಯಾತ್ರೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಿಟ್ ಕಾಯಿನ್ ವಿಚಾರವಾಗಿ ಯಾರನ್ನೂ ರಕ್ಷಿಸುವ ಪ್ರಶ್ನೆಯಿಲ್ಲ: ಬಿಎಸ್ ಯಡಿಯೂರಪ್ಪ
ಘಾಜಿಯಾಬಾದ್ ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಯಾದವ್, ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿರುವುದನ್ನು ಗಮನಿಸಿದ್ದೇನೆ. ಇದರ ಪರಿಣಾಮ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯಲಿದೆ. ಉತ್ತರಪ್ರದೇಶ ಬದಲಾವಣೆ ಕಾಣಲಿದೆ ಎಂದು ಹೇಳಿದ್ದರು.
ರಾಜ್ಯದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ 341 ಕಿ.ಮೀ ಉದ್ದದ ಎಕ್ಸ್ ಪ್ರೆಸ್ ವೇಯನ್ನು ನಿರ್ಮಿಸುವ ಯೋಜನೆ ಆರಂಭಿಸಿತ್ತು. ಲಕ್ನೋ ಮತ್ತು ದೆಹಲಿ ನಡುವಿನ ಸಂಚಾರದ ಅವಧಿಯನ್ನು ಕಡಿಮೆ ಮಾಡುವ ಮಹತ್ವದ ಕನಸಿನ ಯೋಜನೆ ಸಮಾಜವಾದಿ ಪಕ್ಷದ್ದಾಗಿತ್ತು. ಎಕ್ಸ್ ಪ್ರೆಸ್ ವೇ ಅಭಿವೃದ್ಧಿಯ ಸಂಕೇತವಾಗಿತ್ತು ಎಂದು ಅಖಿಲೇಶ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಕುರಿತಂತೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದರೆ, ಬೈಕ್ ನಲ್ಲಿ ಓಡಾಡುವುದು ಕೂಡಾ ಜನಸಾಮಾನ್ಯರಿಗೆ ದುಬಾರಿಯಾಗುತ್ತಿದೆ ಎಂದು ಆರೋಪಿಸಿದರು.