ಮುಂಬಯಿ: ನಿಗದಿತ ಸಮಯಕ್ಕಿಂತ ಒಂದು ದಿನ ಮೊದಲೇ ಮುಂಗಾರು ಮಳೆ ಮುಂಬಯಿ ನಗರಿಯನ್ನು ಪ್ರವೇಶಿಸಿದ್ದು, ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಅಲ್ಲದೇ ಸ್ಥಳೀಯ ಬಸ್ ಮತ್ತು ರೈಲುಗಳ ಸಂಚಾರದ ಮೇಲೂ ಪರಿಣಾಮ ಬೀರಿರುವುದಾಗಿ ಬುಧವಾರ(ಜೂನ್ 09) ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:‘ಡಿ ಕಂಪೆನಿಗೆ’ 10ರ ಸಂಭ್ರಮ: ಮೈಸೂರು ಮೃಗಾಲಯದಿಂದ ಅನಕೊಂಡಾ ಹಾಗೂ ಆಮೆಯ ದತ್ತು ಸ್ವೀಕಾರ
ಇಂದು ಮುಂಬಯಿಗೆ ಮುಂಗಾರು ಮಳೆ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುಂಬಯಿ ಕಚೇರಿಯ ವರಿಷ್ಠ ಡಾ.ಜಯಂತ್ ಸರ್ಕಾರ್ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ನಿರೀಕ್ಷೆಗೂ ಮೀರಿ ಮಳೆಯಾಗಿದ್ದು, ಈ ಮೊದಲು ಜೂನ್ 3ರಂದು ಮುಂಗಾರು ಕೇರಳವನ್ನು ಪ್ರವೇಶಿಸಲಿದ್ದು, ಜೂನ್ 10ಕ್ಕೆ ಮುಂಬಯಿಗೆ ಮುಂಗಾರು ಮಳೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.
ಕಳೆದ 24ಗಂಟೆಯಲ್ಲಿ ಮುಂಬಯಿಯ ಕೊಲಾಬಾ ಪ್ರದೇಶದಲ್ಲಿ ದಾಖಲೆಯ 77 ಮಿಲಿ ಮೀಟರ್ ಮಳೆಯಾಗಿದೆ. ಇದೇ ಸಂದರ್ಭದಲ್ಲಿ ಸಾಂತಾಕ್ರೂಝ್ ಪ್ರದೇಶದಲ್ಲಿ 60 ಮಿಲಿ ಮೀಟರ್ ಮಳೆಯಾಗಿದೆ. ಮುಂಬಯಿ ಮಹಾನಗರ ಪಾಲಿಕೆ ಮಾಹಿತಿ ಪ್ರಕಾರ, ಮುಂಬೈ ನಗರದಲ್ಲಿ ದಾಖಲೆಯ 48.49 ಮಿ.ಮೀಟರ್ , ಪೂರ್ವ ಉಪನಗರದಲ್ಲಿ 66.99 ಮಿಲಿ ಮೀಟರ್ ಮತ್ತು ಪಶ್ಚಿಮ ಮುಂಬಯಿ ನಗರಿಯಲ್ಲಿ 48.99 ಮಿಲಿ ಮೀಟರ್ ಮಳೆಯಾಗಿರುವುದಾಗಿ ವರದಿ ತಿಳಿಸಿದೆ.
ಬೇಲಾಪುರದಲ್ಲಿ ಕೇವಲ ಆರು ಗಂಟೆಯಲ್ಲಿ ದಾಖಲೆಯ 152 ಮಿಲಿ ಮೀಟರ್ ಮಳೆ ಸುರಿದಿತ್ತು. ಚೆಂಬೂರ್ ನಲ್ಲಿ 125 ಮಿಲಿ ಮೀಟರ್, ಸೆಂಟ್ರಲ್ ಮುಂಬಯಿಯಲ್ಲಿ 112 ಮಿಲಿ ಮೀಟರ್ ಮಳೆಯಾಗಿರುವುದಾಗಿ ವರದಿ ವಿವರಿಸಿದೆ.