ವಿಜಯಪುರ: ನಗರದಲ್ಲಿ ಪರ್ಶಿಯಾದಲ್ಲಿ ಕಂಡುಬರುವ ಸುಧಾರಿತ ತಾಂತ್ರಿಕತೆಯ ಆದಿಲ್‌ಶಾಹಿ ಸುಲ್ತಾನರ ಕಾಲದ ಜಲಸುರಂಗ ಮಾರ್ಗ ದುರಸ್ತಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಸಂಶೋಧಕ ಹಾಗೂ ಸಿಕ್ಯಾಬ್ ಮಹಿಳಾ ಪದವಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ| ಮುಸ್ತಾಕ್ ಅಹ್ಮದ್ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಗರದಲ್ಲಿ ಆದಿಲ್‌ಶಾಹಿ ಸುಲ್ತಾನರ ಕಾಲದಲ್ಲಿ ರಾಜಧಾನಿ ವಿಜಯಪುರ ನಗರಕ್ಕೆ ಸುಸ್ಥಿರವಾದ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಿದ್ದರು. ಆದಿಲ್ ಶಾಹಿ ಸುಲ್ತಾನರ ಜಲತಾಂತ್ರಿಕತೆ ಜಗತ್ತಿನಲ್ಲಿಯೇ ವಿಶಿಷ್ಟವಾದ ತಂತ್ರಜ್ಞಾನ ಎಂಬ ಹಿರಿಮೆ ಹೊಂದಿದೆ.
ಇದರ ಒಂದು ಭಾಗವಾಗಿ ಸುರಂಗ ಮಾರ್ಗದ ಮೂಲಕ ರಾಜಧಾನಿ ನಗರದಲ್ಲಿ ಸುಮಾರು 10 ಲಕ್ಷ ಪ್ರಜೆಗಳಿಗೆ ನೀರಿನ ಕೊರತೆ ನೀಗಿಸುತ್ತಿದ್ದರು. ಸದರಿ ತಾಂತ್ರಿಕೆತ ಸುರಂಗ ಮಾರ್ಗ ತೊರವಿ ಕೆರೆಯಿಂದ ಕೊಳವೆಗಳ ಮೂಲಕ ಮಹಮ್ಮದ ಸರೋವರಗೆ ಸೇರಿ, ನಂತರ ಸುರಂಗ ಬಾವಿಗೆ ಸೇರುತ್ತಿತ್ತು. ಅಲ್ಲಿಂದ ಈ ಸುರಂಗ ಮಾರ್ಗ ಟ್ರೆಜರಿ ಕಾಲೋನಿ, ಸೈನಿಕ ಶಾಲೆ ಮೈದಾನ, ಸರಕಾರಿ ಆಸ್ಪತ್ರೆ ಆವರಣದಿಂದ ಸುಮಾರು 7 ಕಿ.ಮೀ. ಸಂಚರಿಸಿ, ಇಬ್ರಾಹಿಂ ರೋಜಾ ಸ್ಮಾರಕಕ್ಕೆ ಸೇರುತ್ತದೆ. ಸದರಿ ಸುರಂಗದಿಂದ ಸರಬರಾಜು ಮಾಡಲಾಗುವ ನೀರನ್ನು ಸ್ವತ್ಛಗೊಳಿಸಲು ಮತ್ತು ಉತ್ತಮ ಗಾಳಿಯಾಡಲು ಸುರಂಗ ಮಾರ್ಗದಲ್ಲಿ 35
ಕಿಂಡಿ ಬಿಡಲಾಗಿದ್ದು, ಈ ತಾಂತ್ರಿಕತೆ ಪರ್ಶಿಯನ್ ತಾಂತ್ರಿಕತೆ ಮೀರಿದೆ.
ಸದ್ಯ ದುಸ್ಥಿತಿಯಲ್ಲಿ ಸಿಲುಕಿದ್ದ ಈ ಅದ್ಬುತ ಸುರಂಗ ಪುನಶ್ಚೇತನಕ್ಕೆ ಡಾ| ಎಂ.ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 8 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿದ್ದರು.
ಅಲ್ಲದೇ ಸದರಿ ಯೋಜನೆ ಅನುಷ್ಠಾನಕ್ಕೆ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಸುಮಾರು 30 ಆಡಿ ಪುನಶ್ಚೇತನದ ಬಳಿಕ ಕಳೆದ ಮಳೆಗಾಲದಲ್ಲಿ ಸದರಿ ಪುನರುಜ್ಜೀವನ ಕಾರ್ಯ ಸ್ಥಗಿತಗೊಳಿಸಲಾಗಿದೆ. ಇದರಿಂದ ಟ್ರೆಜರಿ ಕಾಲೋನಿ ನಿವಾಸಿಗಳ ಚರಂಡಿ ನೀರನ್ನು ಈ ಸುರಂಗ ಮಾರ್ಗಕ್ಕೆ ಸಂಪರ್ಕ ಕಲ್ಪಿಸಿದ್ದು, ಸುತ್ತಲ ಪರಿಸರ ದುರ್ವಾಸನೆ ಹರಡಲು ಕಾರಣವಾಗಿದೆ. ಅಲ್ಲದೇ ಐತಿಹಾಸಿಕ ಪರಂಪರೆಯ ಸ್ಮಾರಕಕ್ಕೆ ಅಪಮಾನ ಎಸಗುವ ಜೊತೆಗೆ, ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ನಿತ್ಯ ಸಾವಿರಾರು ಜನರು ನಗರಕ್ಕೆ ಬರುತ್ತಿದ್ದು, ಈ ಪ್ರದೇಶಕ್ಕೆ ಭೇಟಿ ನೀಡಿ ಮೂಗು ಮುಚ್ಚಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಜಗತ್ತಿನಲ್ಲೇ ಆತ್ಯಂತ ಭವ್ಯ ಪರಂಪರೆ ಸಾರುವ ಹಾಗೂ ಅಪರೂಪದ ತಾಂತ್ರಿಕ ಶೈಲಿ ಹೊಂದಿರುವ ಈ ಸುರಂಗ ಮಾರ್ಗವನ್ನು ಮಳೆಗಾಲ ಆರಂಭಕ್ಕೆ ಮುನ್ನವೇ ಪೂರ್ಣಗೊಳಿಸಲು ಜಿಲ್ಲೆಯ ಸಚಿವರು, ಸರ್ಕಾರ, ಜಿಲ್ಲಾಡಳಿತ, ಪುರಾತತ್ವ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಕಾಮಗಾರಿ ಆರಂಭಿಸಲು ಕ್ರಮಕ್ಕೆ ಮುಂದಾಗಬೇಕು. ಇದರಿಂದ ಭವಿಷ್ಯದ ಪೀಳಿಗೆಗೆ ನಮ್ಮ ಪುರಾತನರ ದೂರದೃಷ್ಟಿಯ ಸುಧಾರಿತ ತಾಂತ್ರಿಕತೆ ಮನವರಿಕೆ ಮಾಡಿಕೊಡಲು ನೆರವಾಲಿದೆ ಎಂದು ಆಗ್ರಹಿಸಿದ್ದಾರೆ.