Advertisement

ನೀರಿನ ಸದ್ಬಳಕೆ, ದೂರದೃಷ್ಟಿಯ ಯೋಜನೆ ಅನಿವಾರ್ಯ

11:06 PM Mar 21, 2021 | Team Udayavani |

ಸಗೆ ಋತು ಕಾಲಿಟ್ಟರೆ ಸಾಕು ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಕೇಳಿ ಬರತೊಡಗುತ್ತದೆ. ವರ್ಷಗಳು ಉರುಳಿದಂತೆ ನೀರಿನ ಅಭಾವ ತೀವ್ರಗೊಳ್ಳುತ್ತಲೇ ಸಾಗಿದ್ದು ಅಂತರ್ಜಲ ಮಟ್ಟವೂ ಪಾತಾಳ ಕಂಡಿದೆ. ಈ ಪರಿಸ್ಥಿತಿ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗಿರದೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿರುವುದು ಆತಂಕಕಾರಿ ಬೆಳವಣಿಗೆಯೇ ಸರಿ.

Advertisement

ಪುತ್ತೂರು ನಗರಕ್ಕೆ ಕುಡಿಯುವ ನೀರಿಗೆ ಮೂಲಾಧಾರ ಕುಮಾರಧಾರಾ ನದಿ. ಉಪ್ಪಿನಂಗಡಿಯಲ್ಲಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟಿನಿಂದ ಪುತ್ತೂರು ನಗರಕ್ಕೆ ನೀರು ಪೂರೈಕೆಯಾಗುತ್ತಿದೆ. ನಗರದ ಮನೆ ಮನೆಗೆ ನಲ್ಲಿ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂಗಾರು ವಿಳಂಬವಾದಾಗ, ಬಿಸಿಲಿನ ಝಳ ಹೆಚ್ಚಿದಾಗಲೆಲ್ಲ ನದಿಯಲ್ಲಿ ನೀರಿನ ಅಭಾವ ಕಾಣಿಸಿಕೊಳ್ಳುತ್ತದೆ. ಹೀಗಾದಾಗ ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣದಲ್ಲೂ ಕುಸಿತವಾಗಿ ನಗರಕ್ಕೆ ಪೂರೈಕೆಯಾಗುವ ನೀರಿನ ಪ್ರಮಾಣದಲ್ಲಿ ವ್ಯತ್ಯಯವಾಗುತ್ತದೆ. ನಗರ ಅಭಿವೃದ್ಧಿ ಕಾಣುತ್ತಿರುವಂತೆಯೇ ನಗರ ಪ್ರದೇಶದಲ್ಲಿನ ಖಾಸಗಿ ಬಾವಿಗಳು ಮತ್ತು ದಶಕಗಳ ಹಿಂದೆ ನಗರದ ಹಲವೆಡೆ ಕೊರೆಯಲಾಗಿದ್ದ ಕೊಳವೆ ಬಾವಿಗಳ ನೀರಿನ ಶುದ್ಧತೆಯ ಬಗೆಗೆ ಅನುಮಾನಗಳಿರುವುದರಿಂದ ನಗರದ ಜನರು ನಗರಸಭೆ ಪೂರೈಸುವ ನೀರನ್ನೇ ಅವಲಂಬಿಸಿದ್ದಾರೆ. ಆದರೆ ನೀರಿನ ಪರ್ಯಾಯ ವ್ಯವಸ್ಥೆಯ ಬಗೆಗೆ ನಗರಾಡಳಿತ ಈವರೆಗೂ ಚಿಂತನೆ ನಡೆಸಿಲ್ಲ. ಪ್ರತೀ ವರ್ಷ ನಗರದ ಜನಸಂಖ್ಯೆ ಮತ್ತು ನಲ್ಲಿಗಳ ಸಂಪರ್ಕ ಹೆಚ್ಚುತ್ತಿದೆಯೇ ಹೊರತು ನೀರಿನ ಸಂಗ್ರಹ ವ್ಯವಸ್ಥೆಯ ಬಲವರ್ಧನೆಯ ಬಗೆಗೆ ಯಾವೊಂದೂ ಪ್ರಯತ್ನ ನಡೆದಿಲ್ಲ.

ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪುತ್ತೂರು ನಗರದಲ್ಲಿ ಅಂತರ್ಜಲ ಸುರಕ್ಷಿತ ಮಟ್ಟದಲ್ಲಿ ಇಲ್ಲ ಎನ್ನುವುದನ್ನು ಅಂಕಿಅಂಶಗಳು ದೃಢೀಕರಿಸಿವೆ. 2019ರ ಡಿಸೆಂಬರ್‌ನಲ್ಲಿ ಪುತ್ತೂರು ತಾಲೂಕಿನಲ್ಲಿ 9.29 ಮೀ.ಗಳಷ್ಟಿದ್ದ ಅಂತರ್ಜಲ ಮಟ್ಟ 2020 ರಲ್ಲಿ 10.33 ಮೀ. ಗಳಿಗೆ ಇಳಿದು, 1.04 ಮೀ.ಗಳಷ್ಟು  ಕುಸಿತ ಕಂಡಿದೆ. 2018ರಲ್ಲಿ ರಾಜ್ಯ ಅಂತರ್ಜಲ ನಿರ್ದೇಶನಾಲಯ ರಾಜ್ಯದೆಲ್ಲೆಡೆ ನಡೆಸಿದ ಸರ್ವೇ ಆಧಾರದಲ್ಲಿ ಅಂತರ್ಜಲ ಬಳಕೆಗೆ ಅಸುರಕ್ಷಿತ ಪ್ರದೇಶಗಳ ಪಟ್ಟಿಯಲ್ಲಿ ಪುತ್ತೂರು ತಾಲೂಕನ್ನು ಗುರುತಿಸಿದ್ದು ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಿದೆ.

ಇವೆಲ್ಲ ಸದ್ಯದ ವಾಸ್ತವ ಸ್ಥಿತಿ. ಈ ಹಿನ್ನೆಲೆಯಲ್ಲಿ ನಗರದ ಜನತೆ ನೀರಿನ ಮಿತಬಳಕೆ ಮತ್ತು  ನೈಸರ್ಗಿಕ ನೀರಿನ ಮೂಲಗಳ ಉಳಿವಿಗೆ ಪ್ರಥಮ ಆದ್ಯತೆ ನೀಡುವುದು ಅನಿವಾರ್ಯವಾಗಿದೆ.   ನಗರದಲ್ಲಿರುವ ನೀರಿನ ಮೂಲಗಳಾದ ಕೆರೆ, ಬಾವಿಗಳ ಬಗೆಗೆ ಹೊಂದಿರುವ ನಿರ್ಲಕ್ಷ್ಯ ಮನೋಭಾವದಿಂದ

ನಗರಾಡಳಿತ ಮತ್ತು ಸಾರ್ವಜನಿಕರು ಮೊದಲು ಹೊರಬರಬೇಕು. ಮಳೆಕೊಯ್ಲು ಮೊದಲಾದ ವ್ಯವಸ್ಥೆ ಜಾರಿಗೊಳಿಸಬೇಕು. ನೀರಿಗಾಗಿ ಸಂಪೂರ್ಣವಾಗಿ ನಲ್ಲಿ ನೀರನ್ನೇ ಆಶ್ರಯಿಸುವ ಬದಲು ಇಂಥ ನೀರಿನ

Advertisement

ಮೂಲಗಳ ಸದ್ಬಳಕೆಗೆ ಸಾರ್ವಜನಿಕರು ಮುಂದಾಗಬೇಕು. ಜತೆಯಲ್ಲಿ ನಗರಸಭೆ ಕೂಡ ಒಂದಿಷ್ಟು ದೂರದೃಷ್ಟಿ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿದಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ತೀವ್ರ ಅಭಾವ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯ.

 

 -ಸಂ.

Advertisement

Udayavani is now on Telegram. Click here to join our channel and stay updated with the latest news.

Next