ಏಪ್ರಿಲ್ ಕೊನೆವರೆಗೂ ನೀರು ಹರಿಸಿಆಲಮಟ್ಟಿ: ಮುಳವಾಡ ಏತನೀರಾವರಿ ಯೋಜನೆಯ 3ನೇ ಹಂತದ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಜನಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಹಿಂಗಾರು ಹಂಗಾಮಿನ ಬೆಳೆಗಳಿಗೆ ಇನ್ನುಳಿದ ಕಾಲುವೆಗಳಿಗೆ ಏಪ್ರಿಲ್ ಕೊನೆಯ ವಾರದವರೆಗೂ ನೀರು ಹರಿಸಬೇಕು ಎಂದು ಅಖಂಡ ಕರ್ನಾಟಕ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಇಲ್ಲಿನ ಶ್ರೀರಾಮಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ಕೆಬಿಜೆನ್ನೆಲ್ ಮುಖ್ಯ ಅಭಿಯಂತರರ ಕಚೇರಿಗೆ ತೆರಳಿ ಕಚೇರಿಯ ಮುಂದೆ ಕೆಲಕಾಲ ಧರಣಿ ನಡೆಸಿ ಅವರು ಮಾತನಾಡಿದರು.
ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತಗೆದುಕೊಂಡ ನಿರ್ಣಯದಂತೆ ಮಾ.17ರಂದು ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುತ್ತದೆ. ಇದರಿಂದ ಮುಂಗಾರು ಹಂಗಾಮಿನಲ್ಲಿ ವರುಣನ ಅವಾಂತರದಿಂದ ಎಲ್ಲ ಬೆಳೆಗಳು ಹಾನಿಯಾಗುವಂತಾಗಿದೆ. ಹಿಂಗಾರು ಬೆಳೆಗಳನ್ನಾದರೂ ಪಡೆಯಬೇಕು ಎಂದು ರೈತರು ಇತ್ತೀಚೆಗೆ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ಬೆಳೆಗಳ ಫಸಲು ಕೈಗೂಡಬೇಕಾದರೆ ಏಪ್ರಿಲ್ ಕೊನೆಯ ವಾರದವರೆಗೂ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದರು.
ಐಸಿಸಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಮುಳವಾಡ ಏತ ನೀರಾವರಿ ಯೋಜನೆ ಹಂತ-3ರಲ್ಲಿ ಬರುವ ಕೆಲ ಕಾಲುವೆಗಳ ಮೂಲಕ ಕುಡಿಯುವ ನೀರು ಹಾಗೂ ಕೆರೆ ತುಂಬಲು ನೀರನ್ನು ಹರಿಸಲಾಗಿದ್ದು, ಇನ್ನುಳಿದ ಮು.ಏ.ನೀ. ಯೋಜನೆಯ ಹಂತ-3ರಲ್ಲಿ ಬರುವ ಕೆಲ ಕಾಲುವೆಗಳಿಗೆ ನೀರು ಹರಿಸದೇ ಇರುವದರಿಂದ ಈ ಹಿಂದೆ ಭರ್ತಿಮಾಡಿದ ಕೆರೆಗಳು ಒಣಗಲಾರಂಭಿಸಿವೆ. ಇನ್ನು ಮುಂದೆ ಬೇಸಿಗೆ ಪ್ರಾರಂಭವಾಗುತ್ತಿದ್ದು, ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅಗತ್ಯವಿದೆ. ಕೂಡಲೇ ಕಾಲುವೆಗಳಿಗೆ ನೀರು ಹರಿಸಿ ನೀರು ಖಾಲಿಯಾದ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆದ ಐಸಿಸಿ ಸಭೆ ಸಂದರ್ಭದಲ್ಲಿ ಆಲಮಟ್ಟಿ ಆಣೆಕಟ್ಟಿನ ಒಳಹರಿವು ಇಲ್ಲದ ಕಾರಣ ಮಾರ್ಚ್ 17ರವರೆಗೆ ಮಾತ್ರ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ನಂತರ ಆಲಮಟ್ಟಿ ಆಣೆಕಟ್ಟಿನಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಏಪ್ರಿಲ್ ಕೊನೆ ವಾರದವರೆಗೂ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದರು.
ಜಲಸಂಪನ್ಮೂಲ ಸಚಿವರಿಗೆ ತಮ್ಮ ಬೇಡಿಕೆ ಮನವಿ ತಿಳಿಸಲಾಗುವುದು. ಈ ಹಿಂದೆ ನಡೆದ ಐಸಿಸಿ ಸಭೆಯ ವೇಳೆ ಅವಳಿ ಜಲಾಶಯದಲ್ಲಿ ನೀರಿನ ಲಭ್ಯತೆ ಕಡಿಮೆ ಇರುವುದರಿಂದ ಮಾ.17ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ನಂತರ ಜಲಾಶಯಕ್ಕೆ ಒಳ ಹರಿವು ಬಂದಿದ್ದರಿಂದ ಕಳೆದ ವರ್ಷಕ್ಕಿಂತಲೂ ಈ ಬಾರಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಮತ್ತೂಮ್ಮೆ ನಡೆಯುವ ಐಸಿಸಿ ಸಭೆಯಲ್ಲಿ ತೀರ್ಮಾನಿಸಿದಂತೆ ಕ್ರಮಕೈಗೊಳ್ಳಲಾಗುವುದು ಎಂದು ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಎಚ್. ಸುರೇಶ, ಭರವಸೆ ನೀಡಿದರು.
ಈರಣ್ಣ ದೇವರಗುಡಿ, ಹೊನಕೇರಪ್ಪ ತೆಲಗಿ, ಚಂದ್ರಶೇಖರ ಕಚನೂರ, ಮಲ್ಲಣ್ಣ ಬ್ಯಾಳಿ, ಲಾಲಸಾಬ ಹಳ್ಳೂರ, ರಾಮಣ್ಣ ಮನ್ಯಾಳ, ಸಾಯಬಣ್ಣ ಹಡಪದ, ಅಮರಯ್ಯ ಚಿಕ್ಕಮಠ, ಸಿದ್ದಲಿಂಗ ಬಿರಾದಾರ, ಬೆಳ್ಳೆಪ್ಪ ಜಕ್ಕೆನಾಳ, ಸಾಯಬಣ್ಣ ಪೂಜಾರಿ, ಮುದಕಪ್ಪ ದೊಡಮನಿ ಮೊದಲಾದವರಿದ್ದರು.