Advertisement

ನೀರಿನ ಸಮಸ್ಯೆಯಾದ್ರೆ ಕಟ್ಟಿ ಹಾಕುವೆ: ಶಾಸಕ ಅಭಯ ಪಾಟೀಲ

06:12 PM Feb 15, 2022 | Team Udayavani |

ಬೆಳಗಾವಿ: ನಿಮ್ಮಿಂದ ಜನರಿಗೆ ಅನುಕೂಲವಾಗಬೇಕು. ಅದೇ ಉದ್ದೇಶದಿಂದ ನಿಮಗೆ ನಗರದ ಕುಡಿಯುವ ನೀರು ಪೂರೈಕೆ ಜವಾಬ್ದಾರಿ ಕೊಟ್ಟಿದ್ದೇವೆ. ಆದರೀಗ ಅನುಕೂಲದ ಬದಲು ಅನಾನುಕೂಲವೇ ಹೆಚ್ಚಾಗಿದೆ. ನಿಮ್ಮ ಕಾರ್ಯವೈಖರಿ ಜನರ ಕಂಗಣ್ಣಿಗೆ ಗುರಿಯಾಗಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಎಲ್‌ ಆ್ಯಂಡ್‌ ಟಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

Advertisement

ನಗರದಲ್ಲಿ ಕುಡಿವ ನೀರು ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಹಾನಗರ ಪಾಲಿಕೆಯಲ್ಲಿ ಜಲಮಂಡಳಿ, ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಮತ್ತು ಎಲ್‌ ಆ್ಯಂಡ್‌ ಟಿ ಕಂಪನಿ ಅಧಿಕಾರಿಗಳ ಸಭೆ ನಡೆಸಿದ ಅವರು, ನಗರದಲ್ಲಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಆದರೆ ನಿಮ್ಮನ್ನು ಕಚೇರಿಯಲ್ಲಿ ಕಟ್ಟಿ ಹಾಕಿ, ಕಪ್ಪುಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ಎಲ್‌ ಆಂಡ್‌ ಟಿ ಕಂಪನಿ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಕುಡಿವ ನೀರು ಪೂರೈಕೆಯಲ್ಲಿ ಉಂಟಾಗುತ್ತಿರುವ ಅವ್ಯವಸ್ಥೆಯಿಂದ ಜನರು ರೋಸಿ ಹೋಗಿದ್ದಾರೆ. ಅವರ ಯಾವುದೇ ದೂರುಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶಗೊಂಡಿದ್ದಾರೆ. ಹೀಗಾಗಿ ಎಲ್‌ ಆ್ಯಂಡ್‌ ಟಿ ಕಂಪನಿ ಅಧಿಕಾರಿಗಳು ಜಾಗೃತಿಯಿಂದ ಇರಬೇಕು ಎಂದು ಎಚ್ಚರಿಸಿದರು.

ಬೆಳಗಾವಿ ದಕ್ಷಿಣ ಕ್ಷೇತ್ರದ ಅನೇಕ ಕಡೆ ಸಂಚಾರ ಮಾಡಿ ಜನರ ಅಹವಾಲು ಕೇಳಿದಾಗ ಎಲ್‌ ಆಂಡ್‌ ಟಿ ಕಂಪನಿ ವಿರುದ್ಧ ಸಾಕಷ್ಟು ತಕರಾರು ಕೊಟ್ಟಿದ್ದಾರೆ. ಪೈಪ್‌ಗ್ಳಲ್ಲಿ ಸೋರಿಕೆ ಇದ್ದರೂ ಅದನ್ನು ದುರಸ್ತಿ ಮಾಡುತ್ತಿಲ್ಲ. ನಗರ ಸೇವಕರು, ಸಾರ್ವಜನಿಕರು ಫೋನ್‌ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಈ ರೀತಿಯ ಹತ್ತಾರು ದೂರುಗಳು ಕೇಳಿಬಂದಿವೆ. ಮೇಲಾಗಿ ಎಲ್‌ ಆಂಡ್‌ ಟಿ ಕಂಪನಿ ಹಿರಿಯ ಅಧಿಕಾರಿಗಳೂ ಬೆಳಗಾವಿಗೆ ಬರುತ್ತಿಲ್ಲ.

ಸಮಸ್ಯೆ ಪರಿಶೀಲನೆ ನಡೆಸುತ್ತಿಲ್ಲ. ಇದೇ ರೀತಿ ನೀವು ಬೇಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಮುಂದುವರಿಸಿದರೆ ಹಿರಿಯ ಅಧಿಕಾರಿಗಳು ಬರುವವರೆಗೆ ಕಿರಿಯ ಅಧಿಕಾರಿಗಳನ್ನು ಕೊಠಡಿಗಳಲ್ಲಿ ಕಟ್ಟಿ ಹಾಕಬೇಕಾಗುತ್ತದೆ ಎಂದು ಶಾಸಕ ಅಭಯ ಪಾಟೀಲ ಎಲ್‌ ಆ್ಯಂಡ್‌ ಟಿ ಕಂಪನಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ಕುಡಿವ ನೀರು ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರು ಒಂದು ವರದಿ ಸಿದ್ಧಪಡಿಸಿ ಏನೇನು ಹಾನಿಯಾಗಿದೆ? ಎಂಬುದನ್ನು ಪರಿಶೀಲಿಸಿ ಅದನ್ನು ಎಲ್‌ ಆಂಡ್‌ ಟಿ ಕಂಪನಿಯಿಂದ ತುಂಬಿಸಿಕೊಳ್ಳುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ| ರುದ್ರೇಶ್‌ ಘಾಳಿ, ಸ್ಮಾರ್ಟ್‌ ಸಿಟಿ ಎಂಡಿ ಪ್ರವೀಣ ಬಾಗೇವಾಡಿ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಸೇರಿದಂತೆ ಇತರರಿದ್ದರು.

ಬೇಜವಾಬ್ದಾರಿಗೆ ಆಕ್ರೋಶ
ಜಲಾಶಯದಲ್ಲಿ ಸಾಕಷ್ಟು ನೀರಿದೆ. ಆದರೆ ಜನರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಇದು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾದ ಸಮಸ್ಯೆ ಅಲ್ಲ. ಬೆಳಗಾವಿ ನಗರದಲ್ಲಿ ನೀರು ಸರಬರಾಜಿನ ಜವಾಬ್ದಾರಿ ಎಲ್‌ ಆಂಡ್‌ ಟಿ ಕಂಪನಿಗೆ ಯಾವಾಗ ವಹಿಸಿಕೊಡಲಾಯಿತೋ ಅಂದಿನಿಂದ ಇವತ್ತಿನವರೆಗೆ ದೊಡ್ಡಮಟ್ಟದಲ್ಲಿ ನೀರಿನ ತೊಂದರೆ ಆಗುತ್ತಿದೆ. ಪೈಪ್‌ಗ್ಳು ಒಡೆದು ನೀರು ಪೋಲಾಗುತ್ತಿರುವ ಬಗ್ಗೆ ದೂರು ನೀಡಿದರೂ ವಾರಗಟ್ಟಲೇ ದುರಸ್ತಿ ಮಾಡದೇ ಬೇಜವಾಬ್ದಾರಿತನ
ಪ್ರದರ್ಶಿಸುತ್ತಿದ್ದಾರೆ ಎಂದು ಶಾಸಕ ಅಭಯ ಪಾಟೀಲ ಎಲ್‌ ಆಂಡ್‌ ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next