Advertisement

ಕೊನೇ ಭಾಗದ ರೈತರಿಗೆ ನೀರು ಕೊಡಿ

07:22 AM Feb 24, 2019 | Team Udayavani |

ಮಲೇಬೆನ್ನೂರು: ರೈತರು ಪ್ರತಿ ಬೆಳೆಗೂ ಪ್ರತಿಭಟನೆ ಮಾಡಿ ನೀರು ಪಡೆಯುವುದು ದುರದೃಷಕರವಾಗಿದ್ದು, ಕೊನೆಯ ಭಾಗದ ಜಮೀನುಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸದಸ್ಯ ತೇಜಸ್ವಿ ಪಟೇಲ್‌ ಒತ್ತಾಯಿಸಿದರು.

Advertisement

ಪಟ್ಟಣದ ನೀರಾವರಿ ನಿಗಮದ ಕಚೇರಿ ಎದುರು ಕೊನೆಭಾಗದ ರೈತರು ತಮ್ಮ ಜಮೀನುಗಳಿಗೆ ನೀರು ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊನೆಯ ಭಾಗದ ಜಮೀನುಗಳಿಗೆ ನೀರು ಹರಿಸಬೇಕು. ಇದು ಸಾಧ್ಯವಾಗದಿದ್ದರೆ ಅಕ್ರಮ ಪಂಪ್‌ಸೆಟ್‌ದಾರರನ್ನೇ ಅಚ್ಚುಕಟ್ಟುದಾರರೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ನೀರು ಹರಿಯಲಿಲ್ಲ ಎಂದರೆ ಅದೂ ಸಹ ಬರ ಪ್ರದೇಶವೇ ಆಗಿರುತ್ತದೆ. ಆದ್ದರಿಂದ ಅಧಿಕಾರಿಗಳು ಯಾವ ಪ್ರದೇಶಗಳಿಗೆ ನೀರು ಹರಿಸಲು ಸಾಧ್ಯವಿಲ್ಲವೋ ಆ ಜಮೀನು ಮಾಲೀಕರಿಗೆ ವಿಮೆ ಕೊಡಬೇಕು ಎಂದರು.

ಅಕ್ರಮ ಮರುಳು ಇದೆಯೆಂದು ಗೊತ್ತಾದ ತಕ್ಷಣವೇ ಎಲ್ಲ ಅಧಿಕಾರಿಗಳೂ ಜಾಗೃತರಾಗುತ್ತಾರೆ. ಅದೇ ರೀತಿ ಅಕ್ರಮ ಪಂಪ್‌ಸೆಟ್‌ಗಳ ಬಗ್ಗೆ ಅಧಿಕಾರಿಗಳು ಯಾಕೆ ಜಾಗೃತಿ ವಹಿಸುವುದಿಲ್ಲ. ರೈತರು ಬೇರೆ ಬೇರೆ ಕಡೆ ಪ್ರತ್ಯೇಕವಾಗಿ ಹೋರಾಟ ಮಾಡುವುದು ಬೇಡ. ಅಕ್ರಮ ಪಂಪ್‌ಸೆಟ್‌ದಾರರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮತ್ತು ಜಿಲ್ಲಾಡಳಿತದ ಗಮನ ಸೆಳೆಯಬೇಕಿದೆ. ಆದ್ದರಿಂದ ರೈತರು ಒಂದೆಡೆ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಪ್ರತಿ ವರ್ಷವೂ ಪಂಪ್‌ಸೆಟ್‌ ಕಾರ್ಯಾಚರಣೆ ನಡೆಯುತ್ತಿದರೂ ಅದೇ ವೇಗದಲ್ಲಿ ಅಕ್ರಮ ಪಂಪ್‌ಸೆಟ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಾರ್ಯಾಚರಣೆಯಿಂದ ಪಂಪ್‌ಸೆಟ್‌ ತೆಗೆದು ಹಾಕುತ್ತಾ ಮುಂದು ಹೋದಂತೆಲ್ಲ ಹಿಂದಿನಿಂದ ಪುನಃ ಅಳವಡಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯಾಚರಣೆಯ ಬಗ್ಗೆ ಯಾರಿಗೂ ಭಯವೇ ಇಲ್ಲವಾಗಿದೆ ಎಂದರು. ಕಾಲುವೆಗಳಲ್ಲಿನ ಹೂಳು, ಗಿಡಗಂಟಿ, ಅಕ್ರಮ ಪಂಪ್‌ಸೆಟ್‌ ತೆಗೆಸುವುದು ಎಲ್ಲ ಕೆಲಸಗಳನ್ನೂ ನಾಟಿ ಆರಂಭಿಸಿದ ಮೇಲೆ ಏಕೆ ಮಾಡಬೇಕು. ಮೊದಲೇ ಆರಂಭಿಸಬಹುದಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಪ್ರತಿಭಾರಿಯೂ ಹೋರಾಟ ಮಾಡಿ ನೀರನ್ನು ಪಡೆಯುವ ವ್ಯವಸ್ಥೆಯನ್ನು ನಾವು ಒಪ್ಪಬಾರದು. ಅದರ ಬದಲಿಗಾಗಿ ನೀರು ತರಲಿಕ್ಕೆ ಏನು ಮಾಡಬೇಕು ಅನ್ನುವ ಕುರಿತು ಯೋಚಿಸಬೇಕು. ರೈತರು ಲಾಭದಾಯಕ ಪರ್ಯಾಯ ಬೆಳೆಯ ಬಗ್ಗೆಯೂ ಚಿಂತಿಸಬೇಕು ಎಂದರು.

Advertisement

ನಾವು ಕಷ್ಟಪಟ್ಟು ದುಡಿದು ರಸಗೊಬ್ಬರ ಮತ್ತು ಬೇಸಾಯ ಪರಿಕರ ಅಂಗಡಿಗಳ ಮಾಲೀಕರನ್ನು ಉದ್ಧಾರ ಮಾಡುತ್ತಿದ್ದೇವೆ. ಅದರ ಬದಲಿಗೆ ನಮಗೆ ಲಾಭ ತರುವಂತಹ ಬೆಳೆಯ ಬಗ್ಗೆ ಯೋಚನೆ ಮಾಡಬೇಕು ಎಂದರು.

ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಚ್‌. ಓಂಕಾರಪ್ಪ ಮಾತನಾಡಿ, ಜನಪ್ರತಿನಿಧಿಗಳು ಚುನಾವಣೆಗೂ ಮುನ್ನಾ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ರೆಸಾರ್ಟ್‌ ಮಕ್ಕಳಾಗಿಬಿಡುತ್ತಾರೆ ಎಂದು ಹಾಸ್ಯದ ಮೂಲಕ ಶಾಸಕರಿಗೆ ರೈತರನ್ನು ಕಡೆಗಣಿಸದಂತೆ ಪರೋಕ್ಷವಾಗಿ ಎಚ್ಚರಿಸಿದರು. 

ಭಾನುವಾರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸೋಮವಾರ ದಿನದಿಂದ ಮುಷ್ಕರವು ಉಗ್ರ ಹೋರಾಟವಾಗಿ ರೂಪುಗೊಳ್ಳುವುದು ಎಂದು ತಿಳಿಸಿದರು.

ಜಿಲ್ಲಾ ಕಾರ್ಯದರ್ಶಿ ಪ್ರಭುಗೌಡ, ಎಂ.ಎಸ್‌. ಕಾಳಪ್ಪ, ಧರ್ಮಗೌಡ, ದೊಗ್ಗಳ್ಳಿ ಮಹೇಶ್ವರಪ್ಪ, ಕೆ.ಜಿ. ವೀರಭದ್ರಪ್ಪ, ಸಿದ್ದನಗೌಡ, ಎಂ. ಬಸಪ್ಪ, ನಾಗರಾಜ, ರಾಜಶೇಖರ, ಬಿ. ತಿಪ್ಪೇಶ್‌, ಕೆ.ಎನ್‌. ಹಳ್ಳಿ, ಭಾನುವಳ್ಳಿ, ವಾಸನ, ಕೊಕ್ಕನೂರು ಮುಂತಾದ ಕೊನೆಭಾಗದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next