Advertisement

ವರ್ಷಾಂತ್ಯಕ್ಕೆ 25 ಕೆರೆಗಳಿಗೆ ನೀರು

11:38 AM Jun 25, 2017 | Team Udayavani |

ಭೇರ್ಯ: ಸತತ ಎಂಟು ವರ್ಷಗಳ ಪ್ರಯತ್ನದಿಂದಾಗಿ ಮುಕ್ಕನಹಳ್ಳಿ ಕೆರೆಯಿಂದ 25 ಕೆರೆಗಳಿಗೆ ಏತನೀರಾವರಿ ಯೋಜನೆಯಡಿ ನೀರು ತುಂಬಿಸುವ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ ಎಂದು ಶಾಸಕ ಸಾ.ರಾ.ಮಹೇಶ್‌ ತಿಳಿಸಿದರು. ಇಲ್ಲಿನ ಸಮೀಪದ ಸಂಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮೇಲೂರು, ಕುಪ್ಪಳ್ಳಿ, ಮುದುಗುಪ್ಪೆ, ಸಂಕನಹಳ್ಳಿ, ಬಾಚಹಳ್ಳಿ, ಕೆಂಚನಹಳ್ಳಿ, ಕೊಡಿಯಾಲ, ನರಚನಹಳ್ಳಿ, ಹಳೇಮಿರ್ಲೆ, ವಡ್ಡರಕೊಪ್ಪಲು, ಹನುಮನಹಳ್ಳಿ, ಬಟಿಗನಹಳ್ಳಿ, ಗೇರದಡ, ಬಸವನಪುರ ಸೇರಿದಂತೆ ಭೇರ್ಯ ಗ್ರಾಮದ ವರೆಗೂ ಬರುವ ಈ ವ್ಯಾಪ್ತಿಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲು ಮಂಜೂರಾತಿ ದೊರತ್ತಿದ್ದು, ಇದಕ್ಕೆ ಟೆಂಡರ್‌ ಕರೆಯಲಾಗಿದೆ. ಈ ವರ್ಷದ ಡಿಸೆಂಬರ್‌ ಒಳಗೆ ಎಲ್ಲಾ ಕೆರೆಕಟ್ಟೆಗಳಿಗೆ ನೀರು ತುಂಬಿಸುತ್ತೇನೆ ಎಂದು ಭರವಸೆ ನೀಡಿದರು.

4 ಸಾವಿರ ಹೆಕ್ಟೇರ್‌ಗೆ ನೀರಾವರಿ: ಮುಕ್ಕನಹಳ್ಳಿ ಕೆರೆಯ ಏತನೀರಾವರಿ ಯೋಜನೆಯಿಂದಾಗಿ ಈ ಭಾಗದಲ್ಲಿ ಮೂರರಿಂದ ನಾಲ್ಕು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನೀರಾವರಿ ಬೆಳೆ ಮಾಡುವುದರ ಜೊತೆಗೆ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದರು.

ಅಂತರ್ಜಲ ಕುಸಿತದಿಂದಾಗಿ ಕುಡಿಯುವ ನೀರಿನ ಯೋಜನೆ ಹಾಗೂ ಕೃಷಿ ಬಳಕೆಯ ಕೊಳವೆಬಾವಿಗಳು ನೀರಿಲ್ಲದೆ ಬತ್ತಿದ್ದವು. ಈ ಏತನೀರಾವರಿ ಯೋಜನೆಯಿಂದಾಗಿ ಮತ್ತೆ ಈ ಭಾಗದಲ್ಲಿ ನಾಲೆಗಳಲ್ಲಿ ನೀರು ಹರಿಯುವುದರಿಂದ ಅಂತರ್ಜಲದ ಮಟ್ಟ ಹೆಚ್ಚಾಗಿ ಕೊಳವೆಬಾವಿಗಳು ಚೇತರಿಸಿಕೊಳ್ಳಲಿವೆ ಎಂದು ತಿಳಿಸಿದರು.

ನಂತರ ಮೈಮುಲ್‌ ಅಧ್ಯಕ್ಷ ಕೆ.ಜಿ.ಮಹೇಶ್‌ ಮಾತನಾಡಿ, ಕೆ.ಆರ್‌.ನಗರ ತಾಲೂಕಿನಲ್ಲಿ ಇದೂವರೆಗೂ 140 ಡೇರಿಗಳನ್ನು ಸ್ಥಾಪಿಸಲಾಗಿದ್ದು, ಮೊದಲನೆ ಅಥವಾ ಎರಡನೇ ವಾರದಲ್ಲಿ ಉತ್ಪಾದಕರಿಗೆ ಹಣ ಬಟವಾಡೆ ಮಾಡಲಾಗುತ್ತದೆ. ಪ್ರತಿದಿನ 9.8 ಲಕ್ಷ ಲೀಟರ್‌ ಹಾಲು ಬರುತ್ತಿದ್ದು, 3 ಲಕ್ಷ ಲೀಟರ್‌ ಹಾಲು ಮಾರಾಟ ಮಾಡಲಾಗುತ್ತಿದ್ದು, 1.50 ಲಕ್ಷ ಲೀಟರ್‌ ಹಾಲನ್ನು ಪೌಡರ್‌ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Advertisement

ನಮ್ಮ ರಾಜ್ಯವಲ್ಲದೆ ಕೇರಳ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಗೆ ಬೇಸಿಗೆಯಲ್ಲಿ ಅತಿ ಹೆಚ್ಚು ಹಾಲಿನ ಪೌಡರ್‌ ಸರಬರಾಜು ಮಾಡುತ್ತಿದ್ದೇವೆ. ಸಹಕಾರ ಸಂಘಕ್ಕೆ ಪ್ರತಿಯೊಬ್ಬರ ಸಹಕಾರ ಮತ್ತು ಗುಟ್ಟಮಟ್ಟದ ಹಾಲನ್ನು ಸರಬರಾಜು ಮಾಡಿದ್ದಾಗ ಮಾತ್ರ ಸಹಕಾರ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಸಾ.ರಾ.ಮಹೇಶ್‌, ಮೈಮುಲ್‌ ಅಧ್ಯಕ್ಷ ಕೆ.ಜಿ.ಮಹೇಶ್‌, ನಿರ್ದೇಶಕ ಎ.ಟಿ.ಸೋಮಶೇಖರ್‌ ಅವರನ್ನು  ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಮೈಮುಲ್‌ ನಿದೇರ್ಶಕ ಎ.ಟಿ.ಸೋಮಶೇಖರ್‌, ಗ್ರಾಪಂ ಅಧ್ಯಕ್ಷೆ ಗೌರಮ್ಮ, ಸದಸ್ಯರಾದ ಆನಂದ, ಜೆಡಿಎಸ್‌ ಮುಖಂಡ ಮಿರ್ಲೆ ಧನಂಜಯ, ಮೇಲೂರು ನರೇಂದ್ರ, ಸಿಡಿಸಿ ಅಧ್ಯಕ್ಷ ಅನೀಫ್ಗೌಡ, ಡೇರಿ ಅಧ್ಯಕ್ಷ ಮಹೇಂದ್ರ, ಕಾರ್ಯದರ್ಶಿ ರವಿಚಂದ್ರ, ಗ್ರಾಪಂ ಸದಸ್ಯರಾದ ಮಂಗಳಮ್ಮ, ತುಳಸಿರಾಮೇಗೌಡ, ಅಭಿಲಾಷ್‌, ಮಮತಾ, ಡೈರಿ ನಿರ್ದೇಶಕರಾದ ವೃಷಭೇಂದ್ರ, ಪಟೇಲ್‌ ರಾಜಪ್ಪ, ಮಂಜೇಶ್‌, ರೂಪಾ, ಜಮುನಾ, ಹೋಟೆಲ್‌ ನಂಜಪ್ಪ, ನಟರಾಜ್‌, ಮೋಹನ್‌ಕುಮಾರ್‌ ಇತರರು ಉಪಸ್ಥಿತ‌ರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next