ಕೊಪ್ಪಳ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಂಡರಗಿ ಶಾಖೆಯ ಕಾಲುವೆಯ ಮೂಲಕ ಕೊಪ್ಪಳ ತಾಲೂಕಿನ 14 ಕೆರೆಗಳನ್ನು ತುಂಬಿಸುವುದಕ್ಕೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದ್ದು, ಇದಕ್ಕಾಗಿ22.15 ಕೋಟಿ ರೂ. ವೆಚ್ಚವಾಗಲಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಕವಲೂರು, ಮುರ್ಲಾಪುರ, ಘಟರಡ್ಡಿಹಾಳ, ಹಟ್ಟಿ, ಬೆಳಗಟ್ಟಿ, ಹಿರೇಸಿಂದೋಗಿ, ಹಂದ್ರಾಳ, ಕೋಳೂರು ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಅತಿಯಾದ ಮಳೆಯಾಗಿ, ತುಂಗಭದ್ರಾ, ಸಿಂಗಟಾಲೂರುಜಲಾಶಯ ಭರ್ತಿಯಾಗಿ, ಬಳಿಕ ಹೆಚ್ಚುವರಿ ನೀರು ಹರಿದು ಹೋಗುವ ಸಮಯದಲ್ಲಿ ಈ ಕೆರೆಗಳನ್ನು ತುಂಬಿಸಲಾಗುತ್ತದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯಕಾಲುವೆಯಿಂದ ಮೂರು ಪಾಯಿಂಟ್ ಬಳಿಯಿಂದ ಕೆರೆಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಇದರಿಂದ ನೀರಾವರಿಯೂ ಆಗುತ್ತದೆ. ಜೊತೆಗೆ ಅಂತರ್ಜಲದ ಮಟ್ಟವೂ ವೃದ್ಧಿಸುತ್ತದೆ. ಸಿಂಗಟಾಲೂ ಏತನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ನಮ್ಮ ಕ್ಷೇತ್ರದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಲಾದ್ದು, ಇದರಿಂದ 25 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಇದು ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದರು.
ಬೆಟಗೇರಿ, ಬಹದ್ದೂರಬಂಡಿ ಸಮಸ್ಯೆ ಇತ್ಯರ್ಥ: ಅಳವಂಡಿ-ಬೆಟಗೇರಿ ಏತನೀರಾವರಿ ಹಾಗೂ ಬಹದ್ದೂರಬಂಡಿ ಏತ ನೀರಾವರಿ ಸಮಸ್ಯೆಯನ್ನು ಇತ್ಯರ್ಥ ಮಾಡಿದ್ದೇವೆ. ಸ್ಥಳೀಯರ ಬೇಡಿಕೆಯಂತೆ ಬೆಟಗೇರಿ ಗ್ರಾಮ ವ್ಯಾಪ್ತಿಯ ರೈತರಿಗೆ ಇನ್‌ಟೆಕ್ ಪಂಪ್ ಮೂಲಕ ನೀರಾವರಿ ಯೋಜನೆ ಮಾಡಲಾಗಿದೆ. ಜಿಲ್ಲಾ ಸಚಿವರನ್ನೊಳಗೊಂಡಂತೆ ಎಲ್ಲರೂ ಸಭೆ ನಡೆಸಿ ಸಬ್‌ಮರ್ಸಿಬಲ್ ಪಂಪ್ ಮೂಲಕ ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸಲಾಗಿದೆ. ಈ ಮೂಲಕ ಬೆಟಗೇರಿ ಏತನೀರಾವರಿ ಯೋಜನೆಯ ಸಮಸ್ಯೆ ಇತ್ಯರ್ಥ ಮಾಡಲಾಗಿದೆ ಎಂದರು.
ಹಿರೇಹಳ್ಳದ ಉದ್ದಕ್ಕೂ ಬ್ಯಾರೇಜ್: ಹಿರೇಹಳ್ಳ ನದಿಯುದ್ದಕ್ಕೂ ಸರಣಿ ಬ್ಯಾರೇಜ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಸುಮಾರು 6-7 ಬ್ಯಾರೇಜ್‌ಗಳ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಮುಗಿದು, ಕಾಮಗಾರಿ ಪ್ರಗತಿಯಲ್ಲಿದೆ. ಇದರಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಕಾರ್ಯ ಶ್ಲಾಘನೀಯ. ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರು ಅನುದಾನ ನೀಡುವ ಮೂಲಕ ಕಾಮಗಾರಿ ಪ್ರಾರಂಭಕ್ಕೆ ಕಾರಣವಾಗಿದ್ದಾರೆ ಎಂದರು.
ಹಿರೇಹಳ್ಳಕ್ಕೂ ಹಿನ್ನೀರು: ಹುಲಿಕೆರೆಯಲ್ಲಿ ವರ್ಷ ಪೂರ್ತಿ ನೀರು ಇರುವಂತೆ ನೋಡಿಕೊಳ್ಳಲು ವಿಶೇಷ ಯೋಜನೆ ರೂಪಿಸಲಾಗುತ್ತಿದೆ. ತುಂಗಭದ್ರಾ ನೀರಿನ ಮೂಲಕ ನೀರು ತುಂಬಿಸುವುದು, ಹಿರೇಹಳ್ಳಕ್ಕೂ ತುಂಗಭದ್ರಾ ಜಲಾಶಯದಿಂದ ನೀರು ತುಂಬಿಸುವ ಯೋಜನೆಯೂ ಸರ್ಕಾರದ ಮುಂದಿದೆ. ಕೆರೆ ತುಂಬಿಸುವ ಯೋಜನೆಯಲ್ಲಿ ಇದನ್ನು ಅಳವಡಿಸಿಕೊಳ್ಳಲಾಗಿದ್ದು, ಈ ಮೂಲಕ ತಾಲೂಕಿನ ಎಲ್ಲ ಭಾಗವೂ ನೀರಾವರಿಗೆ ಒಳಪಡುತ್ತದೆ ಎಂದರು.