Advertisement

ಹಟ್ಟಿಯಂಗಡಿ ಗ್ರಾಮದಾದ್ಯಂತ ನೀರಿಗೆ ಹಾಹಾಕಾರ

11:09 PM May 13, 2019 | Team Udayavani |

ಹಟ್ಟಿಯಂಗಡಿ ಪಂಚಾಯತ್‌ಗೆ ಕೆಂಚನೂರು, ಕನ್ಯಾನ, ಹಟ್ಟಿಯಂಗಡಿ ಮೂರು ಗ್ರಾಮಗಳಿದ್ದು 114 ಕೆರೆಗಳು, 559 ಬಾವಿಗಳು ಇವೆ. 338 ಕುಟುಂಬಗಳು, 1,897 ಜನಸಂಖ್ಯೆಯಿದೆ. 120ರಷ್ಟು ನಳ್ಳಿನೀರಿನ ಸಂಪರ್ಕಗಳಿದ್ದು ಇಡೀ ಗ್ರಾಮದಲ್ಲಿ ನೀರಿನ ಬೇಡಿಕೆಯಿದೆ.

Advertisement

ಕುಂದಾಪುರ: ಇಲ್ಲಿ ತೀರಾ ಈಚಿನವರೆಗೆ ನೀರಿನ ಸಮಸ್ಯೆ ಇರಲಿಲ್ಲ. ಪಂಚಾಯತ್‌ ನೀರಿಗಿಂತ ಖಾಸಗಿ ನೀರು ನಂಬಿದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಬಹುತೇಕ ಮನೆಗಳಲ್ಲಿ ಬಾವಿಯಿದೆ. ಆದರೆ ಈ ಬಾರಿ ಅದೇನು ಬರಗಾಲ ಬಂದಿದೆಯೋ ಗೊತ್ತಿಲ್ಲ. ಯಾವ ಬಾವಿಗಳಲ್ಲೂ ನೀರಿಲ್ಲ. ಯಾರ ಮನೆಗೆ ಹೋದರೂ ನೀರಿಲ್ಲ. ಹೀಗಂತ ವಿವರಿಸುತ್ತಾರೆ ಹಟ್ಟಿಯಂಗಡಿಯ ಕಳವಿನ ಮನೆಯ ಮುತ್ತು ಅವರು.

ಜಲಕ್ಷಾಮದ ಕುರಿತು ಉದಯವಾಣಿ ಹಟ್ಟಿಯಂಗಡಿ ಗ್ರಾಮ ಪಂಚಾಯತ್‌ನ ಕಳವಿನ ಮನೆ, ಎಳಪನತೋಟ ಪ್ರದೇಶಗಳಿಗೆ ಭೇಟಿ ನೀಡಿದಾಗ ಪ್ರತೀ ಮನೆಯವರೂ ನೀರಿಗಾಗಿ ಹಾಹಾಕಾರವೆದ್ದಿದೆ ಎಂದರು. ಕಳವಿನ ಮನೆ ಭಾಗದಲ್ಲಿ ಸುಮಾರು 12 ಮನೆಗಳು, ಎಳಪನತೋಟ ಭಾಗದಲ್ಲಿ ಸುಮಾರು 18 ಮನೆಗಳಿವೆ. ಇಲ್ಲಿನ ಬಹುತೇಕ ಮನೆಗಳ ಸಮಸ್ಯೆಯೂ ನೀರಿನದ್ದೇ ಆಗಿದೆ.

ಮೊದಲು ಹೀಗಿರಲಿಲ್ಲ. ಇತ್ತೀಚಿನ ವರ್ಷ ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಚಂದ್ರ ಅವರು. ಮೊದಲು ಹೊಸ ಅಕ್ಕಿ ಊಟ ಆಗಿ 2 ತಿಂಗಳ ನಂತರ ಮಳೆ ಆಗಿ ಭತ್ತ ನಾಟಿ ಮಾಡಿದ್ದಿದೆ. ಆದರೆ ಈಗ ನೋಡಿ ಒಂದೇ ಬೆಳೆ, ಆಮೇಲೆ ನೀರೇ ಇಲ್ಲ. ಬೇಸಗೆಯಲ್ಲಿ ನೀರಿನ ಹೆಸರು ಹೇಳುವುದೇ ಕಷ್ಟ ಎಂದಾಗಿದೆ ಎನ್ನುತ್ತಾರೆ ಕೊರಗ ಅವರು. ನಳ್ಳಿಯಲ್ಲಿ ನೀರು ಬರುವುದಿಲ್ಲ. ಕೆಲವು ಮನೆ ಯವರು ಬಾವಿ ಇದೆ ಎಂದು ನಳ್ಳಿ ಸಂಪರ್ಕ ಪಡೆದಿಲ್ಲ. ಈಗ ನೋಡಿದರೆ ನಳ್ಳಿಯೂ ಇಲ್ಲ, ಬಾವಿಯೂ ಇಲ್ಲ. ಟ್ಯಾಂಕರ್‌ ನೀರೂ ಸಿಕ್ಕಿಲ್ಲ ಎಂದಾಗಿದೆ ಎನ್ನುತ್ತಾರೆ ಚಂದ್ರ ಅವರು.

ಆಶಾವಾದ
ಸೌಕೂರು ಸಿದ್ದಾಪುರ ಏತ ನೀರಾವರಿಗೆ, ವಾರಾಹಿ ನೀರಿಗಾಗಿ ಸರಕಾರ ಬಜೆಟ್‌ನಲ್ಲಿ 50 ಕೋ.ರೂ. ಅನುದಾನ ಮೀಸಲಿಟ್ಟಿದೆ. ಇದರಿಂದ ಈ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎನ್ನುವ ನಿರೀಕ್ಷೆ ಈ ಭಾಗದ ಜನರದ್ದು.

Advertisement

ನೀರಿಲ್ಲ
ಕೆಂಚನೂರು, ಕದರಿಗುಡ್ಡ, ನೆಂಪು, ಗುಡ್ರಿ, ಎಲ್ಕೋಡು, ಬಟ್ರಾಡಿ, ಜಾಡುಕಟ್ಟು, ಮಾವಿನಕಟ್ಟೆ, ಕಾಂಜೂರು, ಜನತಾ ಕಾಲನಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.
ಪಂಚಾಯತ್‌ ಲೆಕ್ಕದಲ್ಲಿ 850 ಅಡಿ ಕೊರೆದು ಎರಡು ಕೊಳವೆ ಬಾವಿ ತೆಗೆದರೂ ನೀರು ಸಿಕ್ಕಿಲ್ಲ. ಒಟ್ಟು 6 ಕೊಳವೆ ಬಾವಿಗಳಿದ್ದರೂ ಉಪಯೋಗಕ್ಕೆ ಸಿಕ್ಕಿರುವುದು 2 ಮಾತ್ರ. ಪಂಚಾಯತ್‌ನದ್ದು 4 ತೆರೆದ ಬಾವಿಗಳಿದ್ದು ಕುಡಿಯುವ ನೀರಿಗೆ ಆಶ್ರಯವಾಗಿದೆ. ಆದರೆ ಇಡೀ ಗ್ರಾಮದಿಂದ ಬೇಡಿಕೆ ಇರುವ ಕಾರಣ ಸಾಲುತ್ತಿಲ್ಲ.

ವಾರ್ಡ್‌ನವರ ಬೇಡಿಕೆ
– ಟ್ಯಾಂಕರ್‌ ಮೂಲಕ ಕೊಡುವ ನೀರು ಎಲ್ಲರಿಗೂ ನೀಡಬೇಕು.
– ಕೊಡುವ ನೀರಿನ ಪ್ರಮಾಣದ ಮಿತಿ ಹೆಚ್ಚಿಸಬೇಕು.
– ಶುದ್ಧ ಕುಡಿಯುವ ನೀರು ಕೊಡಬೇಕು.
– ಶಾಶ್ವತ ಯೋಜನೆ ರೂಪಿಸಬೇಕು.

ನೀರು ಖರೀದಿ
ಸತೀಶ್‌ ಅವರ ಮನೆಯಲ್ಲಿ ಮದುವೆ ಕಾರ್ಯಕ್ರಮ ಇತ್ತು. ಬಾವಿ ಇದ್ದರೂ ನೀರಿಲ್ಲ. ಕೊನೆಗೆ ಟ್ಯಾಂಕರ್‌ನಲ್ಲಿ ಹಣ ಕೊಟ್ಟು ನೀರು ಖರೀದಿಸಿ ಮದುವೆ ಸಮಾರಂಭ ನಡೆಸಲಾಯಿತು. ರಾಶಿ ಹಾಕಿದ ಬಟ್ಟೆಗಳು ನೋಡಿ ಹಾಗೆಯೇ ಇದೆ. ಒಗೆಯಲು ನೀರಿಲ್ಲ. ಪಾತ್ರೆ ತೊಳೆಯದೇ ಗೊತ್ತಿಲ್ಲ. ಪಡುವ ಪಾಡು ನೋಡಿ ಎನ್ನುತ್ತಾರೆ ಅವರು.

ಪರ್ಯಾಯ ಇಲ್ಲ
3-4 ದಿನಕ್ಕೊಮ್ಮೆ ನಳ್ಳಿಯಲ್ಲಿ ನೀರು ಬರುತ್ತದೆ. ಅದು ಯಾವುದಕ್ಕೂ ಸಾಲುವುದಿಲ್ಲ. ಸ್ವಂತ ಬಾವಿಗಳು ಅನೇಕರ ಮನೆ ಸಮೀಪ ಇದ್ದರೂ ಅವುಗಳಲ್ಲಿ ಎಂದೋ ನೀರಾರಿದೆ. ನಮ್ಮಲ್ಲಿರುವ ನೀರನ್ನೇ ಆಚೀಚೆ ಮನೆಯವರಿಗೂ ಅಷ್ಟಿಷ್ಟು ಎಂದು ಈ ವಠಾರದಲ್ಲಿ ಕೊಡಲಾಗುತ್ತಿದೆ. ನೀರು ಪ್ರಕೃತಿ ಕೊಟ್ಟದ್ದು. ಅದಕ್ಕೆ ಪರ್ಯಾಯ ಇಲ್ಲ ತಾನೇ ಎನ್ನುತ್ತಾರೆ ರಾಜು ಅವರು.

ನೀರು ಸಾಕಾಗುತ್ತಿಲ್ಲ
ಪಂಚಾಯತ್‌ನಿಂದ ನೀರು ಕೊಡುತ್ತಿದ್ದರೂ ಅದು ಸಾಕಾಗುತ್ತಿಲ್ಲ. ಸಾಕಷ್ಟು ಪ್ರಮಾಣದಲ್ಲಿ ನೀರು ಕೊಡಬೇಕು.
-ಲಲಿತಾ, ಕಳವಿನಮನೆ

ಅರ್ಜಿ ಬೇಕಿಲ್ಲ
ಟ್ಯಾಂಕರ್‌ ನೀರು ನೀಡಲು ಅರ್ಜಿ ಬೇಕೆಂದೇ ಇಲ್ಲ. ಅರ್ಜಿ ಇಲ್ಲದೆಯೂ ನೀಡಲಾಗುತ್ತಿದೆ. ಇಡೀ ಗ್ರಾಮದಲ್ಲಿ ನೀರಿನ ಬೇಡಿಕೆಯಿದ್ದು ಇಷ್ಟರವರೆಗೆ ಇಂತಹ ತೀವ್ರ ಸಮಸ್ಯೆ ಉಂಟಾಗಿರಲಿಲ್ಲ. 2 ಟ್ಯಾಂಕರ್‌ಗಳಲ್ಲಿ ನಿರಂತರವಾಗಿ ನೀರು ಪೂರೈಸಲಾಗುತ್ತಿದೆ. ಯಾರಿಗೂ ಕುಡಿಯುವ ನೀರು ಕೊಡುವುದಿಲ್ಲ ಎಂದು ಹೇಳುವ ಪ್ರಶ್ನೆಯೇ ಇಲ್ಲ.
– ರಿಯಾಜ್‌ ಅಹ್ಮದ್‌,
ಪಂ. ಅಭಿವೃದ್ಧಿ ಅಧಿಕಾರಿ

ಉದಯವಾಣಿ ಆಗ್ರಹ
ಟ್ಯಾಂಕರ್‌ ನೀರಿನ ಪ್ರಮಾಣ ಹೆಚ್ಚಿಸಬೇಕು. ನಳ್ಳಿಯಲ್ಲಿ ಬರದಿದ್ದರೆ, ಬಾವಿಯಲ್ಲಿ ನೀರಿಲ್ಲದಿದ್ದರೆ ಟ್ಯಾಂಕರ್‌ ನೀರು ನಿರಾಕರಿಸಬಾರದು.

ಮಾಹಿತಿ ನೀಡಿ
ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನ ಸಹಿತ
“ಉದಯವಾಣಿ’ ವಾಟ್ಸಪ್‌ ನಂಬರ್‌ 9148594259 ಬರೆದು ಕಳುಹಿಸಿ.

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next