ದೇವನಹಳ್ಳಿ: ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ದೇವನಾಯಕನಹಳ್ಳಿ ಗ್ರಾಮಸ್ಥರು ಮಳೆಗಾಲದಲ್ಲೂ ನೀರಿ ಸಮಸ್ಯೆ ಎದುರಾಗಿದ್ದು, ಕುಡಿಯುವ ನೀರಿಗಾಗಿ ಟ್ಯಾಂಕರ್ ಮೊರೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಸತತ ಬರಗಾಲದಿಂದ ಗ್ರಾಮದಲ್ಲಿ 1500ಅಡಿಗಳಿಗೂ ಹೆಚ್ಚು ಬೋರ್‌ವೆಲ್ ಕೊರೆಸಿದರೂ ನೀರು ಸಿಗದ ಸ್ಥಿತಿ ಎದುರಾಗಿದೆ. ದೇವನಾಯಕನಹಳ್ಳಿ ಗ್ರಾಮದಲ್ಲಿ ಶೇ.95ರಷ್ಟು ರೈತಾಪಿ ವರ್ಗವಿದ್ದು, ಜಾನುವಾರುಗಳಿಗೆ ನೀರು ಸಾಕಾಗುತ್ತಿಲ್ಲ. ಹೈನುಗಾರಿಕೆಗೆ ಅವಲಂಬಿಸಿರುವ ರೈತರ ಜಾನುವಾರುಗಳಿಗೆ ನೀರು ಸಿಗುದಂತಾಗಿದೆ.
ಕುಸಿದ ಅಂತರ್ಜಲ: ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು, ಮೋಟಾರು ಪಂಪ್‌ಸೆಟ್ ದುರಸ್ಥಿಯಾಗಿ ವಾರ ಕಳೆದರೂ ನೀರು ಸಿಗದೆ ಗಂಗವಾರ ಗ್ರಾಪಂಯಿಂದ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.ಆದರೆ ಗ್ರಾಮಸ್ಥರಿಗೆ ನೀರು ಸಾಕಾಗುತ್ತಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಮಳೆಗಾಲದಲ್ಲೂ ಟ್ಯಾಂಕರ್ ಮೂಲಕ ನೀರು ಹಿಡಿದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಜನರು ಕೆಲಸ ಕಾರ್ಯಗಳನ್ನು ಬಿಟ್ಟು ನೀರಿನ ಟ್ಯಾಂಕರ್‌ಗಳಿಗೆ ಕಾಯುವಂತಾಗಿದೆ. ಸಕಾಲಕ್ಕೆ ಮಳೆಯಾಗದಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ನೀರಿಗೆ ಆಹಾಕಾರ ಉಂಟಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಎತ್ತಿನಹೊಳೆ ಯೋಜನೆ ಜಾರಿಯಾಗಲಿ: ಒಂದು ವರ್ಷ ಉತ್ತಮ ಮಳೆ ಬಂದರೆ ಮತ್ತೂಂದು ವರ್ಷ ಬರಗಾಲದ ಛಾಯೆ ರೈತರನ್ನು ಕಾಡುತ್ತದೆ. ಸರ್ಕಾರ ಇನ್ನಾದರೂ ಈ ಪ್ರದೇಶಕ್ಕೆ ಕುಡಿಯುವ ನೀರಿನ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ, ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಗ್ರಾಮ ಬಿಟ್ಟು ಗುಳೇ ಹೋಗುವ ಪರಿಸ್ಥಿತಿ ಬರಬಹುದು ಎಮದು ಹೇಳಲಾಗುತ್ತಿದೆ. ಎತ್ತಿನಹೊಳೆ ಯೋಜನೆಯನ್ನು ತ್ವರಿತವಾಗಿ ಸರ್ಕಾರ ಜಾರಿಗೆ ತಂದರೆ ಈ ಭಾಗದ ಜನರಿಗೆ ಒಂದಿಷ್ಟು ನೀರು ಸಿಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಪೂರೈಸಲಾಗುತ್ತಿದೆ. ಸಮಸ್ಯೆ ಉದ್ಭವಿಸಿದರೆ ಅಂತಹ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅ ಧಿಕಾರಿಗಳು ಹೇಳುತ್ತಾರೆ.
ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆಂದು ಹೇಳುವ ಜನಪ್ರತಿನಿಧಿಗಳು ಎಲ್ಲಿ ಆದ್ಯತೆ ನೀಡುತ್ತಿದ್ದಾರೆ. ಇಲ್ಲಿ ಯಾವುದೇ ನದಿ ಮೂಲಗಳು ಇಲ್ಲ. 1800ಕ್ಕೂ ಹೆಚ್ಚು ಅಡಿಗಳಷ್ಟು ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ನೀರಿನ ಸಮಸ್ಯೆಯಿಂದಾಗಿ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಕಠಿಣ ಪರಿಸ್ಥಿತಿ ಎದುರಾಗಿದೆ.
-ರತ್ನಮ್ಮ ಗ್ರಾಮಸ್ಥೆ
ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಕುಡಿಯುವ ನೀರಿನ ಭವಣೆ ನಿವಾರಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಗ್ರಾಮದ ನೀರಿನ ಸಮಸ್ಯೆಯ ಬಗ್ಗೆ ಶಾಸಕರ ಗಮನಕ್ಕೂ ತಂದಿದ್ದೇವೆ. ಎಲ್ಲೆಡೆ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿದ್ದು,ಮೋಟಾರ್ ಪಂಪ್‌ಸೆಟ್ ದುರಸ್ಥಿಯಾಗಿದೆ. ಇದಕ್ಕೆ ಹೊಸದಾಗಿ ಮೋಟಾರ್ ಪಂಪ್‌ಸೆಟ್ ಅಳವಡಿಸುವುದಕ್ಕೆ ನಾವು ತಾಪಂ ಹಾಗೂ ಕಾರ್ಯಪಾಲಕ ಅಭಿಯಂತರ ಅವರಿಗೂ ತಿಳಿಸಿದ್ದೇವೆ.
-ಮೇನಕಾ ಕೃಷ್ಣಮೂರ್ತಿ, ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷೆ
ಗ್ರಾಮಸ್ಥರಿಗೆ ನೀರಿನ ಸಮಸ್ಯೆಯಾಗದಂತೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡುತ್ತಿದ್ದೇವೆ. ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲಾಗುತ್ತದೆ.
-ಶ್ರೀನಿವಾಸ್ ಮೂರ್ತಿ, ಪಿಡಿಒ